ಕಲಬುರಗಿ ಡಿಸಿ ಕಚೇರಿಯಲ್ಲಿ ಬುಧವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಎಸ್ಪಿ ಅಡ್ಡೂರು ಶ್ರೀನಿವಾಸಲು ಇದ್ದರು.
- ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಸೂಚನೆ
- ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ
ಕಲಬುರಗಿ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತ ತಡೆ, ಹೆದ್ದಾರಿ ಸಂಚಾರ ಸುಗಮಗೊಳಿಸಲು ಹಾಗೂ ಮಿತಿಮೀರಿದ ಸರಕು ಸಾಗಣೆಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ರಸ್ತೆ ಸುರತಾ ಸಮಿತಿ ಸಭೆಯಲ್ಲಿ ಅಧ್ಯತೆ ವಹಿಸಿ ಮಾತನಾಡಿ, ಸುಪ್ರೀಂ ಕೋರ್ಟ್ ಮಾರ್ಗದರ್ಶನದಂತೆ ರಸ್ತೆ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಈ ವಿಷಯದಲ್ಲಿ ಕಡೆಗಣಿಸುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಚಿತ್ತಾಪುರ, ಸೇಡಂ, ವಾಡಿ ಮತ್ತು ಜೇವರ್ಗಿ ಭಾಗದ ಗಣಿ ಹಾಗೂ ಕ್ವಾರಿಗಳಿಂದ ಮಿತಿಮೀರಿದ ಭಾರ ಹೊತ್ತು ಸಾಗುವ ಲಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಎಲ್ಲ ಗಣಿ ಮತ್ತು ಕ್ವಾರಿಗಳ ಪ್ರವೇಶ ಹಾಗೂ ನಿರ್ಗಮನ ದ್ವಾರಗಳಲ್ಲಿ 15 ದಿನಗಳ ಒಳಗಾಗಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು. ಈ ಸಿಸಿ ಟಿವಿಗಳ ಲೈವ್ ಲಿಂಕ್ ಆರ್ಟಿಒ ಮತ್ತು ಪೊಲೀಸ್ ಅಧಿಕಾರಿಗಳ ಮೊಬೈಲ್ಗಳಿಗೆ ಸಂಪರ್ಕಿಸಲು ಆದೇಶಿಸಿದರು.
ಹೆದ್ದಾರಿ ಬದಿಯಲ್ಲಿ ಭಾರಿ ವಾಹನಗಳ ಅಸ್ತವ್ಯಸ್ಥ ಪಾರ್ಕಿಂಗ್ ತಡೆಯಲು ಸೇಡಂ, ಚಿತ್ತಾಪುರ ಹಾಗೂ ಸಿರಸಗಿ ಭಾಗಗಳಲ್ಲಿ ಟ್ರಕ್ ರ್ಟಮಿನಲ್ ನಿರ್ಮಿಸಲು ಜಾಗ ಗುರುತಿಸಿ ಪ್ರಸ್ತಾವನೆ ಸಲ್ಲಿಸಬೇಕು. ತೂಕ ಪರಿಶೀಲಿಸಲು ನೂತನ ಡಿಜಿಟಲ್ ವೇಬ್ರಿಡ್ಜ್ ಸ್ಥಾಪಿಸಲು ಯೋಜಿಸಲಾಗಿದೆ. ನಗರದಲ್ಲಿ ಬೆಳಗ್ಗೆ 7ರಿಂದ ರಾತ್ರಿ 10ರವರೆಗೆ ಭಾರಿ ವಾಹನಗಳ ಪ್ರವೇಶ ಸಂಪೂರ್ಣ ನಿಷೇಧಿಸಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಆನಂದ ಪ್ರಾರ್ಥನಳ್ಳಿ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ರಾಹುಲ್ ಕಾಂಬ್ಳೆ ಇತರರಿದ್ದರು.
ದಿನಕ್ಕೆ 40,000ಕ್ಕೂ ಹೆಚ್ಚು ವಾಹನ ದಟ್ಟಣೆ ಹೊಂದಿರುವ ಹುಮನಾಬಾದ್ ಕ್ರಾಸ್ನಿಂದ ಅಫಜಲಪುರ ಕ್ರಾಸ್ವರೆಗಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವಹಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಮುಂದಿನ 30 ದಿನಗಳಲ್ಲಿ ಜಿಲ್ಲೆಯಾದ್ಯಂತ ರಸ್ತೆ ಸುರಕ್ಷತಾ ಆಡಿಟ್ ನಡೆಸಿ ಬ್ಲಾಕ್ ಸ್ಪಾಟ್ ಸುಧಾರಿಸಬೇಕು. ಐಆರ್ಸಿಗೆ ವಿರುದ್ಧವಾಗಿರುವ ಅವೈಾನಿಕ ಗತಿರೋಧಕ ತಕ್ಷಣ ತೆರವುಗೊಳಿಸಿ, ರೇಡಿಯಂ ರಿಫ್ಲೆಕ್ಟರ್, ಎಚ್ಚರಿಕೆ ಫಲಕ ಅಳವಡಿಸಲು ಮಿಷನ್ ಮೋಡ್ನಲ್ಲಿ ಕೆಲಸ ಮಾಡಬೇಕು.
— > ಇಕ್ರಮ್ ಶರೀಫ್, ಜಿಲ್ಲಾಧಿಕಾರಿ