ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ಶ್ರೀಜಿತ್ -ಶ್ರೇಯಸ್ ಗೋಪಾಲ್ 
ರಾಜ್ಯ

vijay hazare trophy: ಕರ್ನಾಟಕಕ್ಕೆ ಶರಣಾದ ತಮಿಳುನಾಡು, ಮಯಾಂಕ್ ಪಡೆಗೆ ಹ್ಯಾಟ್ರಿಕ್ ಗೆಲುವು

ಅಹಮದಾಬಾದ್: ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ನಿರ್ವಹಣೆ ತೋರಿದ ಹಾಲಿ ಚಾಂಪಿಯನ್ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ದೇಶೀಯ ಏಕದಿನ ಟೂರ್ನಿಯಲ್ಲಿ ಗೆಲುವಿನ ಹ್ಯಾಟ್ರಿಕ್ ಸಾಧಿಸಿದೆ. ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ಶ್ರೀಜಿತ್ (77 ರನ್, 78 ಎಸೆತ, 6 ಬೌಂಡರಿ, 2 ಸಿಕ್ಸರ್) ಸಮಯೋಚಿತ ಆಟ ಹಾಗೂ ವೇಗಿ ಅಭಿಲಾಷ್ ಶೆಟ್ಟಿ (57ಕ್ಕೆ 4) ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಮಯಾಂಕ್ ಅಗರ್ವಾಲ್ ಪಡೆ ಎ ಗುಂಪಿನ ತನ್ನ ಮೂರನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ತಮಿಳುನಾಡು ಎದುರು 4 ವಿಕೆಟ್‌ಗಳ ಜಯ ದಾಖಲಿಸಿತು.
ಜಿಸಿಎ ಗ್ರೌಂಡ್‌ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅನುಭವಿ ಎನ್.ಜಗದೀಶನ್ (65 ರನ್, 67 ಎಸೆತ, 10 ಬೌಂಡರಿ, 1 ಸಿಕ್ಸರ್) ಹಾಗೂ ಪ್ರದೋಶ್ ರಂಜನ್ ಪೌಲ್ (57 ರನ್, 64 ಎಸೆತ, 5 ಬೌಂಡರಿ) ಅರ್ಧಶತಕಗಳ ಆಸರೆಯಲ್ಲಿ ತಮಿಳುನಾಡು ತಂಡ ಒಂದು ಹಂತದಲ್ಲಿ ಸುಸ್ಥಿತಿಯಲ್ಲಿತ್ತು. ನಂತರ ಕರ್ನಾಟಕ ಬೌಲರ್‌ಗಳ ಸಂಘಟಿತ ದಾಳಿಗೆ ನಿರಂತರ ವಿಕೆಟ್ ಕಳೆದುಕೊಂಡ ತಮಿಳುನಾಡು 49.5 ಓವರ್‌ಗಳಲ್ಲಿ 288 ರನ್‌ಗಳಿಗೆ ಆಲೌಟ್ ಆಯಿತು.
ಚೇಸಿಂಗ್‌ನಲ್ಲಿ ದೇವದತ್ ಪಡಿಕ್ಕಲ್ (22), ಕರುಣ್ ನಾಯರ್ (17) ಹಾಗೂ ಆರ್.ಸ್ಮರಣ್ (15) ಹೆಚ್ಚು ಹೊತ್ತು ನಿಲ್ಲಲಿಲ್ಲ. ನಾಲ್ಕನೇ ವಿಕೆಟ್‌ಗೆ ಮಯಾಂಕ್ ಅಗರ್ವಾಲ್ (58 ರನ್, 77 ಎಸೆತ, 7 ಬೌಂಡರಿ) ಜತೆಯಾದ ಕೆಎಲ್ ಶ್ರೀಜಿತ್ ಕರ್ನಾಟಕಕ್ಕೆ ಆಸರೆಯಾದರು. ನಂತರ ಕೆಎಲ್ ಶ್ರೀಜಿತ್ ಹಾಗೂ ಶ್ರೇಯಸ್ ಗೋಪಾಲ್ (55 ರನ್, 47 ಎಸೆತ, 6 ಬೌಂಡರಿ) ಸಮಯೋಚಿತ ಜತೆಯಾಟದೊಂದಿಗೆ ರಾಜ್ಯದ ಗೆಲುವಿನ ಹಾದಿ ಸುಗಮಗೊಳಿಸಿದರು. ಇವರಿಬ್ಬರು 99 ಎಸೆತಗಳಲ್ಲಿ 116 ರನ್ ಸೇರಿಸಿದರು. ಅಂತಿಮವಾಗಿ 47.1 ಓವರ್‌ಗಳಲ್ಲಿ 6 ವಿಕೆಟ್‌ಗೆ 293 ರನ್‌ಗಳಿಸಿದ ಕರ್ನಾಟಕ ಸತತ ಮೂರನೇ ಪಂದ್ಯಕ್ಕೆ ಗೆಲುವಿನ ಓಟ ವಿಸ್ತರಿಸಿತು.
ತಮಿಳುನಾಡು: 49.5 ಓವರ್‌ಗಳಲ್ಲಿ 288 (ಅತೀಶ್ 14, ಎನ್.ಜಗದೀಶನ್ 65, ಪ್ರದೋಶ್ 57, ಇಂದ್ರಜಿತ್ 28, ಆಂಡ್ರೆ ಸಿದ್ದಾರ್ಥ್ 1, ಮೊಹಮದ್ ಅಲಿ 31, ಸಾಯಿ ಕಿಶೋರ್ 38, ಸನ್ನಿ 17, ಸೋನು ಯಾದವ್ 12, ಅಭಿಲಾಷ್ 57ಕ್ಕೆ 4, ಶ್ರೀಶ ಎಸ್ ಆಚಾರ್ 47ಕ್ಕೆ 2, ವಿದ್ಯಾಧರ್ 62ಕ್ಕೆ 2).
ಕರ್ನಾಟಕ:47.1 ಓವರ್‌ಗಳಲ್ಲಿ 6 ವಿಕೆಟ್‌ಗೆ 293 (ಮಯಾಂಕ್ ಅಗರ್ವಾಲ್ 58, ದೇವದತ್ ಪಡಿಕ್ಕಲ್ 22, ಕರುಣ್ ನಾಯರ್ 17, ಆರ್.ಸ್ಮರಣ್ 15, ಕೆಎಲ್ ಶ್ರೀಜಿತ್ 77, ಶ್ರೇಯಸ್ ಗೋಪಾಲ್ 55, ಅಭಿನವ್ 20*, ವಿದ್ಯಾಧರ್ 17, ಸನ್ನಿ 25ಕ್ಕೆ 1). ಪಂದ್ಯಶ್ರೇಷ್ಠ: ಕೆಎಲ್ ಶ್ರೀಜಿತ್.
ಕರ್ನಾಟಕಕ್ಕೆ ಮುಂದಿನ ಪಂದ್ಯ
ಎದುರಾಳಿ: ಪಾಂಡಿಚೇರಿ
ಯಾವಾಗ: ಬುಧವಾರ
ಎಲ್ಲಿ: ಅಹಮದಾಬಾದ್
ಆರಂಭ: ಬೆಳಗ್ಗೆ 9