ಹುಮನಾಬಾದ್​ನಲ್ಲಿ ಕರೆದಿದ್ದ ಸಭೆಯಲ್ಲಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್​ ಮಾತನಾಡಿದರು. ಅಧಿಕಾರಿಗಳಾದ ಜಗದೀಶ ಚೌರ, ಮಂಜುನಾಥ ಪಂಚಾಳ, ದೀಪಿಕಾ ನಾಯ್ಕರ್​, ಲಿಂಗರಾಜ ಪಾಟೀಲ್​ ಇದ್ದರು. 
ರಾಜ್ಯ

ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಿ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್​ ಸೂಚನೆ
  • ಹುಮನಾಬಾದ್​ನಲ್ಲಿ ಅಧಿಕಾರಿಗಳ ಸಭೆ
ಹುಮನಾಬಾದ್​: ನಿರೀಕ್ಷೆಯಷ್ಟು ಮಳೆಯಾಗದೆ ಬರಪರಿಸ್ಥಿತಿ ನಿಮಾರ್ಣವಾಗಿರುವ ಹಿನ್ನೆಲೆಯಲ್ಲಿ ಹುಮನಾಬಾದ್​ ಹಾಗೂ ಚಿಟಗುಪ್ಪ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಅಧಿಕಾರಿಗಳು ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್​ ಸೂಚಿಸಿದರು.
ಪಟ್ಟಣದ ಶಾಸಕರ ಭವನದಲ್ಲಿ ಶನಿವಾರ ಕರೆದಿದ್ದ ಹುಮನಾಬಾದ್​ ಹಾಗೂ ಚಿಟಗುಪ್ಪ ತಾಲೂಕಿನ ಕುಡಿಯುವ ನೀರು ಮತ್ತು ಬರಪರಿಸ್ಥಿತಿ ಕುರಿತು ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ತಾಲೂಕಿನ ಎಲ್ಲ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಿ, ಗ್ರಾಮವಾರು ಸಮೀಕ್ಷೆ ನಡೆಸಬೇಕು. ಕುಡಿಯುವ ನೀರಿನ ಸಮಸ್ಯೆ ಇರುವ ಪ್ರದೇಶಗಳು,ಅಗತ್ಯವಿರುವ ಕೊಳವೆಬಾವಿಗಳ ವಿವರ ಹಾಗೂ ಪ್ರಸ್ತುತ ಇರುವ ನೀರಿನ ಮೂಲಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ ಪಟ್ಟಿ ಸಿದ್ಧಪಡಿಸಬೇಕು. ಸಮಸ್ಯೆ ಉಲ್ಬಣಿಸಿದ ನಂತರ ಕ್ರಮಕೈಗೊಳ್ಳುವ ಬದಲು ಮುಂಚಿತವಾಗಿಯೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.
ಕೆಕೆಆರ್​ಡಿಬಿ ಯೋಜನೆಯಡಿ ನೀರಿನ ಸಮಸ್ಯೆ ಇರುವ ಪ್ರದೇಶಗಳಲ್ಲಿ ಹೊಸ ಕೊಳವೆಬಾವಿ ಕೊರೆಸಲು ಕ್ರಮಕೈಗೊಳ್ಳಬೇಕು. ಕೊಳವೆಬಾವಿ ಕೊರೆಸಿದ ಬಳಿಕ ಅದು ಕೇವಲ ವೈಯಕ್ತಿಕ ಬಳಕೆಗೆ ಸೀಮಿತವಾಗದೆ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಇದರಿಂದ ಗ್ರಾಮದ ಹೆಚ್ಚಿನ ಜನರಿಗೆ ಕುಡಿಯುವ ನೀರಿನ ಸೌಲಭ್ಯ ದೊರೆಯುವಂತಾಗಬೇಕು ಎಂದು ತಿಳಿಸಿದರು.
ಕೊಳವೆಬಾವಿ ಕೊರೆಸಿದ ನಂತರ ವಿದ್ಯುತ್​ ಸಂಪರ್ಕದ ಸಮಸ್ಯೆ ಎದುರಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ನೀರು ದೊರೆತರೂ ವಿದ್ಯುತ್​ ಇಲ್ಲದೆ ಮೋಟಾರ್​ ಕಾರ್ಯನಿರ್ವಹಿಸದ ಪರಿಸ್ಥಿತಿ ನಿಮಾರ್ಣವಾಗಬಾರದು. ಜೆಸ್ಕಾಂ ಹಾಗೂ ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಅಗತ್ಯವಿರುವ ಕಡೆ ವಿದ್ಯುತ್​ ಸಂಪರ್ಕ, ಮೋಟಾರ್​ ಹಾಗೂ ಜನರ ಸಮಸ್ಯೆ ಆಲಿಸಿ ಮೂಲಸೌಕರ್ಯ ಕಲ್ಪಿಸಬೇಕು ಎಂದು ತಾಕೀತು ಮಾಡಿದರು.
ತಹಸೀಲ್ದಾರ್​ ಜಗದೀಶ್​ ಚೌರ್​, ಚಿಟಗುಪ್ಪ ತಹಸೀಲ್ದಾರ್​ ಮಂಜುನಾಥ ಪಂಚಾಳ್​, ಹುಮನಾಬಾದ್​& ಚಿಟಗುಪ್ಪ ತಾಪಂ ಇಒಗಳಾದ ದೀಪಿಕಾ ನಾಯ್ಕ, ಲಿಂಗರಾಜ್​ ಪಾಟೀಲ್​, ಜೆಸ್ಕಾಂ ಎಇಇ ರಮೇಶ್​ ಮೈನಾಳೆ, ಪುರಸಭೆ ಮುಖ್ಯಾಧಿಕಾರಿಗಳಾದ ಸತೀಶ ಗುಡ್ಡೆ, ವನಿತಾಬಾಯಿ, ಶಂಕರ ಪಾಟೀಲ್​ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.