ಕಲಬುರಗಿ ಸಿಯುಕೆನಲ್ಲಿ ಜಿಎಸ್ಟಿ ಪ್ರಯೋಜನ ಕುರಿತು ಸೋಮವಾರ ಆಯೋಜಿಸಿದ್ದ ಸಮ್ಮೇಳನಕ್ಕೆ ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ್ ಚಾಲನೆ ನೀಡಿದರು. ಸಾಯಿಪ್ರಸಾದ್, ಡಾ.ಪಾಂಡುರಂಗ ಪತ್ತಿ, ಡಾ.ಬಸವರಾಜ, ಡಾ.ಸುಮಾ ಸ್ಕೇರಿಯಾ ಇದ್ದರು.
- ಐಎನ್ಡಿಟಿ ಮಾಜಿ ನಿರ್ದೇಶಕ ಸಾಹಿಪ್ರಸಾದ್ ಹೇಳಿಕೆ
- ಸಿಯುಕೆನಲ್ಲಿ ಸರಕು&ಸೇವಾ ತೆರಿಗೆ ಸಮ್ಮೇಳನ
ಕಲಬುರಗಿ: ಜಿಎಸ್ಟಿ ಸರ್ಕಾರಕ್ಕೆ ಆದಾಯ ಹೆಚ್ಚಿಸಿ ವ್ಯಾಪಾರ ಸಂಸ್ಥೆಗಳಿಗೆ ವ್ಯವಹಾರ ಸುಲಭತೆ ಸುಧಾರಿಸುವುದರ ಜತೆ ಗ್ರಾಹಕರಿಗೆ ತೆರಿಗೆ ಕಮ್ಮಿ ಮಾಡುವ ಮೂಲಕ ಸಹಾಯ ಮಾಡಿದೆ ಎಂದು ಕೇಂದ್ರ ಸರ್ಕಾರದ ಐಎನ್ಡಿಟಿ ಮತ್ತು ಸಿಇಎ ಮಾಜಿ ನಿರ್ದೇಶಕ ಸಿಎಚ್ವಿ ಸಾಯಿ ಪ್ರಸಾದ್ ಹೇಳಿದರು.
ಧಾರವಾಡದ ಬಹುಶಿಸ್ತೀಯ ಸಂಶೋಧನಾ ಕೇಂದ್ರದ (ಸಿಎಂಡಿಆರ್) ಸಹಯೋಗದಡಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ(ಸಿಯುಕೆ)ದ ಆರ್ಥಿಕ ಅಧ್ಯಯನ ಮತ್ತು ಯೋಜನೆ, ವಾಣಿಜ್ಯ ವಿಭಾಗ ಸೋಮವಾರ ಆಯೋಜಿಸಿದ್ದ ಜಿಎಸ್ಟಿ: ಜನ, ವ್ಯವಹಾರ ಮತ್ತು ಸರ್ಕಾರಕ್ಕೆ ಪ್ರಯೋಜನಗಳು ಮತ್ತು ವಿಕಸಿತ ಭಾರತ&2047ರತ್ತ ಭಾರತದ ಪ್ರಯಾಣ ಸಮ್ಮೇಳನದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.
ಜಿಎಸ್ಟಿ ಕ್ಯಾಸ್ಕೇಡಿಂಗ್ ಕಡಿಮೆ ಮಾಡಿರುವುದು ಬೆಲೆಗಳಲ್ಲಿ ಒಟ್ಟಾರೆ ಕಡಿತಕ್ಕೆ ಕಾರಣವಾಗಿದೆ. ಇದು ಒಂದೇ ಸಾಮಾನ್ಯ ರಾಷ್ಟ್ರೀಯ ಮಾರುಕಟ್ಟೆ ಸೃಷ್ಟಿಸಿದೆ. ಸಣ್ಣ ತೆರಿಗೆದಾರರಿಗೆ ಪ್ರಯೋಜನ ನೀಡಿದೆ. ಮಾನವರಹಿತ ಎಲೆಕ್ಟ್ರಾನಿಕ್ ತೆರಿಗೆ ವ್ಯವಸ್ಥೆ ಪರಿಚಯಿಸಿದ್ದಲ್ಲದೆ ದೇಶೀಯ ಕೈಗಾರಿಕೆಗಳನ್ನು ರಸಿದೆ ಎಂದು ಹೇಳಿದರು.
ಸಮ್ಮೇಳನ ಉದ್ಘಾಟಿಸಿದ ಕುಲಸಚಿವ ಪ್ರೊ.ಆರ್.ಆರ್. ಬಿರಾದಾರ್ ಮಾತನಾಡಿ, ಒಂದು ರಾಷ್ಟ್ರ, ಒಂದು ತೆರಿಗೆ, ಒಂದು ಮಾರುಕಟ್ಟೆ ಸ್ಥಾಪಿಸುವ ಉದ್ದೇಶದಿಂದ 2017ರಿಂದ ಕೇಂದ್ರ ಮತ್ತು ರಾಜ್ಯಗಳ 23 ಪರೋಕ್ಷ ತೆರಿಗೆ ಒಗ್ಗೂಡಿಸಿ ಸರಕು ಮತ್ತು ಸೇವಾ ತೆರಿಗೆ ಜಾರಿಗೆ ತರಲಾಗಿದೆ ಎಂದರು.
