ಗುಂಡೇರಾಯ ಮುತ್ಯಾ 
ರಾಜ್ಯ

ಹುಣಸಿ ಹಡಗಿಲ್ ಗುಂಡೇರಾಯ ಮುತ್ಯಾ ಲಿಂಗೈಕ್ಯ

ಪ್ರಮುಖ ಮುಖ್ಯಾಂಶಗಳು

  • ನಾಳೆ ಸಂಜೆ ಅಂತ್ಯಕ್ರಿಯೆ
  • ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಂಪ್ರಭು ಪಾಟೀಲರಿಂದ ಗುಂಡೇರಾವ ಮುತ್ಯಾ ಅವರ ನಿಧನಕ್ಕೆ ಸಂತಾಪ
ಕಲಬುರಗಿ: ತಾಲೂಕಿನ ಸುಕ್ಷೇತ್ರ ಹುಣಸಿ ಹಡಗಿಲ್ ಗ್ರಾಮದ ಅಲ್ಲಮಪ್ರಭು ಮಂದಿರದ ಪೂಜ್ಯರಾದ ಗುಂಡೇರಾಯ ಮುತ್ಯಾ (53) ಶುಕ್ರವಾರ ಸಂಜೆ ಲಿಂಗೈಕ್ಯರಾದರು.
ಕಳೆದ ವಾರ ಅನಾರೋಗ್ಯಕ್ಕೆ ಒಳಗಾಗಿದ್ದ ಅವರನ್ನು ಹೈದ್ರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಕೊನೆಯುಸಿರೆದರು.
ಶರಣರಾದ ಬಸವಲಿಂಗಪ್ಪ ಮುತ್ಯಾ ಅವರು ಎರಡುವರೆ ದಶಕಗಳ ಹಿಂದೆ ಲಿಂಗೈಕ್ಯರಾದ ನಂತರ ಅಲ್ಲಮಪ್ರಭು ಮಂದಿರದ ಎಲ್ಲ ಧಾರ್ಮಿಕ ಕಾರ್ಯ ಚಟುವಟಿಕೆಗಳನ್ನು ಗುಂಡೇರಾಯ ಮುತ್ಯಾ ಅವರೇ ಮುನ್ನೆಡೆಸಿಕೊಂಡು ಬರುತ್ತಿದ್ದರು. ಸಂಕ್ರಾಂತಿ ಹಾಗೂ ಬಾದಾಮಿ ಅಮಾವಾಸ್ಯೆ ಸಂದರ್ಭದಲ್ಲಿ ಸ್ವಪ್ನದ ಹೇಳಿಕೆಗಳು ಅಂದರೆ ಮುಂಚಿತವಾಗಿ ವರ್ಷದ ಮಳೆ ಬೆಳೆ ಹಾಗೂ ರಾಜಕೀಯ ಕುರಿತಾಗಿ ಹೇಳುತ್ತಿದ್ದ ಭವಿಷ್ಯ ಅಸಂಖ್ಯಾತ ಭಕ್ತರು ನಂಬುತ್ತಿದ್ದರು. ಹೇಳಿಕೆಯಂತೆ ಮಳೆಯಾಗುತ್ತಿತ್ತು. ಜತೆಗೆ ಮುತ್ಯಾರ ಹೇಳಿಕೆಯಂತೆಯೇ ಭಕ್ತರು ಹೊಲದಲ್ಲಿ ಕೃಷಿ ಉತ್ಪನ್ನಗಳನ್ನು ಬೆಳೆಯುತ್ತಿದ್ದರು.
ಸರಳ ನಡೆ ನುಡಿಯಿಂದ ಅಸಂಖ್ಯಾತ ಭಕ್ತ ವೃಂದವನ್ನು ಗುಂಡೂರಾಯ ಮುತ್ಯಾ ಹೊಂದಿದ್ದರು. ಅಗ ಅವರ ಲಿಂಗೈಕ್ಯದಿಂದ ಸಾಮಾಜಿಕವಾಗಿ ತುಂಬಲಾರದ ಹಾನಿಯಾಗಿದೆ. ಒಬ್ಬ ಸಂತನನ್ನು ಕಳೆದುಕೊಂಡಂತಾಗಿದೆ ಎಂದು ಭಕ್ತ ವೃಂದ ಕಂಬನಿ ಮಿಡಿದಿದೆ.
ಅಮಾವಾಸ್ಯೆಗಂತು ಸಹಸ್ರಾರು ಭಕ್ತರು ಅಲ್ಲಮಪ್ರಭು ಮಂದಿರಕ್ಕೆ ಆಗಮಿಸಿ ಗುಂಡೂರಾಯ ಮುತ್ಯಾ ಅವರ ದರ್ಶನ ಪಡೆಯುತ್ತಿದ್ದರು. ಮುತ್ಯಾ ಅವರು ಭಕ್ತರ ಆರಾಧಾಕರಾಗಿದ್ದರು. ಲಿಂಗೆಕ್ಯ ಸುದ್ದಿ ಅರಿಯುತ್ತಿದ್ದಂತೆ ಭಕ್ತರು ಹುನ್ಸಿಹಡಗಿಲ್ ಗ್ರಾಮಕ್ಕೆ ಆಗಮಿಸಿ ದು:ಖಿಸುತ್ತಿದ್ದಾರೆ. ಗುಂಡೂರಾಯ ಮುತ್ಯಾ ಅವರು ಪತ್ನಿ, ಮೂವರು ಮಕ್ಕಳು ಹಾಗೂ ಅಪಾರ ಭಕ್ತ ವೃಂದವನ್ನು ಅಗಲಿದ್ದಾರೆ.
ಅಂತ್ಯಕ್ರಿಯೆ: ಗುಂಡೂರಾವ ಮುತ್ಯಾ ಅವರ ಅಂತ್ಯಕ್ರಿಯೆ ಅಲ್ಲಮಪ್ರಭು ಮಂದಿರದ ಆವರಣದಲ್ಲಿ ಮಾರ್ಚ್ 7ರಂದು ಶನಿವಾರ ಸಂಜೆ 4ಕ್ಕೆ ನೆರವೇರಲಿದೆ ಎಂದು ಭಕ್ತ ಮಂಡಳಿಯ ಮೂಲಗಳು ತಿಳಿಸಿವೆ.