ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ದಿನೇಶ್ ಗೂಳಿಗೌಡ  
ರಾಜ್ಯ

ತೆರಿಗೆ ಪಾವತಿದಾರರಿಗೂ 38.91 ಕೋಟಿ ರೂ. ಜಮೆ

ಬೆಂಗಳೂರು: ಐಟಿ/ಜಿಎಸ್‌ಟಿ ಪಾವತಿಸುತ್ತಿರುವ 1,94,560 ಫಲಾನುಭವಿಗಳಿಗೆ ತಲಾ 2 ಸಾವಿರ ರೂ.ಗಳಂತೆ ಪ್ರತಿ ತಿಂಗಳು 38.91 ಕೋಟಿ ರೂ. ಗೃಹಲಕ್ಷ್ಮಿ ಹಣ ಪಾವತಿ ಆಗುತ್ತಿದೆ. ಆದರಿಂದ ಯೋಜನೆ ಪರಿಷ್ಕರಣೆ ಮಾಡಬೇಕೆಂದು ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಪತ್ರ ಬರೆದಿದ್ದಾರೆ.
ಪ್ರಸ್ತುತ 1.24 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಿಗೆ ತಲಾ 2 ಸಾವಿರ ರೂ. ನಂತೆ ಪ್ರತಿ ತಿಂಗಳು 2,480 ಕೋಟಿ ರೂ. ಹಾಗೂ ವರ್ಷಕ್ಕೆ 29,760 ಕೋಟಿ ರೂ. ಪಾವತಿ ಮಾಡಲಾಗುತ್ತಿದೆ. ಏಪ್ರಿಲ್ ಅಂತ್ಯಕ್ಕೆ 72,253 ಕೋಟಿ ರೂ. ಪಾವತಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ 1.64 ಕೋಟಿ ಫಲಾನುಭವಿಗಳಿದ್ದು, 200 ಯೂನಿಟ್ ಒಳಗೆ ಉಚಿತ ವಿದ್ಯುತ್ ಪಡೆಯುತ್ತಿದ್ದು, ಏಪ್ರಿಲ್ ಅಂತ್ಯಕ್ಕೆ 26,115 ಕೋಟಿ ರೂ. ಆಗಿದೆ. ಒಟ್ಟಾರೆ ಪಂಚ ಗ್ಯಾರಂಟಿ ಯೋಜನೆಗಳಿಗೆ ಈವರೆವಿಗೂ 1,38,270 ಕೋಟಿ ರೂ. ಪಾವತಿಸಲಾಗಿದೆ. ಈ ಪೈಕಿ ಮರಣ ಹೊಂದಿರುವ 1,95,224 ಫಲಾನುಭವಿಗಳಿಗೆ ಗೃಹಲಕ್ಷ್ಮಿಯ 2 ಸಾವಿರ ರೂ.ಗಳಂತೆ ಪ್ರತಿ ತಿಂಗಳು 39.05 ಕೋಟಿ ರೂ. ಹಾಗೂ ವರ್ಷಕ್ಕೆ 468.54 ಕೋಟಿ ರೂ. ಪಾವತಿಸಲಾಗುತ್ತಿದೆ. ಇದನ್ನು ತಡೆಯಲು ಅಗತ್ಯ ಕ್ರಮ ವಹಿಸಬೇಕೆಂದು ಒತ್ತಾಯಿಸಿದ್ದಾರೆ.
ಐಟಿ/ಜಿಎಸ್‌ಟಿ ಪಾವತಿಸುವವರೂ ಈ ಯೋಜನೆ ಸೌಲಭ್ಯ ಪಡೆಯಲು ಅರ್ಹರೇ? ಎಂಬುದನ್ನು ಪರಿಶೀಲಿಸಿ ಸರ್ಕಾರ ತೀರ್ಮಾನ ಮಾಡಬೇಕು. ಮರಣ ಹೊಂದಿರುವವರಿಗೆ ಪಾವತಿಸಿರುವ ಹಣವನ್ನು ಅವರ ಖಾತೆಯಿಂದ ಹಿಂಪಡೆಯುವಂತೆ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಬೇಕು. ಫಲಾನುಭವಿಯ ಬೆರಳಚ್ಚು ಪಡೆದು ಗೃಹಲಕ್ಷ್ಮಿ ಯೋಜನೆ ಹಣ ಪಾವತಿಸಬೇಕು. ಗೃಹಜ್ಯೋತಿ ಫಲಾನುಭವಿಗಳು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿರುವ ಬಗ್ಗೆ ದೂರು ಕೇಳಿ ಬರುತ್ತಿರುವುದರಿಂದ ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳವಂತೆ ಪತ್ರದಲ್ಲಿ ಕೋರಿದ್ದಾರೆ.