ದೊಡ್ಡಬಳ್ಳಾಪುರದ ಶ್ರೀರಾಮ ನರ್ಸಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಆರೋಗ್ಯ ದಿನಾಚರಣೆಗೆ ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀಶೈಲ ಭೀಮಸೇನ ಬಾಗದಿ ಚಾಲನೆ ನೀಡಿದರು. ಶ್ರೀರಾಮ ಸಮೂಹ ಶಿಕ್ಷಣ ಸಂಸ್ಥೆ ನಿರ್ದೇಶಕ ಡಾ.ವಿಜಯಕುಮಾರ್, ಸುಜ್ಞಾನ ದೀಪಿಕಾ ಸಂಸ್ಥೆಯ ನಿರ್ದೇಶಕ ಮಂಜುನಾಥ್ ಇತರರು ಇದ್ದರು.
ದೊಡ್ಡಬಳ್ಳಾಪುರ : ಕೆಲಸದ ಒತ್ತಡದಲ್ಲಿ ಯಾರೂ ಆರೋಗ್ಯದ ಬಗ್ಗೆ ರ್ನಿಲಕ್ಷ$್ಯ ಮಾಡಬಾರದು. ಇದರಿಂದ ಸಾಕಷ್ಟು ಸಮಸ್ಯೆ ಉಂಟಾಗುತ್ತವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ಕಾನೂನು ಸೇವಾ ಪ್ರಾಧಿಕಾರದ ಜಿಲ್ಲಾ ಸದಸ್ಯ ಕಾರ್ಯದರ್ಶಿ ಶ್ರೀಶೈಲ ಭೀಮಸೇನ ಬಾಗದಿ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶ್ರೀರಾಮ ಸಮೂಹ ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆ ಸಹಯೋಗದೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಆರೋಗ್ಯ ದಿನಾಚರಣೆಯಲ್ಲಿ ಮಾತನಾಡಿದರು. ದೇಶದಲ್ಲಿ ಯುವ ಸಮೂಹಕ್ಕೆ ಅದರಲ್ಲೂ 18 ರಿಂದ 24 ವರ್ಷದೊಳಗಿನ ಯುವಕರು ಅಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿದ್ದಾರೆ. ಇದಕ್ಕೆ ಜೀವನ ಶೈಲಿ, ತಂಬಾಕು ವಸ್ತುಗಳ ಬಳಕೆ, ಒತ್ತಡ ಕಾರಣವಾಗುತ್ತಿದೆ. ಉತ್ತಮ ಆರೋಗ್ಯಕ್ಕೆ ವ್ಯಾಯಾಮ, ಯೋಗಕ್ಕೆ ಆದ್ಯತೆ ನೀಡಬೇಕು. ಒಳ್ಳೆಯ ಹವ್ಯಾಸ ಅಳವಡಿಸಿಕೊಳ್ಳಬೇಕು. ಒಳ್ಳೆಯ ಪುಸ್ತಕಗಳನ್ನು ಓದಬೇಕು. ಮೊಬೈಲ್ನಿಂದ ಅಂತರ ಕಾಯ್ದುಕೊಳ್ಳಬೇಕು ಎಂದರು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧಿಕಾರೇತರ ಸದಸ್ಯ ಬಿ.ವೆಂಕಟೇಶ್ ಮಾತನಾಡಿ, ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು, ಸರ್ಕಾರದ ಆರೋಗ್ಯ ಯೋಜನೆಗಳನ್ನು ಜನರಿಗೆ ತಲುಪಿಸುವುದು, ವಿಶ್ವ ಆರೋಗ್ಯ ದಿನದ ಮಹತ್ವ ಆಗಿದೆ. ವಿಜ್ಞಾನ, ಆರೋಗ್ಯ ಕ್ಷೇತ್ರ ಬೆಳವಣಿಗೆ ಹೊಂದಿದೆ. ಮೌಢ್ಯಗಳಿಂದ ದೂರ ಉಳಿಯಬೇಕು. ದೇಹದ ಎಲ್ಲ ಅಂಗಗಳಿಗೂ ವೈದ್ಯರು ಲಭ್ಯವಿದ್ದಾರೆ. ಕಾಲಕಾಲಕ್ಕೆ ದೇಹದ ತಪಾಸಣೆ ಮಾಡಿಸಿಕೊಳ್ಳಿ. ಹೆಣ್ಣು ಮಕ್ಕಳು ನಾನಾ ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬಾಲ್ಯವಿವಾಹದ ಪ್ರಮಾಣ ಹೆಚ್ಚಾಗುತ್ತಿದ್ದು, ಅದರ ನಿಮೂರ್ಲನೆಗೆ ಪ್ರಯತ್ನಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಸೌಲಭ್ಯಗಳು ಇಂದಿಗೂ ಸಿಗುತ್ತಿಲ್ಲ. ಜಾಗೃತಿಗಿಂತ ದೊಡ್ಡಮದ್ದು ಯಾವುದಿಲ್ಲ. ಜೀವನ ಶೈಲಿ ಬದಲಾವಣೆ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಬೇರೆಯವರಿಂದ ಹೋಲಿಸಿಕೊಂಡು ಬದುಕಲು ಸಾಧ್ಯವಿಲ್ಲ. ಎಲ್ಲರಿಗೂ ಮೊಬೈಲ್ ರೋಗ ಬಂದಿದೆ. ಮೊಬೈಲ್ ರೋಗ ಆರೋಗ್ಯದ ಜತೆಗೆ ಸಮಾಜಕ್ಕೂ ಹಾನಿಕಾರಕವಾಗಿದೆ ಎಂದು ಹೇಳಿದರು.