ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಸ್ವಾಮಿ 
ರಾಜ್ಯ

ಪ್ರದೀಪ್ ಈಶ್ವರ್ ವಿರುದ್ಧ ಕ್ರಮ ಕೈಗೊಳ್ಳಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ಮಾನಹಾನಿಕರ ಹೇಳಿಕೆ ನೀಡಿದ್ದಾರೆ ಎಂದು ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಸ್ವಾಮಿ ಆರೋಪಿಸಿದ್ದಾರೆ. ಈ ಹಿನ್ನೆಲೆ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಸ್ಪೀಕರ್, ಸಿಎಂ, ಗೃಹ ಸಚಿವರಿಗೆ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಬರೆದಿದ್ದಾರೆ.
ಬಿಜೆಪಿಯವರು ದೇಶದ್ರೋಹಿಗಳು ಎಂಬ ಅವಹೇಳನಕಾರಿ, ಮಾನಹಾನಿಕರ ಹಾಗೂ ದ್ವೇಷ ಭಾಷಣವನ್ನು ಪ್ರದೀಪ್ ಈಶ್ವರ್ ಮಾಡಿದ್ದಾರೆ. ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಸಮಾಜದಲ್ಲಿ ಸೌಹಾರ್ದತೆ, ಪರಸ್ಪರ ಗೌರವ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಬೆಳೆಸಬೇಕಾದವರು ಈ ರೀತಿಯಾಗಿ ಭಾರತೀಯ ಜನರನ್ನು ಹೀಯಾಳಿಸಿರುವುದು ಅತ್ಯಂತ ಅಪಾಯಕಾರಿಯಾಗಿದೆ.
ಈ ರೀತಿಯ ಹೇಳಿಕೆಯ ಕೇವಲ ರಾಜಕೀಯ ಟೀಕೆಯ ವ್ಯಾಪ್ತಿಯಲ್ಲಿ ಉಳಿಯದೆ, ನಿರ್ದಿಷ್ಟ ರಾಜಕೀಯ ಅಭಿಪ್ರಾಯ ಹೊಂದಿರುವ ನಾಗರಿಕರ ಘನತೆಗೆ ಧಕ್ಕೆ ತರುವುದು ಸರಿಯಲ್ಲ. ಸಾರ್ವಜನಿಕರ ಶಾಂತಿ, ಸುವ್ಯವಸ್ಥೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವ ದೃಷ್ಟಿಯಿಂದ ಈ ವಿಷಯದಲ್ಲಿ ಯಾವುದೇ ತರಹದ ರಾಜಕೀಯ ತಾರತಮ್ಯ ಇಲ್ಲದೆ ಕಾನೂನು ತನ್ನ ಕರ್ತವ್ಯವನ್ನು ನಿರ್ವಹಿಸಬೇಕೆಂದು ಛಲವಾದಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.