ಗುಂಡ್ಲುಪೇಟೆ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಎಂ.ಎಸ್.ತನ್ಮಯ್ ಪೋಲಿಯೋ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿದರು. ಡಾ.ಅಲೀಂಪಾಶಾ, ಡಾ.ಮಾದೇಶ್, ಪುಟ್ಟಸ್ವಾಮಿ ಇತರರಿದ್ದರು.
- 5 ವರ್ಷದೊಳಗಿನ ಒಟ್ಟು 11,160 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ
- ತಾಲೂಕು ಆರೋಗ್ಯಾಧಿಕಾರಿ ಡಾ.ಅಲೀಂ ಪಾಷಾ
ಗುಂಡ್ಲುಪೇಟೆ: ತಾಲೂಕಿನಲ್ಲಿ 5 ವರ್ಷದೊಳಗಿನ ಒಟ್ಟು 11,160 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಅಲೀಂ ಪಾಷಾ ಮಾಹಿತಿ ನೀಡಿದರು.
ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪಟ್ಟಣದ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಎಂ.ಎಸ್. ತನ್ಮಯ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಇದಕ್ಕಾಗಿ ತಾಲೂಕಿನ 21 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ 195 ಗ್ರಾಮಗಳಲ್ಲಿ ಒಟ್ಟು 156 ಲಸಿಕಾ ಬೂತ್‌ಗಳು, 312 ಸಿಬ್ಬಂದಿ, ಬುಡಕಟ್ಟು ಪ್ರದೇಶಗಳ ಮಕ್ಕಳನ್ನು ತಲುಪಲು 2 ಮೊಬೈಲ್ ತಂಡ, ಪ್ರಮುಖ 3 ಬಸ್ ನಿಲ್ದಾಣಗಳಲ್ಲಿ 3 ಟ್ರಾನ್ಸಿಟ್ ತಂಡ ಹಾಗೂ 3 ಚೆಕ್‌ಪೋಸ್ಟ್‌ಗಳಲ್ಲಿ 3 ಟ್ರಾನ್ಸಿಟ್ ಬೂತ್‌ಗಳನ್ನು ತೆರೆಯಲಾಗಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.
ಜೂ.28ರಂದು ಕಾರ್ಯಕ್ರಮ ಆರಂಭವಾಗಲಿದ್ದು, ಮೊದಲ ದಿನ ಎಲ್ಲ ಲಸಿಕಾ ಬೂತ್‌ಗಳಲ್ಲಿ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ. ನಂತರದ ಎರಡು ದಿನಗಳ ಕಾಲ ಪ್ರತಿ ಮನೆಗೆ ಭೇಟಿ ನೀಡಿ ಲಸಿಕೆ ಪಡೆಯದೆ ಉಳಿದ ಮಕ್ಕಳನ್ನು ಗುರುತಿಸಿ ಲಸಿಕೆ ನೀಡಲಾಗುತ್ತದೆ. ಪಟ್ಟಣ ಪ್ರದೇಶಗಳಲ್ಲಿ ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ಹೆಚ್ಚುವರಿಯಾಗಿ ಒಂದು ದಿನ ಮನೆ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರತಿ ಮಗುವಿಗೂ ಲಸಿಕೆ ಹಾಕುವುದೇ ನಮ್ಮ ಅಂತಿಮ ಗುರಿ ಎಂದು ತಿಳಿಸಿದರು.
ಆರೋಗ್ಯ ಇಲಾಖೆಯೊಂದಿಗೆ ಸಮನ್ವಯ ಮತ್ತು ಸಹಕಾರದಿಂದ ಕಾರ್ಯನಿರ್ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ತಾಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪಟ್ಟಣ ಪಂಚಾಯಿತಿ, ಸೆಸ್ಕ್, ಶಿಕ್ಷಣ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ತಹಸೀಲ್ದಾರ್ ಸೂಚಿಸಿದರು. ಇದೇ ಸಂದರ್ಭದಲ್ಲಿ ಪಲ್ಸ್ ಪೊಲೀಯೋ ಕುರಿತ ಪೋಸ್ಟರ್ ಬಿಡುಗಡೆ ಮಾಡಲಾಯಿತು.