ಸ್ಕೂಲ್ ಆಫ್ ಬಿಜಿನೆಸ್ ಸ್ಟಡಿಸ್ ಡೀನ್ ಪ್ರೊ.ಪಾಂಡುರಂಗ ಪತ್ತಿ ಮಾತನಾಡಿ, ತೆರಿಗೆ ವ್ಯವಸ್ಥೆ ವ್ಯವಹಾರ ಪರಿಸರದ ಮೇಲೆ ನೇರ ಪ್ರಭಾವ ಬೀರುತ್ತದೆ. ಜಿಎಸ್ಟಿ ಸುಧಾರಣೆಗಳು ಕಾರ್ಯಾಚರಣೆ ದಕ್ಷತೆ ಸುಧಾರಣೆ, ವಹಿವಾಟು ವೆಚ್ಚ ಕಡಿಮೆ ಮತ್ತು ಸ್ಪರ್ಧಾತ್ಮಕತೆ ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಬೆಲೆ ಕಡಿಮೆ ಮತ್ತು ಬೇಡಿಕೆ ಹೆಚ್ಚಿಸಲು, ಎಂಎಸ್ಎಂಇ ಬೆಂಬಲಿಸಲು, ಜೀವನ ಸುಲಭತೆ ಹೆಚ್ಚಿಸಲು, ತೆರಿಗೆ ನೆಲೆ ವಿಸ್ತರಿಸಲು, ಉತ್ಪಾದನೆ ಬೆಂಬಲಿಸಲು, ಆದಾಯದ ಬೆಳವಣಿಗೆ ಉತ್ತೇಜಿಸಲು, ಆರ್ಥಿಕ ವೇಗ ಉಳಿಸಿಕೊಳ್ಳಲು ಮತ್ತು ಸಾಮಾಜಿಕ ರಕ್ಷಣೆ ಬಲಪಡಿಸಲು ಸುಧಾರಣೆ ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದರು.
ಸಮ್ಮೇಳನದ ನಿರ್ದೇಶಕ ಡಾ.ಬಸವರಾಜ ಎಂ.ಎಸ್. ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ವಿಶ್ವದ 160ಕ್ಕೂ ಹೆಚ್ಚು ದೇಶಗಳು ಜಿಎಸ್ಟಿ ಜಾರಿಗೆ ತಂದಿವೆ. 1950ರಲ್ಲಿ ಜಾರಿಗೆ ತಂದ ಮೊದಲ ದೇಶ ಫ್ರಾನ್ಸ್. ಭಾರತ ರಾಜ್ಯಗಳ ಒಕ್ಕೂಟವಾಗಿದ್ದರಿಂದ ತೆರಿಗೆ ಅಧಿಕಾರದ ಬಗ್ಗೆ ಮನವರಿಕೆ ಮಾಡಿಕೊಡುವುದು ಸವಾಲಿನ ಕೆಲಸವಾಗಿತ್ತು. ಆದ್ದರಿಂದ ಜಿಎಸ್ಟಿ ಜಾರಿಗೆ ತರಲು ಹತ್ತು ವರ್ಷ ಬೇಕಾಯಿತು ಎಂದು ಹೇಳಿದರು.
ಧಾರವಾಡದ ಬಹುಶಿಸ್ತೀಯ ಸಂಶೋಧನಾ ಕೇಂದ್ರದ ಪ್ರತಿನಿಧಿ ಡಾ.ಸಿದ್ದು ಹೊನಗೋಡಿಮಠ ಮತ್ತು ಸಿಯುಕೆ ಆರ್ಥಿಕ ಅಧ್ಯಯನ ಮತ್ತು ಯೋಜನಾ ವಿಭಾಗದ ಮುಖ್ಯಸ್ಥೆ ಡಾ.ಸುಮಾ ಸ್ಕೇರಿಯಾ ಮಾತನಾಡಿದರು.
ಡಾ.ಗಣಪತಿ ಸಿನ್ನೂರ್, ಡಾ.ಎಂ. ಜೊಹೇರ್, ಡಾ.ಎಸ್. ಲಿಂಗಮೂರ್ತಿ, ಡಾ.ಶಿವಕುಮಾರ ಬೆಳ್ಳಿ, ಡಾ.ಸುಜಾತ ಎಸ್.ಕೆ., ಡಾ.ಜಿ. ಮಹೇಂದ್ರ, ಡಾ.ಶೈಲಜಾ ಕೊನೇಕ್ ಇತರರಿದ್ದರು.
ತೆರಿಗೆ ಭಾರ ಕಡಿಮೆ, ಕೊಳ್ಳುವ ಶಕ್ತಿ ಹೆಚ್ಚಳ, ಕುಟುಂಬಗಳ ಅನುಭೋಗ ವೆಚ್ಚ ವೃದ್ಧಿ, ಸರಪಳಿ ಪರಿಣಾಮ, ಉತ್ಪಾದನಾ ವೆಚ್ಚ ಇಳಿಕೆ ಮಾಡಿ ಉತ್ಪಾದನಾ ದಕ್ಷತೆ ಹೆಚ್ಚಿಸುವುದರ ಮೂಲಕ ವಿಕಸಿತ ಭಾರತ&2047ರ ಕನಸು ಸಾಧಿಸುವುದಾಗಿದೆ.
> ಪ್ರೊ.ಆರ್.ಆರ್.ಬಿರಾದಾರ್