ಬೆಂಗಳೂರು/ನವದೆಹಲಿ: ಆಡಳಿತ ಪಕ್ಷದ ಶಾಸಕರು ಹಾಗೂ ಮುಖಂಡರನ್ನು ನಿಗಮಮಂಡಳಿ ಅಧ್ಯಕ್ಷ ಸ್ಥಾನ, ಮುಖ್ಯ ಸಚೇತಕ, ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ನೇಮಿಸುವ ಪ್ರಸ್ತಾವಕ್ಕೆ ಎಐಸಿಸಿ ಅನುಮೋದನೆ ನೀಡಿದೆ.
ನಿನ್ನೆ (ನವೆಂಬರ್ 20) ಬಿಡುಗಡೆಯಾದ ಪತ್ರದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಈ ಬಗ್ಗೆ ತಿಳಿಸಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಪಟ್ಟಿಯ ಪ್ರಕಾರ, ಬಿ. ಶಿವಣ್ಣ ಅವರಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಈಗಾಗಲೇ ನೇಮಕ ಆಗಿದೆ), ಕೆ. ಷಡಕ್ಷರಿ ಅವರಿಗೆ ರಾಜ್ಯ ಖನಿಜ ನಿಗಮ ನಿಯಮಿತ, ಪಿ.ಎಂ. ಅಶೋಕ್ ಅವರಿಗೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಎ.ಆರ್. ಕೃಷ್ಣಮೂರ್ತಿ ಅವರಿಗೆ ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ಅಧ್ಯಕ್ಷ ಸ್ಥಾನ ಲಭಿಸಿದೆ.
ಹಂಪನಗೌಡ ಬಾದರ್ಲಿ ಅವರು ರಾಜ್ಯ ಉಗ್ರಾಣ ನಿಗಮದ, ಡಿ.ಜಿ. ಶಾಂತನಗೌಡ ಅವರು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ ಹಾಗೂ ಜಿ.ಎಚ್. ಶ್ರೀನಿವಾಸ್ ಅವರು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಲಿದ್ದಾರೆ. ಮಹಾಂತೇಶ ಕೌಜಲಗಿ ಅವರಿಗೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಹಾಗೂ ಎಸ್.ಎನ್. ಸುಬ್ಬಾರೆಡ್ಡಿ ಅವರಿಗೆ ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ನ ಹೊಣೆ ನೀಡಲಾಗಿದೆ.
ಸರ್ಕಾರದ ಪ್ರಮುಖ ಹುದ್ದೆಗಳಲ್ಲೂ ನೇಮಕಾತಿ ನಡೆದಿದೆ. ಬೇಳೂರು ಗೋಪಾಲಕೃಷ್ಣ ಅವರನ್ನು ವಿಧಾನಸಭೆಯ ಸರ್ಕಾರಿ ಮುಖ್ಯ ಸಚೇತಕರನ್ನಾಗಿ ಹಾಗೂ ತನ್ವೀರ್ ಸೇಠ್ ಅವರನ್ನು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಮಂಜುನಾಥ ಭಂಡಾರಿ ಅವರು ವಿಧಾನ ಪರಿಷತ್ತಿನ ಮುಖ್ಯ ಸಚೇತಕರಾಗಲಿದ್ದು, ಎನ್.ಎಚ್. ಕೋನರೆಡ್ಡಿ ಅವರಿಗೆ ಕೃಷಿ ಬೆಲೆ ಆಯೋಗ ಹಾಗೂ ಬಸನಗೌಡ ದದ್ದಲ್ ಅವರಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನ ದೊರೆತಿದೆ.
ಉಳಿದಂತೆ, ಅಲ್ಲಮಪ್ರಭು ಪಾಟೀಲ್ ಅವರು ಕರ್ನಾಟಕ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ, ಶ್ಯಾಮ್ ನಟೇಕರ್ ಅವರು ಕರ್ನಾಟಕ ಸಾಂಬಾರು ಅಭಿವೃದ್ಧಿ ಮಂಡಳಿಯ, ಎಚ್.ಸಿ. ಲಲಿತ್ ರಾಘವ್ ಅವರು ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಯಮಿತದ ಹಾಗೂ ಸುಭಾಷ್ ರಾಥೋಡ್ ಅವರು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕಗೊಳ್ಳಲಿದ್ದಾರೆ.