ಬಸವನಬಾಗೇವಾಡಿ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆ ಖರೀದಿ ಕೇಂದ್ರ ಪ್ರಾರಂಭಿಸಲಾಯಿತು. ಚಂದ್ರಶೇಖರ ಗೌಡ ಪಾಟೀಲ, ಬಾಲಚಂದ್ರ ಮುಂಜಾನೆ, ಬಸವರಾಜ ಹಾರಿವಾಳ ಮತ್ತಿತರರಿದ್ದರು.
- ಚಂದ್ರಶೇಖರ ಗೌಡ ಪಾಟೀಲ ಸಲಹೆ
- ಮಾರುಕಟ್ಟೆ ಆವರಣದಲ್ಲಿ ಚಾಲನೆ
ಬಸವನಬಾಗೇವಾಡಿ: ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇಲ್ಲದ ಕಾರಣ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರು ಬೆಳೆದ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸುತ್ತಿವೆ. ರೈತರು ಇದರ ಲಾಭ ಪಡೆಯಬೇಕೆಂದು ಟಿಎಪಿಎಂಸಿ ಅಧ್ಯಕ್ಷ ಚಂದ್ರಶೇಖರ ಗೌಡ ಪಾಟೀಲ ಹೇಳಿದರು.
ಪಟ್ಟಣದ ವಿಜಯಪುರ ರಸ್ತೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಮಾರುಕಟ್ಟೆ ಆವರಣದಲ್ಲಿ ಇತ್ತೀಚೆಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ, ಹಾಗೂ ತಾಲೂಕು ಒಕ್ಕಲುತನ ಮಾರುಕಟ್ಟೆ, ಬೆಂಬಲ ಬೆಲೆ ಯೋಜನೆಯಡಿ 2025-26ನೇ ಸಾಲಿನ ಗುಣಮಟ್ಟದ ಕಡಲೆ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಜಯಪುರ ಜಿಲ್ಲೆಯಲ್ಲಿ ಒಂದು ವರ್ಷ ಬರಗಾಲ, ಮತ್ತೊಂದು ವರ್ಷ ಅತಿವೃಷ್ಟಿ. ಹೀಗಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ರೈತರು ಬೆಳೆದ ವಿವಿಧ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದ ಕಾರಣ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರು ಬೆಳೆದ ತೊಗರಿ, ಮೆಕ್ಕೆಜೊಳ, ಕಡಲೆ ಸೇರಿ ವಿವಿಧ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಾಗುವುದು ಇದರ ಲಾಭವನ್ನು ತಾಲೂಕಿನ ರೈತರು ಪಡೆಯಬೇಕೆಂದು ಹೇಳಿದರು. ತಾಲೂಕಿನ ರೈತರು ಈಗಾಗಲೇ ಕಡಲೆ ಖರೀದಿ ಕೇಂದ್ರದಲ್ಲಿ ಸುಮಾರು 150 ಕ್ಕೂ ಹೆಚ್ಚು ರೈತರು ನೋಂದಣಿ ಮಾಡಿಸಿಕೊಂಡಿದ್ದು, ಇನ್ನುಳಿದ ರೈತರು ತಮ್ಮ ಹೆಸರನ್ನು ನೋಂದಾಯಿಸಬೇಕೆಂದು ಹೇಳಿದರು.
ಸಲ್ಲಿಸಬೇಕಾದ ದಾಖಲಾತಿಗಳು: ಮೊಬೈಲ್ ನಂ., ಆಧಾರ್ ಕಾರ್ಡ್, ಪಹಣಿ (ಉತಾರ) ಪ್ರತಿ ಜತೆಗೆ ಜಮೀನಿನ ಮಾಲೀಕರು ಖುದ್ದಾಗಿ ಬಂದು ಬಯೋಮೆಟ್ರಿಕ್‌ಗೆ ತಮ್ಮ ಬೆರಳಚ್ಚು ನೀಡಬೇಕು. ಪ್ರತಿ ಎಕರೆಗೆ 4 ಕ್ವಿಂಟಾಲ್‌ನಂತೆ ಗರಿಷ್ಠ 40 ಕ್ವಿಂಟಾಲ್‌ವರೆಗೆ ಫ್ರೂಟ್ಸ್ ತಂತ್ರಾಂಶದಲ್ಲಿ ಲಭ್ಯವಾಗುವ ಕಡಲೆ ಬೆಳೆದ ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾದ ಪ್ರಮಾಣದಂತೆ ಕೇಂದ್ರ ಸರ್ಕಾರ ಘೋಷಿತ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್ಗೆ 5875 ರೂ.ಗೆ ಖರೀದಿ ಮಾಡಲಾಗುತ್ತಿದೆ. ಕಡ್ಡಾಯವಾಗಿ ರೈತರು ಕಡಲೆಯನ್ನು ಸ್ವಚ್ಛಗೊಳಿಸಿ ತರಬೇಕು. ಎಫ್.ಎ.ಕ್ಯೂ ಗುಣಮಟ್ಟದ ಕಡಲೆಯನ್ನು ಮಾತ್ರ ಖರೀದಿಸಲಾಗುವುದು ಎಂದು ಹೇಳಿದರು.
ಜನತಾ ಬಜಾರದ ಅಧ್ಯಕ್ಷ ಬಾಲಚಂದ್ರ ಮುಂಜಾನೆ, ಬಸವರಾಜ ಹಾರಿವಾಳ, ಬಸವರಾಜ ಗೊಳಸಂಗಿ, ಸಂಕನಗೌಡ ಪಾಟೀಲ, ಶೇಖರ್ ಗೊಳಸಂಗಿ, ಶಂಕರಗೌಡ ಚಿಕ್ಕೋಡ ಮತ್ತಿತರರಿದ್ದರು.