ಲೋಕಾಪುರ ಪಟ್ಟಣದ ಸರ್ಕಾರಿ ಉರ್ದು ಉನ್ನತೀಕರಿಸಿದ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಜಾಕಿರಹುಸೇನ ಬಾಗವಾನ ಮತ್ತು ಶಿಕ್ಷಕ ಸುರೇಶ ಅಂಗಡಿ ಅವರನ್ನು ಸನ್ಮಾನಿಸಲಾಯಿತು. ಶಬ್ಬೀರ ಅತ್ತಾರ, ಹಸನಡೋಂಗ್ರಿ ಮಹಾಲಿಂಗಪುರ, ಗುಲಾಬಸಾಬ ಅತ್ತಾರ ಇತರರಿದ್ದರು. 
ರಾಜ್ಯ

ಸಮಾಜದಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠ

ಪ್ರಮುಖ ಮುಖ್ಯಾಂಶಗಳು

  • ಅಲ್ಲಾಸಾಬ ಯಾದವಾಡ ಹೇಳಿಕೆ
  • ಗುರುವಂದನಾ ಸಮಾರಂಭ
ಲೋಕಾಪುರ: ಶಿಕ್ಷಕ ವೃತ್ತಿ ಸಮಾಜದಲ್ಲಿ ಅತ್ಯಂತ ಶ್ರೇಷ್ಠ ಮತ್ತು ಪವಿತ್ರವಾದದ್ದು, ಕೇವಲ ಅಕ್ಷರ ಜ್ಞಾನವಷ್ಟೇ ಅಲ್ಲದೆ, ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ, ಮಾನವೀಯ ಮೌಲ್ಯಗಳು ಮತ್ತು ಜೀವನದ ಪಾಠಗಳನ್ನು ಕಲಿಸಿ, ದೇಶದ ಸದೃಢ ಭವಿಷ್ಯ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿರುತ್ತದೆ ಎಂದು ಎ.ಎಂ. ಯಾದವಾಡ ಶಿಕ್ಷಣ ಸಂಸ್ಥೆ  ಅಧ್ಯಕ್ಷ ಅಲ್ಲಾಸಾಬ ಯಾದವಾಡ ಹೇಳಿದರು. 
ಪಟ್ಟಣದ ಸರ್ಕಾರಿ ಉರ್ದು ಉನ್ನತೀಕರಿಸಿದ ಪ್ರೌಢಶಾಲೆ ಮುಖ್ಯ ಶಿಕ್ಷಕ ಜಾಕಿರಹುಸೇನ ಬಾಗವಾನ ಮತ್ತು ಶಿಕ್ಷಕ ಸುರೇಶ ಅಂಗಡಿ ನಿವೃತ್ತಿ ನಿಮಿತ್ತ ಹಮ್ಮಿಕೊಂಡಿದ್ದ ಗುರುವಂದನಾ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳ ಅಜ್ಞಾನದ ಕತ್ತಲೆ ದೂರಮಾಡಿ, ಜ್ಞಾನದ ಬೆಳಕು ನೀಡುವವರು ಶಿಕ್ಷಕರು. ಕುವೆಂಪು ಅವರ ಆಶಯದಂತೆ, ಮುಂದೆ ಗುರಿ ಹಿಂದೆ ಗುರು ಇದ್ದಾಗ ಮಾತ್ರ ವಿದ್ಯಾರ್ಥಿ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ರಾಜಶೇಖರ ಮುತ್ತಿನಮಠ ಮಾತನಾಡಿ, ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಭಾವನಾತ್ಮಕ ಮತ್ತು ಸ್ಮರಣೀಯ ಕ್ಷಣವಾಗಿದೆ. ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸಿಕೊಟ್ಟ ಶಿಕ್ಷಕರ ನಿಸ್ವಾರ್ಥ ಸೇವೆಯನ್ನು ಸ್ಮರಿಸಿ, ಅವರನ್ನುಗೌರವಿಸುವುದು ಭಾರತೀಯ ಸಂಪ್ರದಾಯವಾಗಿದೆ ಎಂದರು. 
ಅಂಜುಮನ್-ಎ-ಇಸ್ಲಾಂ ಕಮಿಟಿ ಅಧ್ಯಕ್ಷ ಹಸನ್ ಡೋಂಗ್ರಿ ಮಹಾಲಿಂಗಪುರ ಮಾತನಾಡಿ, ಗುರುವಿನ ಸ್ಥಾನ ದೇವರಿಗಿಂತಲೂ ಶ್ರೇಷ್ಠ. ನಿವೃತ್ತಿ ಜೀವನ ಆರೋಗ್ಯ, ಆನಂದಮಯವಾಗಿರಲಿ ಎಂದರು.  
ಮುಖ್ಯ ಶಿಕ್ಷಕ ಜಾಕಿರಹುಸೇನ ಬಾಗವಾನ ಮತ್ತು ಶಿಕ್ಷಕ ಸುರೇಶ ಅಂಗಡಿ ಜಂಟಿಯಾಗಿ ಮಾತನಾಡಿ, ಹಲವು ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು ನಮ್ಮ ವೃತ್ತಿಗೆ ಅನುಗುಣವಾಗಿ ಶಿಸ್ತಿನಿಂದ ಬದುಕನ್ನು ಸಾಗಿಸಿದ್ದೇವೆ. ನಮ್ಮ ಅವಧಿಯಲ್ಲಿ ಶಿಕ್ಷಣ ಕಲಿತ ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಲಿ ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.
ನಾಲ್ಕು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಸ್ವಂತ ಖರ್ಚಿನಲ್ಲಿ ನೀಡುತ್ತಿರುವ ಶಿಕ್ಷಕಿ ರಜಿಯಾ ಮುಲ್ಲಾ ಅವರನ್ನು ಸನ್ಮಾನಿಸಲಾಯಿತು. 
ಎಸ್‌ಡಿಎಂಸಿ ಅಧ್ಯಕ್ಷ ಶಬ್ಬೀರ ಅತ್ತಾರ, ಎಸ್‌ಡಿಎಂಸಿ ಸದಸ್ಯರಾದ ನಿಯಾಜ ಮುಧೋಳ, ಸಲೀಂ ಗುಳೆದಗುಡ್ಡ, ಅಂಜುಮನ್ ಇಸ್ಲಾಂ ಕಮಿಟಿ ಸದಸ್ಯರಾದ ಗುಲಾಬಸಾಬ ಅತ್ತಾರ, ರೆಹೆಮಾನ್ ತೊರಗಲ್, ಶಬ್ಬೀರ ಚೌಧರಿ, ಕುತುಬು ಅತ್ತಾರ, ಸೈಯದ ಗುದಗಿ, ನಜೀರ ತೊರಗಲ್, ರಿಯಾಜ ರೋಷಣಿ, ಜಾಕಿರ ಅತ್ತಾರ, ಸುಲ್ತಾನ ಕಲಾದಗಿ, ಸುಜಾತಾ ಜೋಶಿ, ಶಕುಂತಲಾ ಹುಲ್ಲಣ್ಣವರ, ಎಸ್.ಎಂ.ಹಡಪದ, ಮಂಜುಳಾ ಉದಪುಡಿ ಇತರರಿದ್ದರು.