Take precautions to prevent illness.
ಕೊರಟಗೆರೆ:ಆರೋಗ್ಯ ಇಲಾಖೆಯ ಮಹತ್ವಾಕಾಂಕ್ಷಿ ಎಚ್ಪಿವಿ ಲಸಿಕಾ ಅಭಿಯಾನಕ್ಕೆ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಚಾಲನೆ ನೀಡಲಾಯಿತು.
ಈ ವೇಳೆ ಮಾತನಾಡಿದ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಜ್ಯೋತ್ಸ್ನಾ ರೆಡ್ಡಿ, ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಲ್ಲಿ ಕಂಡುಬರುವ ಗಂಭೀರ ಕಾಯಿಲೆಗಳಲ್ಲಿ ಒಂದು. ಈ ಕಾಯಿಲೆಗೆ ಮುಖ್ಯ ಕಾರಣವಾಗಿರುವ ಹ್ಯೂಮನ್ ಪ್ಯಾಪಿಲೋಮಾ ವೈರಸ್ ಅನ್ನು ಲಸಿಕೆಯ ಮೂಲಕ ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಲಸಿಕೆ ಲಭ್ಯವಿರುವ ಕೆಲವೇ ಕ್ಯಾನ್ಸರ್ಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಪ್ರಮುಖವಾಗಿದೆ ಎಂದು ತಿಳಿಸಿದರು.
ಕೊರಟಗೆರೆ ತಾಲೂಕಿನಲ್ಲಿ ಈಗಾಗಲೇ ಸುಮಾರು ಶೇ.70ರಷ್ಟು ಲಸಿಕಾ ಗುರಿ ಸಾಧನೆಯಾಗಿದ್ದು, ಉಳಿದ ಅರ್ಹ ವಿದ್ಯಾರ್ಥಿನಿಯರಿಗೂ ಶಾಲೆಗಳ ಮೂಲಕ ಲಸಿಕೆ ನೀಡುವ ಕಾರ್ಯ ಮುಂದುವರಿದಿದೆ ಎಂದು ಮಾಹಿತಿ ನೀಡಿದರು.
ತಾಪಂ ಇಒ ಅಪೂರ್ವಾ ಅನಂತರಾಮು ಮಾತನಾಡಿ, ಪಾಲಕರು ಯಾವುದೇ ಆತಂಕ ಅಥವಾ ತಪ್ಪು ಕಲ್ಪನೆಗಳಿಗೆ ಒಳಗಾಗದೆ ತಮ್ಮ ಮಕ್ಕಳಿಗೆ ಎಚ್ಪಿವಿ ಲಸಿಕೆ ಹಾಕಿಸಬೇಕು. ಇದು ಮಕ್ಕಳ ಆರೋಗ್ಯಕರ ಹಾಗೂ ಸುರಕ್ಷಿತ ಭವಿಷ್ಯಕ್ಕಾಗಿ ಅತ್ಯಂತ ಅಗತ್ಯವಾಗಿದೆ ಎಂದರು.