ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ರ‌್ಯಾಂಕ್ ಬಂದ ಸೌಜನ್ಯ ಕಂದಕೂರ ಅವರಿಗೆ ಸಿಹಿ ತಿನ್ನಿಸುತ್ತಿರುವ ಕುಟುಂಬಸ್ಥರು.
- ನಾಗರಬೆಟ್ಟ ಆಕ್ಸ್‌ಫರ್ಡ್ ಶಾಲೆಯ ವಿದ್ಯಾರ್ಥಿನಿ
- ಎಸ್‌ಎಸ್‌ಎಲ್‌ಸಿನಲ್ಲಿ 625ಕ್ಕೆ 625 ಅಂಕ
- ಮೆಡಿಕಲ್ ಓದುವ ಬಯಕೆ
ಮುದ್ದೇಬಿಹಾಳ: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದ್ದು, ತಾಲೂಕಿನ ನಾಗರಬೆಟ್ಟ ಆಕ್ಸ್‌ಫರ್ಡ್ ಇಂಗ್ಲಿಷ್ ಮಾಧ್ಯಮ ಶಾಲೆ ವಿದ್ಯಾರ್ಥಿನಿ ಸೌಜನ್ಯ ಕಂದಕೂರ 625ಕ್ಕೆ 625 ಅಂಕ ಗಳಿಸಿ, ರಾಜ್ಯಕ್ಕೆ ಟಾಪರ್ ಆಗಿದ್ದಾರೆ.
ವಿದ್ಯಾರ್ಥಿನಿ ಸೌಜನ್ಯ ನೆರೆಯ ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದ ಶಿಕ್ಷಕ ದಂಪತಿ ಬಸವರಾಜ ಕಂದಕೂರ ಮತ್ತು ಸುಜಾತಾ ಕಂದಕೂರ ಪುತ್ರಿಯಾಗಿದ್ದಾರೆ. 1ರಿಂದ 5ನೇ ತರಗತಿಯನ್ನು ಕಡಪಟ್ಟಿ ಇಂಟರ್ ನ್ಯಾಷನಲ್ ಶಾಲೆ, 6 ರಿಂದ 7ನೇ ತರಗತಿಯನ್ನು ಹುನಗುಂದದಲ್ಲಿ ಹಾಗೂ 8ರಿಂದ 10ನೇ ತರಗತಿಯನ್ನು ನಾಗರಬೆಟ್ಟ ಆಕ್ಸ್‌ಫರ್ಡ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಓದಿದ್ದಾರೆ.
ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ಏಳು ವಿದ್ಯಾರ್ಥಿಗಳು 625 ಅಂಕಗಳಿದ್ದಾರೆ. ಅದರಲ್ಲಿ ವಿಜಯಪುರ ಜಿಲ್ಲೆಯ ಸೌಜನ್ಯ ಒಬ್ಬರಾಗಿದ್ದು ಹೆಮ್ಮೆ ಸಂಗತಿ. ಈ ಮೂಲಕ ಜಿಲ್ಲೆಯ ಕೀರ್ತಿಯನ್ನು ರಾಜ್ಯಮಟ್ಟದಲ್ಲಿ ಬೆಳಗಿಸಿದ್ದಾರೆ.
ವಿದ್ಯಾರ್ಥಿನಿ ಸಾಧನೆಗೆ ಆಕ್ಸ್‌ಫಡ್ ಸಂಸ್ಥೆ ಚೇರ್ಮನ್ ಎಂ.ಎಸ್. ಪಾಟೀಲ, ಆಡಳಿತಾಧಿಕಾರಿ ಅಮೀತಗೌಡ ಪಾಟೀಲ, ದರ್ಶನಗೌಡ ಪಾಟೀಲ ಹಾಗೂ ಶಾಲೆಯ ಸಿಬ್ಬಂದಿ, ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಎಸ್‌ಎಸ್‌ಎಲ್‌ಸಿನಲ್ಲಿ 625ಕ್ಕೆ 625 ಅಂಕ ಪಡೆದುಕೊಂಡಿದ್ದು ಸಂತಸ ತಂದಿದೆ. ಇದಕ್ಕೆ ತಂದೆ ತಾಯಿ, ಶಿಕ್ಷಕರ ಮಾರ್ಗದರ್ಶನವೇ ಕಾರಣ. ಮುಂದೆ ಮೆಡಿಕಲ್ ಕ್ಷೇತ್ರದಲ್ಲಿ ಓದಬೇಕು ಎಂಬ ಆಸೆ ಇದೆ.
ಸೌಜನ್ಯ ಕಂದಕೂರ, ಎಸ್ಸೆಸ್ಸೆಲ್ಸಿ ಟಾಪರ್.
ಎಸ್‌ಎಸ್‌ಎಲ್‌ಸಿನಲ್ಲಿ ಮಗಳು ರಾಜ್ಯಕ್ಕೆ ಟಾಪರ್ ಆಗಿದ್ದು, ತುಂಬಾ ಸಂತೋಷವಾಗಿದೆ. ಇದಕ್ಕೆ ಶಾಲೆ ಶಿಕ್ಷಕ ವರ್ಗವೇ ಕಾರಣ. ಸೂಕ್ತ ಮಾರ್ಗದರ್ಶನ ನೀಡಿದ ಎಲ್ಲರಿಗೂ ಧನ್ಯವಾದ.
ಬಸವರಾಜ ಕಂದಕೂರ, ಸೌಜನ್ಯ ತಂದೆ.