- ಈ ವರ್ಷದ ವರ್ಗಾವಣೆ ಆದೇಶಕ್ಕಾಗಿ ಶಿಕ್ಷಕರು ಕಾಯುತ್ತಿದ್ದು, ಆದೇಶ ಹೊರಡಿಸಬೇಕೆಂದು ಮನವಿ
- ಡಿಸೆಂಬರ್-2025ರ ಅಂತ್ಯಕ್ಕೆ ಶಿಕ್ಷಕರ ವೇಯ್ಟೇಜ್ ಅಂಕಗಳನ್ನು ತಂತ್ರಾಂಶದಲ್ಲಿ ನಮೂದಿಸುವಂತೆ ಸೂಚನೆ ನೀಡಿ ಅರ್ಹರ ಮಾಹಿತಿಯನ್ನು ಶಾಲಾ ಶಿಕ್ಷಣ ಇಲಾಖೆಯು ಪಡೆದುಕೊಂಡಿದೆ.
- ಮುಂದಿನ ವರ್ಷ ಜನಗಣತಿ ನಡೆಯುವ ಸಾಧ್ಯತೆಗಳಿವೆ. ಒಂದು ವೇಳೆ ಮುಂದಿನ ವರ್ಷವೂ ವರ್ಗಾವಣೆಯನ್ನು ಮುಂದೂಡಿದರೆ, ಅರ್ಹ ಶಿಕ್ಷಕರಿಗೆ ಅನ್ಯಾಯ
ಬೆಂಗಳೂರು ಕಳೆದ ಬೇಸಿಗೆ ರಜೆಯಲ್ಲಿ ಆಗಬೇಕಿದ್ದ ಶಿಕ್ಷಕರ ವರ್ಗಾವಣೆಯನ್ನು ಇನ್ನೂ ಮಾಡಿಲ್ಲ. ಶಾಲಾ ಶಿಕ್ಷಣ ಇಲಾಖೆಯು ಈಗಲಾದರೂ ವರ್ಗಾವಣೆ ಆದೇಶ ಹೊರಡಿಸುವ ಮೂಲಕ ‘ಶಿಕ್ಷಕರ ದಿನಾಚರಣೆ’ಗೆ ಕೊಡುಗೆ ನೀಡಬೇಕೆಂದು ಶಿಕ್ಷಕರ ಒತ್ತಾಯಿಸಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದಿದ್ದ 2024-25ನೇ ಸಾಲಿನ ವರ್ಗಾವಣೆಯನ್ನು ಈ ವರ್ಷದ ಏಪ್ರಿಲ್‌ನಲ್ಲಿ ಕಾರ್ಯಸ್ಥಾನಗಳ ಕಾರ್ಯಾದೇಶ ನೀಡಲಾಗಿದೆ. ಹೀಗಾಗಿ, ಈ ವರ್ಷದ ವರ್ಗಾವಣೆ ಆದೇಶಕ್ಕಾಗಿ ಶಿಕ್ಷಕರು ಕಾಯುತ್ತಿದ್ದು, ಆದೇಶ ಹೊರಡಿಸಬೇಕೆಂದು ಮನವಿ ಮಾಡಿದ್ದಾರೆ.
2025-26ನೇ ಸಾಲಿನ ಶಿಕ್ಷಕರ ಸಾಮಾನ್ಯ ವರ್ಗಾವಣೆ ಸಂಬಂಧ ಪೂರ್ವಭಾವಿ ಚಟುವಟಿಕೆಗಳ ಭಾಗವಾಗಿ ಡಿಸೆಂಬರ್-2025ರ ಅಂತ್ಯಕ್ಕೆ ಶಿಕ್ಷಕರ ವೇಯ್ಟೇಜ್ ಅಂಕಗಳನ್ನು ತಂತ್ರಾಂಶದಲ್ಲಿ ನಮೂದಿಸುವಂತೆ ಸೂಚನೆ ನೀಡಿ ಅರ್ಹರ ಮಾಹಿತಿಯನ್ನು ಶಾಲಾ ಶಿಕ್ಷಣ ಇಲಾಖೆಯು ಪಡೆದುಕೊಂಡಿದೆ.
ದತ್ತಾಂಶಗಳ ಅಪ್‌ಡೇಟ್, ಶಿಕ್ಷಕರ ವೇಯ್ಟೇಟ್ ಅಂಕಗಳ ಪ್ರಕಟಣೆ, ಆಕ್ಷೇಪಣೆ ಸ್ವೀಕಾರ, ಆಕ್ಷೇಪಣೆಗಳನ್ನು ಡಿಡಿಒ ದಾಖಲೆಗಳೊಂದಿಗೆ ಪರಿಶೀಲನೆ ಮತ್ತು ಸರಿಯಾದ ಮಾಹಿತಿಯನ್ನು ತಂತ್ರಾಂಶದಲ್ಲಿ ದಾಖಲಿಸಲಾಗಿದೆ. ಈ ದತ್ತಾಂಶಗಳನ್ನು ಸ್ವೀಕರಿಸಿ ಮುಂದಿನ ಚಟುವಟಿಕೆಗಳಾದ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ಒಳಬರುವವರಿಗೆ ಆಯ್ಕೆ ಪ್ರಕ್ರಿಯೆ, ವಲಯ ವರ್ಗಾವಣೆ ಮತ್ತು ಸಾಮಾನ್ಯ ವರ್ಗಾವಣೆಗೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಬೇಕೆಂದು ಶಿಕ್ಷಕರ ಮನವಿಯಾಗಿದೆ.
ಈಗಲೇ ಆದೇಶಕ್ಕೆ ಶಿಕ್ಷಕರ ಒತ್ತಾಯವೇಕೆ?
ಸರ್ಕಾರವು ಈ ವರ್ಷದ ಏಪ್ರಿಲ್‌ನಲ್ಲಿ ಮನೆಗಣತಿ, ಜಾತಿಗಣತಿ ಹೆಸರಿನಲ್ಲಿ ವರ್ಗಾವಣೆಯನ್ನು ಮುಂದೂಡಿದೆ. ಈಗ ಎಸ್‌ಐಆರ್ ನಡೆಯುತ್ತಿದೆ. ಮುಂದಿನ ವರ್ಷ ಜನಗಣತಿ ನಡೆಯುವ ಸಾಧ್ಯತೆಗಳಿವೆ. ಒಂದು ವೇಳೆ ಮುಂದಿನ ವರ್ಷವೂ ವರ್ಗಾವಣೆಯನ್ನು ಮುಂದೂಡಿದರೆ, ಅರ್ಹ ಶಿಕ್ಷಕರಿಗೆ ಅನ್ಯಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಹಿಂದಿನ ವರ್ಷದಂತೆ ವರ್ಗಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಮುಂದಿನ ವರ್ಷ ಏಪ್ರಿಲ್‌ನಲ್ಲಿ ವರ್ಗಾವಣೆಯಾದ ಸ್ಥಳಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಿ ವರ್ಗಾವಣೆ ಪ್ರಕ್ರಿಯೆಯನ್ನು ಕೈಗೊಳ್ಳಬೇಕೆಂದು ಒತ್ತಾಯವಾಗಿದೆ.