ಹನೂರು ಶೂಟೌಟ್ ಪ್ರಕರಣ: ಮೃತ ಮೂವರ ಕುಟುಂಬಕ್ಕೆ ತಮಿಳುನಾಡು ಸರ್ಕಾರದಿಂದ ತಲಾ 10 ಲಕ್ಷ ರೂ. ಘೋಷಣೆ! Hanur Shootout Case
- ಕಾವೇರಿ ವನ್ಯಜೀವಿ ಧಾಮದ ಶೂಟೌಟ್ ಪ್ರಕರಣ
- ತಮಿಳುನಾಡು ಸರ್ಕಾರದಿಂದ ಪರಿಹಾರ ಘೋಷಣೆ
- ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಘೋಷಣೆ
- ಹನೂರು ಶೂಟೌಟ್ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಆಗ್ರಹ
ಚಾಮರಾಜನಗರ: ಕಾವೇರಿ ವನ್ಯಜೀವಿ ಧಾಮದಲ್ಲಿ ಶೂಟೌಟ್ ಪ್ರಕರಣದಲ್ಲಿ ( Hanur Shootout Case ) ಮೃತರಾದ ಮೂವರ ಕುಟುಂಬಗಳಿಗೆ ಶೀಘ್ರದಲ್ಲೇ ತಲಾ 10 ಲಕ್ಷ ರೂ.ಗಳನ್ನು ನೀಡುವುದಾಗಿ ಅರಣ್ಯ ಸಚಿವ ರಂಜಿತ್ ಕುಮಾರ್ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ.
ಇಂದು ವಿಧಾನಸಭೆಯಲ್ಲಿ, ವಿರೋಧ ಪಕ್ಷದ ನಾಯಕ ಉದಯನಿಧಿ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಪಳನಿಸ್ವಾಮಿ ಮತ್ತು ಇತರರು ನಿರ್ಣಯವನ್ನು ಮಂಡಿಸಿದರು. ಕೃಷ್ಣಗಿರಿಯ ಸ್ಥಳೀಯ ಶಾಸಕ ರಾಮಚಂದ್ರನ್ ಅವರು ಈ ಶೂಟೌಟ್ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಸಚಿವ ರಂಜಿತ್ ಕುಮಾರ್, "ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಆದೇಶದಂತೆ, ಮೂವರಿಗೆ ತಲಾ 10 ಲಕ್ಷ ರೂ.ಗಳನ್ನು ನೀಡಲು ಅರಣ್ಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಶೀಘ್ರದಲ್ಲೇ ನೀಡಲಾಗುವುದು" ಎಂದು ಹೇಳಿದರು.
ಏನಿದು ಪ್ರಕರಣ?
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಆಗಸ್ಟ್ 15ರ ನಸುಕಿನ ಜಾವ ನಡೆದ ಗುಂಡಿನ ಕಾಳಗದಲ್ಲಿ ಮೂವರು ಮೃತಪಟ್ಟರು. ಮೃತರನ್ನು ಕಳ್ಳಬೇಟೆಗಾರರು ಎನ್ನಲಾಗಿದೆ. ಬೇಟೆಯ ಬಗ್ಗೆ ಮಾಹಿತಿ ಸಿಕ್ಕ ಬೆನ್ನಲ್ಲೇ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಹೋದಾಗ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಲಾಯಿತು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗೂ ಗಂಭೀರ ಗಾಯಗಳಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮೃತರನ್ನು ಹನೂರು ತಾಲೂಕಿನ ಮರಿಯ ಮಂಗಲದ ರೈತ ಆಂತೋಣಿ ಸ್ವಾಮಿ (50), ಜಗನ್ನಾಥದೊಡ್ಡಿಯ ರೈತ ಜಾನ್ ರೋಸ್ ಪೀಟರ್ (42) , ಲಾಸರ್ದೊಡ್ಡಿಯ ಹಿಟಾಚಿ ಆಪರೇಟರ್ ಕುಮಾರ್(33) ಎಂದು ಗುರುತಿಸಲಾಗಿದೆ. ಆದರೆ, ಮೃತರು ಬೇಟೆಗೆ ಹೋಗಿರಲಿಲ್ಲ, ಇದೊಂದು ಉದ್ದೇಶಪೂರ್ವಕ ಕೃತ್ಯ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ. ಈ ಘಟನೆಯು ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಕರ್ನಾಟಕ ಮತ್ತು ತಮಿಳುನಾಡು ವಿಧಾನಸಭೆಯಲ್ಲಿಯೂ ಧ್ವನಿ ಎತ್ತಲಾಗಿದೆ.