ಜಾನುವಾರುಗಳ ಆರೋಗ್ಯ ಕಾಳಜಿ ವಹಿಸಿರಿ livestock
ಬಂಗಾರಪೇಟೆ: ತಾಲೂಕಿನ ಹೈನುಗಾರರ ಆರ್ಥಿಕ ಬೆನ್ನೆಲುಬಾಗಿರುವ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಪಶುಪಾಲನಾ ಇಲಾಖೆ ಮತ್ತು ಕೋಮುಲ್ನಿಂದ ಮಹತ್ವದ ಹೆಜ್ಜೆ ಇಡಲಾಗಿದ್ದು, ರೈತರು ಜಾನುವಾರುಗಳ ಆರೋಗ್ಯ ಕಾಳಜಿ ವಹಿಸಬೇಕು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು. livestock
ನಗರದ ಪಶುಪಾಲನಾ ಮತ್ತು ಪಶುವೈದ್ಯಕಿಯ ಸೇವಾ ಇಲಾಖೆ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾಲು-ಬಾಯಿ ರೋಗಮುಕ್ತ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ರೈತರ ಆರ್ಥಿಕ ಪ್ರಗತಿಯಲ್ಲಿ ಜಾನುವಾರುಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕಾಲು-ಬಾಯಿ ರೋಗದಂತಹ ಸಾಂಕ್ರಾಮಿಕ ರೋಗಗಳು ಹರಡಿದರೆ ಹೈನುಗಾರರು ತೀವ್ರ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಹಾಗಾಗಿ ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿರುವ ಸಾವಿರಾರು ರೈತ ಕುಟುಂಬಗಳು ಜಾನುವಾರುಗಳಿಗೆ ಸೂಕ್ತ ಕಾಲದಲ್ಲಿ ಚಿಕಿತ್ಸೆ ಕೊಡಿಸುವ ಮೂಲಕ ಕಾಳಜಿ ವಹಿಸಬೇಕು ಎಂದರು.
ರೋಗ ಬಂದ ನಂತರ ಚಿಕಿತ್ಸೆಗಾಗಿ ಸಾವಿರಾರು ರೂ. ಖರ್ಚು ಮಾಡುವುದಕ್ಕಿಂತ, ಮುನ್ನೆಚ್ಚರಿಕೆಯಾಗಿ ಲಸಿಕೆ ಹಾಕಿಸುವುದು ಹೆಚ್ಚು ಲಾಭದಾಯಕ. ಸರ್ಕಾರ ಮತ್ತು ಕೋಮುಲ್ನಿಂದ ಉಚಿತವಾಗಿ ನೀಡಲಾಗುತ್ತಿರುವ ಲಸಿಕಾ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಸುದರ್ಶನ್ ಮಾತನಾಡಿ, ಕಾಲು-ಬಾಯಿ ರೋಗವು ವೈರಾಣುಗಳಿಂದ ಹರಡುವುದರಿಂದ ಮುನ್ನೆಚ್ಚರಿಕೆ ಅತ್ಯಂತ ಮುಖ್ಯ. ಲಸಿಕೆ ಹಾಕಿಸುವುದರಿಂದ ಜಾನುವಾರುಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ರೋಗ ಬಂದರೆ ಹಾಲು ಉತ್ಪಾದನೆ ಕುಂಠಿತವಾಗಿ ರೈತರ ಆದಾಯಕ್ಕೆ ಹೊಡೆತ ಬೀಳುತ್ತದೆ ಎಂದು ಎಚ್ಚರಿಸಿದರು.
ಗ್ರಾಮಕ್ಕೆ ಲಸಿಕಾ ತಂಡ ಬಂದಾಗ ಎಲ್ಲ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು. ಗರ್ಭ ಧರಿಸಿದ ಜಾನುವಾರುಗಳಿದ್ದರೆ ವೈದ್ಯರ ಸಲಹೆ ಪಡೆದು ಕ್ರಮ ಕೈಗೊಳ್ಳಬೇಕು. ಕೊಟ್ಟಿಗೆಯನ್ನು ಸ್ವಚ್ಛವಾಗಿಡುವುದು, ಸುಣ್ಣ ಅಥವಾ ಸೋಂಕುನಿವಾರಕ ದ್ರಾವಣ ಬಳಸಿ ರೋಗ ಹರಡುವಿಕೆತಡೆಯುವುದು ಅಗತ್ಯ ಎಂದರು.
ಹೊಸ ಜಾನುವಾರುಗಳನ್ನು ಖರೀದಿಸಿದಾಗ ಅವುಗಳನ್ನು ಕೆಲ ದಿನ ಪ್ರತ್ಯೇಕವಾಗಿಟ್ಟು ಗಮನಿಸಬೇಕು. ಲಸಿಕೆ ಹಾಕಿದ ಬಳಿಕ ಕಿವಿಗೊಪ್ಪೆ ಹಾಕಿ ನೋಂದಣಿ ಮಾಡುವುದು ಕಡ್ಡಾಯ ಎಂದು ತಿಳಿಸಿದರು.