Teachers should not misguide.
ತಿಪಟೂರು: ಗುರು&ಶಿಷ್ಯರ ಸಂಬಂಧ ಅವಿನಾಭಾವವಾದುದು. ಗುರುಗಳು ತಮ್ಮ ಕೆಲಸವನ್ನು ಮಾತ್ರ ಮಾಡುವುದಿಲ್ಲ ಒಬ್ಬ ಮಾರ್ಗದರ್ಶಿಯಾಗಿ ವಿದ್ಯಾರ್ಥಿಯನ್ನು ಉತ್ತಮ ಪ್ರಜೆಯಾಗಿ ರೂಪಿಸಲು ಶ್ರಮಿಸುತ್ತಾನೆ ಎಂದು ಕಿರುತೆರೆ ಹಾಗೂ ರಂಗಭೂಮಿ ಕಲಾವಿದ ಶ್ರೀನಾಥ್ ವಸಿಷ್ಠ ಹೇಳಿದರು.
ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಕಲ್ಪತರು ಪ್ರಥಮದರ್ಜೆ ಕಾಲೇಜು, ಪಲ್ಲಾಗಟ್ಟಿ ಅಡವಪ್ಪ ಕಾಲೇಜು ಮತ್ತು ಕಲ್ಪತರು ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಆಯೋಜಿಸಿದ್ದ ಕಲ್ಪವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಲ್ಪತರು ವಿದ್ಯಾಸಂಸ್ಥೆಯಿಂದ ಇಷ್ಟು ಅದ್ದೂರಿಯಾಗಿ ಕಲ್ಪವೈಭವ ಕಾರ್ಯಕ್ರಮ ಆಯೋಜಿಸಿರುವುದು ನೋಡುಗರ ಕಣ್ಣಿಗೆ ಹಬ್ಬದ ವಾತಾವರಣ ಮೂಡಿಸಿದೆ ಎಂದರು.
ಒಂದು ಮಗು ಪದವಿ ಮುಗಿಸುವಷ್ಟರಲ್ಲಿ 50ಕ್ಕೂ ಹೆಚ್ಚು ಶಿಕ್ಷಕರಿಂದ ಪಾಠ ಕಲಿತು ಬೆಳೆಯುತ್ತದೆ. ವಿದ್ಯಾರ್ಥಿ ಶಿಕ್ಷಣ ಪಡೆದು ದೊಡ್ಡವನಾದ ಮೇಲೆ ಸಮಾಜ ಸೇವೆ ಮಾಡಲಿ, ದೇಶಕ್ಕೆ ಉತ್ತಮ ಪ್ರಜೆಯಾಗಲಿ ಎಂಬ ಬಯಕೆ, ತುಡಿತ ಎಲ್ಲ ಶಿಕ್ಷಕರಲ್ಲಿರುತ್ತದೆ. ತಪ್ಪುದಾರಿ ತುಳಿಯಿರಿ ಎಂದು ಯಾವುದೇ ಶಿಕ್ಷಕರು ಹೇಳಿಕೊಡುವುದಿಲ್ಲ. ಇದನ್ನು ಅರ್ಥಮಾಡಿಕೊಳ್ಳುವುದು ವಿದ್ಯಾರ್ಥಿಗಳ ಕೈಯಲ್ಲಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಎಚ್.ಜಿ.ಸುಧಾಕರ್ ಮಾತನಾಡಿ, ಕಲ್ಪತರು ವಿದ್ಯಾಸಂಸ್ಥೆಯ ಕಲೆ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ತಾಯಿ ಬೇರು ಇದ್ದಂತೆ. ಮೂರೂ ಕಾಲೇಜು ಸೇರಿ ಒಂದೇ ಕಾರ್ಯಕ್ರಮ ಮಾಡಲಾಗುತ್ತಿದೆ. ಸಂಸ್ಥೆಯ ಎಲ್ಲ ವಿಭಾಗಗಳಿಗೆ ಅತ್ಯಾವಶ್ಯಕವಾಗಿ ಬೇಕಾಗಿರುವ ಎಲ್ಲ ಸವಲತ್ತುಗಳನ್ನೂ ಸಂಸ್ಥೆ ಒದಗಿಸುತ್ತಿದೆ ಎಂದರು.
ಮೂರೂ ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾಂಸತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ರ್ಯಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ, ಕ್ರೀಡೆ ಮತ್ತು ಸಾಂಸತಿಕ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು. ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಸೋಮಶೇಖರ್ ವಾರ್ಷಿಕ ವರದಿ ಓದಿದರು. ಪಲ್ಲಾಗಟ್ಟಿ ಕಾಲೇಜಿನ ಪ್ರಾಂಶುಪಾಲ ಡಾ.ವಿಜಯಕುಮಾರಿ, ತಹಸೀಲ್ದಾರ್ ಜಿ.ವಿ.ಮೋಹನ್ ಕುಮಾರ್, ಸಂಸ್ಥೆಯ ಉಪಾಧ್ಯಕ್ಷರಾದ ಜಿ.ಪಿ.ದೀಪಕ್, ಬಾಗೇಪಲ್ಲಿ ನಟರಾಜು, ಟಿ.ಎಸ್.ಬಸವರಾಜು. ಕಾರ್ಯದರ್ಶಿಗಳಾದ ಜಿ.ಎಸ್.ಉಮಾಶಂಕರ್, ಎಂ.ಆರ್.ಸಂಗಮೇಶ್, ಟಿ.ಯು.ಜಗದೀಶಮೂರ್ತಿ, ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಗುಂಡಪ್ಪ ಇದ್ದರು.