Class 8 Bengaluru student dies by suicide 
ರಾಜ್ಯ

'ಅಮ್ಮ ಕ್ಷಮಿಸು.. ನನ್ನಮೇಲೆ ಹೊರಿಸಿದ ಆರೋಪಗಳನ್ನು ಸಹಿಸಿ ಬದುಕಲಾಗುತ್ತಿಲ್ಲ'; ಡೆತ್​​ನೋಟ್ ಬರೆದಿಟ್ಟು 8ನೇ ತರಗತಿಯ ವಿದ್ಯಾರ್ಥಿನಿ ಆತ್ಮಹತ್ಯೆ..Anekal

ಪ್ರಮುಖ ಮುಖ್ಯಾಂಶಗಳು

  • ಆನೇಕಲ್ ತಾಲ್ಲೂಕಿನ ಮರಸೂರು ಮಡಿವಾಳದಲ್ಲಿ ಶಿಕ್ಷಕಿ ಬೈದಿದಕ್ಕೆ ವಿಧ್ಯಾರ್ಥಿನಿ ಆತ್ಮಹತ್ಯೆ ಆರೋಪ
  • ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವಿಧ್ಯಾರ್ಥಿನಿ ಮಧುಶ್ರೀ
  • ಮನಸ್ಸಿಗೆ ಹೆಚ್ಚು ನೋವಾಗಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ ಎಂದು ಬರೆದಿಟ್ಟ ಬಾಲಕಿ
  • ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ಆನೇಕಲ್: 'ಅಮ್ಮ ನನ್ನನ್ನು ಕ್ಷಮಿಸಿ ಬಿಡು ಈ ಭೂಮಿ ಮೇಲೆ ಬದುಕುವ ಅರ್ಹತೆ ನನಗಿಲ್ಲ. ಶಾಲೆಯಲ್ಲಿ ನಡೆದ ಘಟನೆ ನನ್ನ ಮನಸ್ಸಿಗೆ  ನೋವುಂಟು ಮಾಡಿದೆ. ನನ್ನ ಮೇಲೆ ಹೊರಿಸಿದ ಇಲ್ಲಸಲ್ಲದ ಆರೋಪಗಳನ್ನು ಹೊತ್ತು ನನಗೆ ಬದುಕಲು ಸಾಧ್ಯವಿಲ್ಲ' ಹೀಗೆಂದು ಡೆತ್​​​​​ನೋಟ್​ ಬರೆದಿಟ್ಟು(Anekal  student dies by suicide) ಆತ್ಮಹತ್ಯೆ ಮಾಡಿಕೊಂಡಿದ್ದು ಆನೇಕಲ್​ನ 8ನೇ ತರಗತಿಯ ವಿದ್ಯಾರ್ಥಿನಿ.
ಮಧುಶ್ರೀ(14) ಮೃತ ಯುವತಿ ಎಂದು ಗುರುತಿಸಲಾಗಿದೆ. ಆನೇಕಲ್ ತಾಲ್ಲೂಕಿನ ಮರಸೂರು ಮಡಿವಾಳದಲ್ಲಿ ಈ ಘಟನೆ ನಡೆದಿದೆ.  ಬಾಲಕಿ  ಮರಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಳು. ಗುರುವಾರ ರಾತ್ರಿ ಡೆತ್​ ನೋಟ್​ ಬರೆದಿಟ್ಟು, ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಬೆಳಗೆದ್ದು ಆಕೆಯನ್ನ ಎಬ್ಬಿಸಲು ಹೋದಾಗ ಘಟನೆ ಬೆಳಕಿಗೆ ಬಂದಿದೆ.

ಅವಮಾನ ಸಹಿಸಲಾಗಲಿಲ್ಲ

ಸೂರ್ಯನಗರ ಪೊಲೀಸರ ಪ್ರಕಾರ, ಶಾಲೆಯಲ್ಲಿ ಆಕೆ ಮೇಲೆ ಹಣ ಕದ್ದ ಆರೋಪ ಹೊರಿಸಲಾಗಿತ್ತು. ಮಧು ಶ್ರೀ ಶಾಲೆಯಲ್ಲಿ 20 ಮತ್ತು 10 ರೂ.ಗಳನ್ನು ಕದ್ದಿರುವುದಾಗಿ ಸುಳ್ಳು ಆರೋಪ ಮಾಡಿರುವುದು ಆಕೆಗೆ ಸಹಿಸಲಾಗದ ನೋವಾಗಿತ್ತು. ಶಿಕ್ಷಕರು  ನನಗೆ ಬೈದರು, ಶಾಲೆಯಲ್ಲಿ ನನಗೆ ಅವಮಾನವಾಗಿದೆ. ಇದನ್ನು ಸಹಿಸೋಕೆ ಅಸಾಧ್ಯ ಎಂದು  ಈ ನಿರ್ಧಾರ ತೆಗೆದುಕೊಂಡಿದ್ದಾಳೆ.

ಡೆತ್​ನೋಟ್​ನಲ್ಲಿ ಏನಿತ್ತು?

ಅಮ್ಮ..ನನ್ನನ್ನು ಕ್ಷಮಿಸು, ಎಲ್ಲರೂ ನನ್ನನ್ನು ಕ್ಷಮಿಸಿ. ನನಗೆ ಈ ಭೂಮಿ ಮೇಲೆ ಬದುಕುವ ಅರ್ಹತೆ ಇಲ್ಲ. ಶಾಲೆಯಲ್ಲಿ ನಡೆದ ಘಟನೆಯಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಇದರಲ್ಲಿ ನನ್ನ ಅಮ್ಮ, ಅಕ್ಕ, ತಂಗಿ, ತಮ್ಮ ಯಾರ ತಪ್ಪು ಇಲ್ಲ. ಇಂತಿ ನಿಮ್ಮ ಮಗಳು ಮಧುಶ್ರೀ ಎಸ್​ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇವರನ್ನೆಲ್ಲ ಚೆನ್ನಾಗಿ ನೋಡಿಕೊಳ್ಳಿ

ನನ್ನ ತಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ ನನ್ನ ತಂಗಿ, ನನ್ನ ಅಮ್ಮನನ್ನು ನೋಡಿಕೊಳ್ಳಿ. ಅತ್ತೆ ನನ್ನ ಅಮ್ಮನನ್ನು ಬೈಯಬೇಡಿ ಬೈದರೆ ನನ್ನ ಮೇಲೆ ಆಣೆ..ಎಲ್ಲರಿಗೂ ಸ್ವಾರಿ. ಐ ಆಮ್​ ಸ್ವಾರಿ ಮಾಮ್​ ಆಂಡ್​ ಆಲ್​ ಎಂದು ಪತ್ರದಕಲ್ಲಿ ಉಲ್ಲೇಖಿಸಿದ್ದಾರೆ.

ಪೊಲೀಸರು ಭೇಟಿ

ಘಟನಾ ಸ್ಥಳಕ್ಕೆ ಸೂರ್ಯನಗರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಡೆತ್​​ನೋಟ್​ ಆಧರಿಸಿ ಸೂರ್ಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಲಾ ಸಿಬ್ಬಂದಿ, ಶಿಕ್ಷಕರನ್ನು ವಿಚಾರಣೆ ನಡೆಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎನ್ನಲಾಗಿದೆ, (ಏಜೆನ್ಸೀಸ್).