- ಅಡುಗೆ ಅನಿಲ ಸಮಸ್ಯೆ ಮಿತಿಮೀರಿದ್ದು
- ನಿಗದಿತ ಸಮಯ ಮೀರಿ
ಅರಕಲಗೂಡು: ತಾಲೂಕಿನಲ್ಲಿ ಅಡುಗೆ ಅನಿಲ ಸಮಸ್ಯೆ ಮಿತಿಮೀರಿದ್ದು, ನಿಗದಿತ ಸಮಯ ಮೀರಿದರೂ ವಿತರಿಸದೆ ಗ್ರಾಹಕರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಕರವೇ ತಾಲೂಕು ಗೌರವಾಧ್ಯಕ್ಷ ಎನ್.ರವಿಕುಮಾರ್ ಆರೋಪಿಸಿದರು.
ಪಟ್ಟಣದ ಭರತ್ ಗ್ಯಾಸ್ ಮುಂಭಾಗ ಅಡುಗೆ ಅನಿಲ ಸಿಲಿಂಡರ್ ಪಡೆಯಲು ಮಹಿಳೆಯರು, ವೃದ್ಧರು ದಿನವಿಡೀ ದ್ದನೆಯ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ಯಾಸ್ ವಿತರಣೆ ಸಮಸ್ಯೆ ಬಿಗಡಾಯಿಸಿದ್ದರೂ ತಾಲೂಕು ಆಡಳಿತ ಸಮಸ್ಯೆ ಬಗೆಹರಿಸಲು ಕಿಂಚಿತ್ತೂ ತಲೆಕೆಡಿಸಿಕೊಂಡಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಈ ಸಂಬಂಧ ಏಜೆನ್ಸಿ ಮಾಲೀಕರನ್ನು ಪ್ರಶ್ನಿಸಿದರೆ ನಮ್ಮಲ್ಲಿ 20 ಸಾವಿರ ಗ್ರಾಹಕರಿದ್ದು, ದಿನಕ್ಕೆ 6 ಸಾವಿರ ಅಡುಗೆ ಅನಿಲ ಗ್ಯಾಸ್ ಪೂರೈಕೆಯಾಗುತ್ತಿದೆ ಎನ್ನುವ ಉತ್ತರ ನೀಡುತ್ತಾರೆ. ಆದರೆ ಇನ್ನುಳಿದ ಗ್ರಾಹಕರಿಗೆ ಅಡುಗೆ ಅನಿಲ ನೀಡುವವರು ಯಾರು ಎನ್ನುವ ಪ್ರಶ್ನೆ ಉದ್ಭವಿಸಿದೆ. ಅಡುಗೆ ಅನಿಲ ಗ್ರಾಹಕರ ಮನೆ ಬಾಗಿಲಿಗೆ ವಿತರಣೆ ಮಾಡಬೇಕೆನ್ನುವ ನಿಯಮವಿದೆ. ಆದರೆ ಏಜೆನ್ಸಿ ಬಳಿ ಬಂದರೂ ಬುಕ್ ಮಾಡಿ ಹತ್ತು ದಿನಗಳಾದರೂ ವಿತರಣೆ ಮಾಡುತ್ತಿಲ್ಲ. ಖಾಲಿ ಸಿಲಿಂಡರ್ ತಲೆಮೇಲೆ ಹೊತ್ತು ಬರುವ ವಯಸ್ಸಾದ ವೃದ್ಧರನ್ನು ವಿನಾಕಾರಣ ಅಲೆದಾಡಿಸಲಾಗುತ್ತಿದೆ. ತಾಲೂಕಿನಲ್ಲಿ ಎಷ್ಟು ಗ್ಯಾಸ್ ಏಜೆನ್ಸಿಗಳಿವೆ, ವಿತರಣೆಗೆ ಮಾನದಂಡ ಏನು, ಎಷ್ಟು ಗ್ರಾಹಕರಿಗೆ ಒಟಿಪಿ ಬರುತ್ತದೆ, ಎಷ್ಟು ಜನ ಬುಕ್ ಮಾಡಿದರೆ ಕೊರತೆ ಎಷ್ಟಿದೆ ಎನ್ನುವ ಮಾಹಿತಿ ಕೂಡ ಇಲ್ಲ. ಆಹಾರ ಇಲಾಖೆ ಗ್ಯಾಸ್ ಏಜೆನ್ಸಿಗಳ ಮಾಲೀಕರ ಸಭೆ ಕೂಡ ನಡೆಸಿಲ್ಲ. ಈ ಕುರಿತು ನಾಮಫಲಕ ಕೂಡ ಅಳವಡಿಸದೆ ನಿರ್ಲಕ್ಷ್ಯ ವಹಿಸಿದೆ ಎಂದು ಆಪಾದಿಸಿದರು.
ವಾಣಿಜ್ಯ ಬಳಕೆ ಗ್ಯಾಸ್ ಸಿಗದೆ ಹೋಟೆಲ್‌ಗಳಲ್ಲಿ ಊಟ ತಿಂಡಿ ಸಿಗದಾಗಿದೆ. ಸಿಲಿಂಡರನ್ನು ಇನ್ನೊಂದು ವಾರದಲ್ಲಿ ವಿತರಿಸಬೇಕು. ಇಲ್ಲವಾದರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕರವೇ ಸಾಮಾಜಿಕ ಜಾಲತಾಣ ತಾಲೂಕು ಘಟಕದ ಅಧ್ಯಕ್ಷ ಅಕ್ಮಲ್ ಪಾಷಾ ಮಾತನಾಡಿ, ಅರಕಲಗೂಡು ತಾಲೂಕಿನ ಹಲವಾರು ಜನರು ಅಕ್ಕಪಕ್ಕದ ತಾಲೂಕುಗಳ ಗ್ಯಾಸ್ ಏಜೆನ್ಸಿಗಳಲ್ಲಿ ಗ್ರಾಹಕರಾಗಿದ್ದಾರೆ. ಅಡುಗೆ ಗ್ಯಾಸ್ ಸಿಗದೆ ಅವರ ಪಾಡಂತೂ ಹೇಳತೀರದಾಗಿದೆ. ಗಾಡಿ ಬರುವ 2-3 ಕಿಮೀ ದೂರದಲ್ಲೇ ಕೆಲವರಿಗೆ ವಿತರಿಸಲಾಗುತ್ತಿದೆ. ಹಳ್ಳಿಗಳಲ್ಲಿ ಕೃಷಿ ಕೆಲಸ ಬಿಟ್ಟು ಗ್ಯಾಸ್‌ಗಾಗಿ ಪರದಾಡುವಂತಾಗಿದೆ. ಈ ಅವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಕರವೇ ತಾಲೂಕು ಘಟಕದ ಅಧ್ಯಕ್ಷ ಜಿಮ್ ಸೋಮು, ಆಟೋ ಚಾಲಕರ ಘಟಕದ ಅಧ್ಯಕ್ಷ ಎ.ವಿ. ಧರ್ಮ, ಉಪಾಧ್ಯಕ್ಷ ವಿಜಯಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.