Take action against those who dump waste into the drains. 
ರಾಜ್ಯ

ಚರಂಡಿಗೆ ತ್ಯಾಜ್ಯ ಸುರಿಯುವವರ ವಿರುದ್ಧ ಕ್ರಮವಹಿಸಿ

ಚಿಂತಾಮಣಿ: ನಗರದ ರಾಮುಕುಂಟೆ ರಸ್ತೆಯ ಪಕ್ಕದ ಚರಂಡಿಯಲ್ಲಿ ಮಾಂಸದ ತ್ಯಾಜ್ಯವನ್ನು ಸುರಿಯುತ್ತಿದ್ದು, ಇದರಿಂದ ಬರುತ್ತಿರುವ ದುರ್ನಾತಕ್ಕೆ ಸ್ಥಳಿಯರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿಮಾರ್ಣವಾಗಿದೆ.
ನಗರದ ಚಿಕನ್​, ಮಟನ್​ ಅಂಗಡಿ ಮಾಲೀಕರು ತ್ಯಾಜ್ಯವನ್ನು ಮೂಟೆಗಳಲ್ಲಿ ತುಂಬಿ ಚರಂಡಿಗೆ ಎಸೆಯುವುದು ಮಾಡಿದರೆ ಕ್ರಮದ ಜತೆಗೆ ಜಿಲ್ಲೆಯಿಂದ ಗಡಿಪಾರು ಮಾಡುವುದಾಗಿ ಚಿಂತಾಮಣಿ ಉಪವಿಭಾಗದ ಡಿವೈಎಸ್​ಪಿ ಪಿ.ಮುರಳೀಧರ್​ 2024 ಜುಲೈ 1ರಂದು ನಡೆದ ಸಭೆಯಲ್ಲಿ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದ್ದರು.
ಕಳೆದ ಕೆಲವು ದಿನಗಳಿಂದ ಈ ಭಾಗದ ಚರಂಡಿಗಳಲ್ಲಿ ಮಾಂಸದ ತ್ಯಾಜ್ಯ, ಪ್ರಾಣಿಗಳ ಉಳಿಕೆಗಳ ಮೂಟೆಗಳನ್ನು ತಂದು ಸುರಿಯಲಾಗುತ್ತಿದೆ. ಬಿಸಿಲಿನ ತಾಪಕ್ಕೆ ತ್ಯಾಜ್ಯ ಕೊಳೆತು ನಾರುತ್ತಿದ್ದು, ಇಡೀ ಪ್ರದೇಶದಲ್ಲಿ ನೊಣಗಳ ಕಾಟ ಹೆಚ್ಚಾಗಿದೆ. ಇದು ಸಾಂಕ್ರಾಮಿಕ ರೋಗ ಹರಡಲು ದಾರಿ ಮಾಡಿಕೊಡುತ್ತಿದೆ ಎಂದು ಸ್ಥಳಿಯರು ಆತಂಕ ವ್ಯಕ್ತಪಡಿಸಿದ್ದಾರೆ.
ರಾತ್ರಿ, ಜನ ಸಂಚಾರ ಕಡಿಮೆ ಇರುವ ವೇಳೆ ಮಾಂಸದಂಗಡಿಯವರು ತ್ಯಾಜ್ಯ ಎಸೆಯುತ್ತಾರೆ ಎಂಬ ಆರೋಪ ಕೇಳಿಬಂದಿದೆ. ಚರಂಡಿಗಳಲ್ಲಿ ತ್ಯಾಜ್ಯ ತುಂಬಿ ನೀರಿನ ಹರಿವಿಗೂ ಅಡ್ಡಿಯುಂಟಾಗಿದೆ.ರಸ್ತೆಯಲ್ಲಿ ಓಡಾಡುವುದು ನರಕಯಾತನೆಯಾಗಿದೆ. ಅಧಿಕಾರಿಗಳು ತ್ಯಾಜ್ಯ ಸುರಿಯುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸ್ಥಳಿಯ ನಿವಾಸಿಗಳು ಆಗ್ರಹಿಸಿದ್ದಾರೆ.ನಗರಸಭೆ ಅಧಿಕಾರಿಗಳು ಇತ್ತ ಗಮನಹರಿಸಿ ಚರಂಡಿ ಸ್ವಚ್ಛಗೊಳಿಸಿ, ತ್ಯಾಜ್ಯವನ್ನು ಹಾಕದಂತೆ ಮುಚ್ಚಳಗಳನ್ನು ಅಳವಡಿಸುವುದರ ಜತೆಗೆ ತ್ಯಾಜ್ಯ ಸುರಿಯದಂತೆ ಕ್ರಮ ಕೈಗೊಳ್ಳಬೇಕು.
ಹಿಂದೆ ಡಿವೈಎಸ್​ಪಿ ಚಿಕನ್​ ಮತ್ತು ಮಟನ್​ ಮಾರಾಟಗಾರರ ಸಭೆಯಲ್ಲಿ ನೀಡಿದ ಭರವಸೆಯಂತೆ ಅಂತಹವರನ್ನು ಪತ್ತೆ ಹಚ್ಚಿ ಗಡಿಪಾರು ಮಾಡುವಂತೆ ಸ್ಥಳಿಯರು ಒತ್ತಾಯಿಸಿದ್ದಾರೆ.