ಶಿಕ್ಷಕರಾದ ಲೋಕೇಶ್ ಹಾಗೂ ತಮ್ಮಣ್ಣಶೆಟ್ಟಿ ವೈ.ಎಸ್. ಅವರು ತಮ್ಮ ಸ್ವಂತಹಣದಲ್ಲೇ ಕಾರು ಖರೀದಿಸಿ ಶಾಲಾ ಮಕ್ಕಳನ್ನು ಕರೆತಂದು ಬಿಡುವ ವ್ಯವಸ್ಥೆ ಮಾಡಿದ್ದಾರೆ. 
ರಾಜ್ಯ

ಶಾಲಾ ಮಕ್ಕಳನ್ನು ಕರೆತರಲು ಶಿಕ್ಷಕರಿಂದ ಕಾರು ಖರೀದಿ

ಸಕಲೇಶಪುರ: ಸರ್ಕಾರಿ ಶಾಲೆಯನ್ನು ಉಳಿಸುವ ಹಾಗೂ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಶಿಕ್ಷಣದ ಅವಕಾಶ ಕಲ್ಪಿಸುವ ಅಪರೂಪದ ಕಾರ್ಯವೊಂದನ್ನು ತಾಲೂಕಿನ ಇಬ್ಬರು ಸರ್ಕಾರಿ ಶಾಲಾ ಶಿಕ್ಷಕರು ಮಾಡಿ ಮಾದರಿಯಾಗಿದ್ದಾರೆ.
ತಾಲೂಕಿನ ಕುಣಿಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಆನೆಪೀಡಿತ ಹಾಗೂ ಡಾಂಬರ್ ರಸ್ತೆ ಸೌಲಭ್ಯವಿಲ್ಲದ ಹಳಕೆರೆ ಎಂಬ ಪುಟ್ಟ ಗ್ರಾಮದಲ್ಲಿರುವ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 16 ವಿದ್ಯಾರ್ಥಿಗಳು ಹಾಗೂ ಇಬ್ಬರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಶಾಲೆಗೆ ಸಮೀಪದ ಕೆಂಪಿನಾಲ್ ಗ್ರಾಮದಿಂದ ಮಕ್ಕಳು ಪ್ರತಿನಿತ್ಯ ಬರಬೇಕಾಗಿದ್ದು, ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಮಕ್ಕಳು ಶಾಲೆಗೆ ಬರಲು ತೀವ್ರ ತೊಂದರೆ ಅನುಭವಿಸುತ್ತಿದ್ದರು.
ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಶಿಕ್ಷಕರು ತಮ್ಮ ಸ್ವಂತ ವೆಚ್ಚದಲ್ಲಿ ಖಾಸಗಿ ವಾಹನದ ವ್ಯವಸ್ಥೆ ಮಾಡಿದ್ದರು. ಆದರೆ ಅದು ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ, ಈ ವರ್ಷ ಶಾಲೆಯ ಶಿಕ್ಷಕರಾದ ಲೋಕೇಶ್ ಹಾಗೂ ತಮ್ಮಣ್ಣಶೆಟ್ಟಿ ವೈ.ಎಸ್. ಅವರು ತಮ್ಮ ಸ್ವಂತಹಣದಲ್ಲೇ ಕಾರು ಖರೀದಿಸಿ ಶಾಲಾ ಮಕ್ಕಳನ್ನು ಕರೆತಂದು ಬಿಡುವ ವ್ಯವಸ್ಥೆ ಮಾಡಿದ್ದಾರೆ.
ಸರ್ಕಾರಿ ಶಾಲೆ ಉಳಿಸುವ ಹಾಗೂ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಶಿಕ್ಷಕರು ಕೈಗೊಂಡಿರುವ ಈ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಗ್ರಾಮಸ್ಥರು, ಎಸ್‌ಡಿಎಂಸಿ ಸದಸ್ಯರು, ಶ್ರೀಶಕ್ತಿ ಸಂಘದ ಮಹಿಳೆಯರು, ಗ್ರಾಮದ ದಾನಿಗಳು ಹಾಗೂ ಎಸ್ಟೇಟ್ ಮಾಲೀಕರು ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಪುಷ್ಪ ಚಾಲನೆ ನೀಡಿ, ಶಿಕ್ಷಕರು ತಮ್ಮ ಸ್ವಂತ ಹಣದಲ್ಲಿ ವಾಹನ ಖರೀದಿಸಿ ಸರ್ಕಾರಿ ಶಾಲೆಯ ಉಳಿವಿಗಾಗಿ ಪ್ರಯತ್ನಿಸುತ್ತಿರುವುದು ರಾಜ್ಯದಲ್ಲೇ ಪ್ರಥಮ ಎಂದು ಇಬ್ಬರು ಶಿಕ್ಷಕರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಇಲಾಖೆಯ ಅಧಿಕಾರಿಗಳಾದ ಗಂಗಾಧರ್, ಕುಶವಂತ್, ನಿರಂಜನ್, ಗ್ರಾಮದ ಪೋಷಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.