ಶಹಾಬಾದ್ ತಾಲೂಕಿನ ಅಲ್ದಿಹಾಳದಲ್ಲಿ ಜೆಜೆಎಂ ಯೋಜನೆಯಡಿ ನಿರಂತರ ನೀರು ಸರಬರಾಜು ಯೋಜನೆ ದಾಖಲೆಗಳನ್ನು ಸಹಾಯಕ ಕಾರ್ಯಪಾಲಕ ಅಭಿಯಂತ ರಾಜಕುಮಾರ ಅಕ್ಕಿ ಅವರು ಗ್ರಾಪಂ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಡಾ.ನಂದಕುಮಾರ ತಾಂದಳೆ, ಯೋಗೇಶ್ವರಿ ಇತರರಿದ್ದರು.
- ರಾಜಕುಮಾರ ಅಕ್ಕಿ ಕರೆ
- ಅಲ್ದಿಹಾಳದಲ್ಲಿ ನಿರಂತರ ನೀರು ಸರಬರಾಜಿಗೆ ಚಾಲನೆ
ಶಹಾಬಾದ್: ಅಲ್ದಿಹಾಳ ಗ್ರಾಮವು 24 ಗಂಟೆ ನೀರು ಸರಬರಾಜಾಗುವ ಜಿಲ್ಲೆಯಲ್ಲಿಯೇ ಎರಡನೇ ಗ್ರಾಮವಾಗಿದ್ದು, ಸ್ಥಳಿಯರು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಅಲ್ಲದೆ ನೀರನ್ನು ಮಿತವಾಗಿ ಬಳಸಬೇಕು ಎಂದು ನೀರು ಸರಬರಾಜು ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತ ರಾಜಕುಮಾರ ಅಕ್ಕಿ ಹೇಳಿದರು.
ಅಲ್ದಿಹಾಳದ ಗ್ರಾಮದ ಹನುಮಾನ ದೇವಸ್ಥಾನದ ಬಳಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಲಜೀವನ ಮಿಷನ್ ನಳಕ್ಕೆ ಪೂಜೆ ಸಲ್ಲಿಸುವ ಮೂಲಕ ನೀರು ಸರಬರಾಜಿಗೆ ಚಾಲನೆ ನೀಡಿದ ಅವರು, ಗ್ರಾಮಕ್ಕೆ ನಿರಂತರವಾಗಿ ಶುದ್ಧ ನೀರು ಸರಬರಾಜು ಮಾಡುವುದರಿಂದ ಜನರ ಆರೋಗ್ಯ ಸುಧಾರಣೆ ಆಗಲಿದೆ. ಗ್ರಾಮ ಪಂಚಾಯತಿಗೆ ನಿರ್ವಹಣೆ ವೆಚ್ಚ, ವಿದ್ಯುತ್ ಮಿತ ಬಳಕೆ ಮಾಡಬಹುದಾಗಿದೆ ಎಂದರು.
ವಿಶ್ವ ಬ್ಯಾಂಕ್ ಸಮಾಲೋಚಕಿ ಯೋಗೇಶ್ವರಿ ಮಾತನಾಡಿ, ಗ್ರಾಪಂ ನೀರು ಸರಬರಾಜು ಇಲಾಖೆಯಿಂದ ಮಿಕ್ಕಿರುವ ಕಾಮಗಾರಿಗಳನ್ನು ಸರಿಪಡಿಸಲಾಗುವುದು. ಸಾರ್ವಜನಿಕರು ಪ್ರತಿ ತಿಂಗಳು 100 ರೂ. ಕರವನ್ನು ನಿಯಮಿತವಾಗಿ ಭರಿಸಬೇಕು. ನಳಗಳನ್ನು ಕೀಳುವುದಾಗಲಿ, ಮೀಟರ್ ಬೈಪಾಸ್ ಮಾಡುವುದಾಗಲಿ ಮಾಡಬಾರದು. ಅನಾವಶ್ಯಕವಾಗಿ ನೀರು ಪೋಲು ಮಾಡಬಾರದು ಎಂದು ಸಲಹೆ ನೀಡಿದರು.
ಗ್ರಾಪಂ ನೀರು ಸರಬರಾಜು ಇಲಾಖೆ ರಾಜ್ಯ ಸಂಯೋಜಕ ಡಾ.ನಂದಕುಮಾರ ತಾಂದಳೆ ಪ್ರಾಸ್ತಾವಿಕ ಮಾತನಾಡಿದರು. ಗ್ರಾಪಂ ಅಭಿವೃದ್ದಿ ಅಧಿಕಾರಿಗಳಿಗೆ ನಿರಂತರ ನೀರು ಸರಬರಾಜು ಕಾರ್ಯಾಚರಣೆ ಮತ್ತು ನಿರ್ವಹಣೆ ಬೈಲಾವನ್ನು ಹಸ್ತಾಂತರಿಸಲಾಯಿತು. ಜಿಲ್ಲಾ ಸಂಯೋಜಕ ನಾಮದೇವ ಶಾವರೆ ನಿರೂಪಣೆ ಮಾಡಿದರು.