ಕಲಬುರಗಿ ವಿಮಾನ ನಿಲ್ದಾಣದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು. ಜಗದೇವ ಗುತ್ತೇದಾರ್, ಡಾ.ಶರಣಬಸಪ್ಪ ಕಾಮರಡ್ಡಿ, ಮಜರ್ ಅಲಂಖಾನ್, ಡಾ.ಕಿರಣ ದೇಶಮುಖ, ಅಬ್ದುಲ್ ರಶೀದ್ ಇತರರಿದ್ದರು.
- ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
- ವಂದೇ ಮಾತರಂ' ಯಾವುದೇ ಗೊಂದಲವಿಲ್ಲ
ಕಲಬುರಗಿ: ಪೆಲೆಟ್ ಗನ್ ದಾಳಿ ಮಾಡಿದ ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ವಿಷಯದಲ್ಲಿ ದೆಹಲಿ ಮತ್ತು ಕೇಂದ್ರ ಸರ್ಕಾರ ತಪ್ಪು ಮಾಡುತ್ತಿದೆ ಎಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ಪ್ರತಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ದೂರಿದರು.
ನಗರದ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಾಧ್ಯಮದವರ ಜತೆ ಮಾತನಾಡಿ, ದಾಳಿಯಿಂದ ಸಾಹಿಲ್ ಕಣ್ಣಿಗೆ ಗಂಭೀರ ಗಾಯಗಳಾದರೂ ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಹೀಗಾಗಿ ಕುಟುಂಬದವರ ಮತ್ತು ಸಾರ್ವಜನಿಕರ ಜತೆಗೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ಮತ್ತು ನಾನು ಸೇರಿ ಪ್ರತಿಭಟನೆ ನಡೆಸಿದ್ದೇವೆ. ಬಳಿಕ ಎಫ್ಐಆರ್ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರ ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಅಂದಿದೆ. ಆದರೆ ಇದುವರೆಗೂ ಯಾರನ್ನು ಬಂಧಿಸಿಲ್ಲ. ಕ್ರಮವೂ ಕೈಗೊಂಡಿಲ್ಲ. ಬಿಜೆಪಿ ಸರ್ಕಾರಕ್ಕೆ ಜನರ ಕಾಳಜಿ ಇಲ್ಲ. ಎಲ್ಲವೂ ತನ್ನದೇ ದೃಷ್ಟಿಯಿಂದ ನೋಡುತ್ತಿದೆ ಎಂದು ಕಿಡಿಕಾರಿದರು.
ವಂದೇ ಮಾತರಂ ಗೀತೆ ಹಾಡುವ ಕುರಿತು ಈಗಾಗಲೇ ಸ್ಪಷ್ಟವಾಗಿ ನಿರ್ಣಯ ಕೈಗೊಂಡಿದ್ದೇವೆ. ಅದರ ಕುರಿತು ಎಲ್ಲರಿಗೂ ಹೇಳಿದ್ದೇವೆ. ಇಲ್ಲದ ಗೊಂದಲ ಯಾಕೆ ? ಗೊಂದಲ ಸೃಷ್ಟಿಸುವ ಕೆಲಸ ಮಾಡಬೇಡಿ, ನೀವು ಗೊಂದಲಕ್ಕೊಳಗಾಗಬೇಡಿ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ್, ಕೆಕೆಆರ್ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್, ಜೆಸ್ಕಾಂ ಅಧ್ಯಕ್ಷ ಪ್ರವಿಣ ಪಾಟೀಲ್ ಹರವಾಳ, ಕಾಡಾ ಅಧ್ಯಕ್ಷ ರಶೀದ್ ಪಟೇಲ್, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರ್, ಮಾಜಿ ಸಚಿವ ರೇವೂ ನಾಯಕ ಬೆಳಮಗಿ, ಪ್ರಮುಖರಾದ ಡಾ.ಶರಣಬಸಪ್ಪ ಕಾಮರಡ್ಡಿ, ಸಂತೋಷ ಬಿಲಗುಂದಿ, ರಾಜಗೋಪಾಲರೆಡ್ಡಿ, ಸಂತೋಷ ಪಾಟೀಲ್ ದಣ್ಣೂರ, ಸೋಮಶೇಖರ ಹಿರೇಮಠ, ರೇಣುಕಾ ಸಿಂಗೆ ಇತರರಿದ್ದರು.