ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಪಾಲಕರನ್ನು ಸನ್ಮಾನಿಸಲಾಯಿತು. ಡಾ. ಕೆ.ಜೆ. ಕವಿತಾ, ಶಿವರಾಮೇಗೌಡ, ಸಾಕಿಬ್ ಉರ್ ರೆಹಮಾನ್, ಕೆ.ಪಿ. ನಾರಾಯಣ ಇತರರಿದ್ದರು.
- ಹಾಸನ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ.ಕೆ.ಜೆ.ಕವಿತಾ
- ರಾಮನಾಥಪುರ
ಅರಕಲಗೂಡು: ಮಕ್ಕಳಿಗೆ ಶಿಕ್ಷಣದೊಂದಿಗೆ ಜೀವನದ ನೈತಿಕ ಮೌಲ್ಯಗಳನ್ನು ಶಿಕ್ಷಕರು ಕಲಿಸುವುದು ಅತ್ಯವಶ್ಯಕ ಎಂದು ಹಾಸನ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ.ಕೆ.ಜೆ.ಕವಿತಾ ತಿಳಿಸಿದರು.
ತಾಲೂಕಿನ ರಾಮನಾಥಪುರದಲ್ಲಿ ತಾಲೂಕು ಅನುದಾನರಹಿತ ಶಾಲೆಗಳ ಒಕ್ಕೂಟ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಗತ್ತಿನಲ್ಲಿ ಯಾರಾದರೂ ದೊಡ್ಡವರಿದ್ದರೆ ಅದು ಶಿಕ್ಷಕರು ಮಾತ್ರ. ಪಾಲಕರು ಮಕ್ಕಳ ಮುಂದೆ ಶಿಕ್ಷಕರಿಗೆ ಗೌರವ ನೀಡಿದರೆ, ಮಕ್ಕಳು ಕೂಡ ಶಿಕ್ಷಕರನ್ನು ಗೌರವಿಸಿ ಅವರಿಂದ ಉತ್ತಮ ಶಿಕ್ಷಣ ಪಡೆಯುತ್ತಾರೆ ಎಂದರು.
ಮಕ್ಕಳಿಗೆ ಮೊಬೈಲ್ ನೀಡಿ ಅವರನ್ನು ತಪ್ಪುದಾರಿಗೆ ಕರೆದೊಯ್ಯಬಾರದು. ಪಾಲಕರು ತಮ್ಮ ಕುಟುಂಬದ ಸಮಸ್ಯೆ ಹಾಗೂ ಜೀವನದ ವಾಸ್ತವಗಳನ್ನು ಮಕ್ಕಳಿಗೆ ತಿಳಿಸಿ, ಕೊರತೆಗಳ ನಡುವೆಯೂ ಅವರನ್ನು ಉತ್ತಮ ರೀತಿಯಲ್ಲಿ ಬೆಳೆಸಬೇಕು. ಶಿಕ್ಷಕರು ಮಕ್ಕಳಿಗೆ ಪಠ್ಯ ಶಿಕ್ಷಣದ ಜತೆಗೆ ಜೀವನದ ನೈತಿಕ ಮೌಲ್ಯಗಳನ್ನು ಬೋಧಿಸಬೇಕು ಎಂದರು.
ಬಿಇಒ ಕೆ.ಪಿ.ನಾರಾಯಣ ಮಾತನಾಡಿ, ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಅರಕಲಗೂಡು ತಾಲೂಕು ಮೊದಲ ಸ್ಥಾನ ಪಡೆಯುವ ನಿಟ್ಟಿನಲ್ಲಿ ಶಿಕ್ಷಕರು ಶ್ರಮಿಸಬೇಕು. ರಾಷ್ಟ್ರ ಮತ್ತು ರಾಜ್ಯ ನಿರ್ಮಾಣದಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಿದ್ದು, ಸೇವಾ ಮನೋಭಾವದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಶಿವರಾಮೇಗೌಡ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಎಂದರೆ ಹಣ ಗಳಿಸುವ ಸಂಸ್ಥೆಗಳು ಎಂಬ ಭಾವನೆ ಸಮಾಜದಲ್ಲಿದೆ. ಆದರೆ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ತಮ್ಮ ಕುಟುಂಬಗಳನ್ನು ನಿರ್ವಹಿಸುವ ಜತೆಗೆ ಅನೇಕರಿಗೆ ಉದ್ಯೋಗ ನೀಡುತ್ತಿವೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಉನ್ನತ ಭವಿಷ್ಯ ರೂಪಿಸುವ ಕಾರ್ಯ ಮಾಡುತ್ತಿವೆ. ಸರ್ಕಾರದಿಂದ ಯಾವುದೇ ಅನುದಾನ ದೊರೆಯದಿದ್ದರೂ ಪಾಲಕರ ನಂಬಿಕೆಯನ್ನು ಉಳಿಸಿಕೊಂಡು ಮಕ್ಕಳ ಭವಿಷ್ಯ ರೂಪಿಸುತ್ತಿವೆ ಎಂದು ಹೇಳಿದರು.
ಸೆ.19ರಂದು ಹಾಸನದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಒಕ್ಕೂಟದ ಸಭೆಗೆ ಎಲ್ಲರೂ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು, ಹಿರಿಯ ಶಿಕ್ಷಕರು ಹಾಗೂ ಅತ್ಯುತ್ತಮ ಶಿಕ್ಷಕರನ್ನು ಸನ್ಮಾನಿಸಲಾಯಿತು. ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಲಾಯಿತು. ಇದಕ್ಕೂ ಮುನ್ನ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಶಿಕ್ಷಕರು ಮೆರವಣಿಗೆಯಲ್ಲಿ ಆಗಮಿಸಿದರು. ಒಕ್ಕೂಟದ ತಾಲೂಕು ಅಧ್ಯಕ್ಷ ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಒಕ್ಕೂಟದ ಬಿ.ಕೆ. ಗಂಗಾಧರ್, ಅಬುಬಕ್ಕರ್, ಗೋವಿಂದರಾಜು, ಸಾಕಿಬ್ ಉರ್ ರೆಹಮಾನ್, ಧರ್ಮ, ವಿರೂಪಾಕ್ಷ, ಎ.ಆರ್. ಸುಬ್ಬರಾವ್, ಕೇಶವಮೂರ್ತಿ, ಶ್ರೀನಾಥ, ಟಿ.ಬಿ. ಲೋಕೇಶ್, ಅಜಂ ಇತರರಿದ್ದರು.