ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು: ಕರ್ನಾಟಕ ಸರ್ಕಾರದ ಮೇಕೆದಾಟು ಆಣೆಕಟ್ಟು ಯೋಜನೆ ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ಸಿಎಂ ವಿಜಯ್ ನಿರ್ಣಯ ಮಂಡಿಸಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ(Ramalinga Reddy), ಮೇಕೆದಾಟು ಬಹಳ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ನಾವು ಕಟ್ಟುವ ಡ್ಯಾಂ ಸ್ಟೋರೇಜ್ ಅಷ್ಟೇ ಅವರ ಪಾಲಿನ ನೀರು ನಮಗೆ ಬೇಡ ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿರುವ ಸಚಿವ ರಾಮಲಿಂಗಾರೆಡ್ಡಿ, ಮೇಕೆದಾಟು ಯೋಜನೆಯಿಂದ ಬೆಂಗಳೂರಿಗೆ 4.75 ಟಿಎಂಸಿ ಕುಡಿಯೋಕೆ ನೀರು ಸಿಗುತ್ತೆ, ಮತ್ತು 400 ಮೆಗಾವಾಟ್ ಕರೆಂಟ್ ಕೂಡ ಜನರೇಟ್ ಆಗುತ್ತೆ. ನಾವು ವ್ಯವಸಾಯಕ್ಕೆ ಬಳಸಲ್ಲ. ಈ ಯೋಜನೆ ಮಾಡಬಾರದು ಎಂದು ತಮಿಳುನಾಡಿನವರು ಸುಪ್ರೀಂ ಕೋರ್ಟ್‌ಗೆ ಹಾಕಿದ್ದ ಅಪ್ಲಿಕೇಶನ್ ತಿರಸ್ಕಾರವಾಗಿದೆ, ಎರಡನೇ ಬಾರಿ ಹಾಕಿದ ರಿವ್ಯೂ ಪಿಟಿಷನ್ ಕೂಡ ತಿರಸ್ಕೃತಗೊಂಡಿದೆ. ಈಗ ಅಲ್ಲಿನ ಹೊಸ ಸಿಎಂ ಹೋರಾಟ ಮಾಡಬೇಕೆಂದಿದ್ದಾರೆ.
ನಮಗೆ ನಿಗದಿಯಾಗಿರುವ ನೀರು ನಮಗೆ ಸಾಕು. ಮೇಕೆದಾಟುವಿನಲ್ಲಿ ಡ್ಯಾಮ್ ಕಟ್ಟಿದರೆ, ಅವರಿಗೆ ನೀರು ಬಿಡಬಹುದಿತ್ತು. ಇದು ಅವರ ರೈತರಿಗೂ ಕೂಡ ಅನುಕೂಲ ಆಗುತ್ತೆ.
ಅವರು ವಿರೋಧ ಮಾಡಿದರೆ ಅವರ ರೈತರಿಗೆ ಕಷ್ಟ ಆಗುತ್ತೆ. ಇಗಾಗಲೇ ಡಿಪಿಆರ್ ರೆಡಿ ಆಗಿದೆ. ತಮಿಳುನಾಡಿಗೆ ನಿಗದಿಯಾಗಿರುವ ನೀರಿನಲ್ಲಿ ನಮಗೆ ಒಂದು ಹನಿ ಕೂಡ ಜಾಸ್ತಿ ಬೇಡ ಎಂದು ತಿಳಿಸಿದ್ದಾರೆ.
ತಮಿಳುನಾಡಿಗೆ ಕೇಂದ್ರದ ರೂಲ್ಸ್ ಪ್ರಕಾರ ತಿಂಗಳಿಗೆ ಒಮ್ಮೆ ನೀರು ಬಿಡಬೇಕು. ಮಳೆ ಚೆನ್ನಾಗಿಯಾದರೆ ಜೂನ್ನಲ್ಲಿ ಒಟ್ಟು 19 ಟಿಎಂಸಿ ನೀರು ಬಿಡಬೇಕು ಅಂತ ಹಿಂದೆ ತೀರ್ಮಾನ ಮಾಡಲಾಗಿದೆ. ಆದರೆ ಈಗ ನಮ್ಮ ಬಳಿ 16 ಟಿಎಂಸಿ ಅಷ್ಟೇ ನೀರು ಇದೆ. ಕುಡಿಯೋ ನೀರು ಬಿಟ್ಟು ಬರೀ 3 ಟಿಎಂಸಿ ಅಷ್ಟೇ ಇದೆ. ಇಲ್ಲಿಯವರೆಗೂ 2 ಟಿಎಂಸಿ ನೀರು ಬಿಟ್ಟಿದ್ದೀವಿ.ಇದು 18ನೇ ತಾರೀಖಿನವರೆಗಿನ ವರದಿ. ಡ್ಯಾಮ್ ಕಟ್ಟಿ ನೀರು ಸ್ಟೋರೇಜ್ ಮಾಡಿದರೆ ಅವರಿಗೆ ಅನುಕೂಲ ಆಗಲಿದೆ ಎಂದು ಪ್ರತಿಪಾದಿಸಿದ್ದಾರೆ.
ಮಳೆ ಬಂದು ಡ್ಯಾಮ್ ತುಂಬಿದರೆ ಯಾವುದೇ ತೊಂದರೆ ಇರಲ್ಲ. ನೆಲ, ಜಲ, ಭಾಷೆಯ ವಿಚಾರದಲ್ಲಿ ಎಲ್ಲರೂ ಕೂಡ ಒಗ್ಗಟ್ಟಿನಿಂದ ಹೋರಾಡಬೇಕು. ಚುನಾವಣೆ ಆದಮೇಲೆ ವಿರೋಧ ಮರೆಯಬೇಕು. ನೀರು ತಗೊಳೋ ವಿಚಾರದಲ್ಲಿ ಎಲ್ಲರೂ ಒಟ್ಟಿಗೆ ಕೆಲಸ ಮಾಡಬೇಕು. ಮೊನ್ನೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮಹದಾಯಿ, ಮೇಕೆದಾಟು ವಿಚಾರವನ್ನು ಚರ್ಚೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ತಮಿಳುನಾಡು ಸಿಎಂಗೆ ನಮ್ಮನ್ನೂ ಕರೆಸಿ ಚರ್ಚೆ ಮಾಡಿ ಅಂತ ಮನವಿ ಮಾಡಲಾಗಿದೆ. ನೀರು ಸಂಗ್ರಹವಾದ್ರೆ ತಮಿಳುನಾಡು ರೈತರಿಗೆ ಉಪಯೋಗವಾಗುತ್ತದೆ. ಕೋರ್ಟ್ ಮೊರೆ ಹೋಗುವುದಕ್ಕಿಂತ ಕುಳಿತು ಮಾತನಾಡಿಕೊಳ್ಳುವುದು ಸೂಕ್ತ. ಕೃಷ್ಣ ನದಿಯದ್ದೆ 13-14 ವರ್ಷದಿಂದ ಪರಿಹಾರ ಆಗಿಲ್ಲ ಎಂದು ಹೇಳಿದ್ದಾರೆ.