ಮೇಲುಕೋಟೆಯ ರಾಮಾನುಜಾಚಾರ್ಯರು
ಮೇಲುಕೋಟೆ: ಚೆಲುವನಾರಾಯಣಸ್ವಾಮಿ ದಿವ್ಯಕ್ಷೇತ್ರ ಜೀರ್ಣೋದ್ಧಾರಗೊಂಡ ವಿಶ್ವಾವಸುನಾಮ ಸಂವತ್ಸರದ ವಾರ್ಷಿಕ ವಿಶೇಷ ತೈ ಪುನರ್ವಸು ಉತ್ಸವ ಜ.31ರಂದು ವಿಜೃಂಭಣೆಯಿಂದ ನೆರವೇರಲಿದೆ.
ಅಂದು ಮೇಲಕೋಟೆ ದೇವಾಲಯದಲ್ಲಿ ಇಡೀ ದಿನ ಧಾರ್ಮಿಕ ಕೈಂಕರ್ಯ ನೆರವೇರಲಿವೆ. ಶ್ರೀ ಭಾಷ್ಯಕಾರ ಸನ್ನಿಧಿ ವಂಗೀಪುರಂ ನಂಬಿ ಮನೆತನ ಪ್ರತಿವರ್ಷ ಈ ಮಹೋತ್ಸವವನ್ನು ವೈಭವದಿಂದ ನಡೆಸಿಕೊಂಡು ಬರುತ್ತಿದೆ. ರಾಮಾನುಜರ ಸನ್ನಿಧಿ ಅರ್ಚಕ ವಿದ್ವಾನ್ ಬಿ.ವಿ ಆನಂದಾಳ್ವಾರ್ ನೇತೃತ್ವದಲ್ಲಿ ಉತ್ಸವದ ಕೈಂಕರ್ಯಗಳು ನಡೆಯಲಿದ್ದು, ಪುನರ್ವಸು ಉತ್ಸವಕ್ಕಾಗಿ ದೇವಾಲಯ ಸಜ್ಜುಗೊಳ್ಳುತ್ತಿದೆ.
ಫೆ.1ರಂದು ಬೆಳಗ್ಗೆ 4 ಗಂಟೆಗೆ ರಾಮಾನುಜರಿಗೆ ಅಭಿಷೇಕ, 6 ಗಂಟೆಗೆ ಕಲ್ಯಾಣಿ ಉತ್ಸವ, 8-30ಕ್ಕೆ ಶ್ವೇತವಸ್ತ್ರಧಾರಣೆ ಗಧ್ಯತ್ರಯಗೋಷ್ಠಿ ತಿರುಪ್ಪಾವೈ ಶಾತ್ತುಮೊರೆ ನಡೆದು 10 ಗಂಟೆಗೆ ದೇವಾಲಯಕ್ಕೆ ರಾಮಾನುಜರ ಉತ್ಸವ ಆರಂಭವಾಗಲಿದೆ.
12 ಗಂಟೆಗೆ ದೇವಾಲಯದ ರಾಜಗೋಪುರದ ಬಳಿ ರಾಮಾನುಜ ನೂತ್ತಂದಾದಿ ಶಾತ್ತುಮೊರೆ ನಡೆಯಲಿದೆ. ಹುತ್ತಕರಗಿಸಿ ರಾಮಾನುಜರು ತಿರುನಾರಾಯಣನನ್ನು ಕಂಡು ನಿಜವಾದ ಬೆಳಕುಕಂಡೆ ನಾರಾಯಣನ ದರ್ಶನಮಾಡಿದೆ ಎಂದು ತಮಿಳಿನಲ್ಲಿ ಸ್ತುತಿಸಿದ ಪಾಶುರದ ಪಾರಾಯಣ ನಡೆಯಲಿದೆ. 12.30ಕ್ಕೆ ವಂಗೀಪುರಂ ಮನೆತನದಿಂದ ಸ್ವಾಮಿಗೆ ನೂರಾರು ತಟ್ಟೆಗಳಲ್ಲಿ ಫಲಪುಷ್ಪ ಸಮರ್ಪಣೆಯ ಕೈಂಕರ್ಯ ನಡೆಯಲಿದೆ. 1.30ರ ವೇಳೆಗೆ ತಿರುವಾರಾಧನೆ, ತೀರ್ಥಗೋಷ್ಠಿಗಳು ನಡೆಯಲಿವೆ. ರಾತ್ರಿ 8 ಗಂಟೆಗೆ ರಾತ್ರಿ ಪೂಜೆ ನಂತರ ರಾಮಾನುಜರ ಉತ್ಸವ ಸ್ವಸ್ಥಾನಕ್ಕೆ ತಲುಪಲಿದೆ. ಇದಕ್ಕೂ ಮುನ್ನಾ ದಿನ ಶುಕ್ರವಾರ ಬೆಳಗ್ಗೆ ಆರಿದ್ರಾ ಮಾಸತಿರುನಕ್ಷತ್ರದ ಅಂಗವಾಗಿ ರಾಮಾನುಜಾಚಾರ್ಯರಿಗೆ ಅಭಿಷೇಕ, ಸಂಜೆ ಬೆಳ್ಳಿಯ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ನೆರವೇರಲಿದೆ. ರಾತ್ರಿ ಚೆಲುವನಾರಾಯಣಸ್ವಾಮಿಗೆ ಮಹಾಲಕ್ಷ್ಮಿ ಸನ್ನಿಧಿಗೆ ಶುಕ್ರವಾರಗಟ್ಟಲೆ ಉತ್ಸವ ಸಹ ನಡೆಯಲಿದೆ.
ಭಕ್ತರಿಗೆ ದೇವರದರ್ಶನ ಇಲ್ಲ : ಜ.31 ರಂದು ಪುನರ್ವಸು ಉತ್ಸವದ ಧಾರ್ಮಿಕ ಕೈಂಕರ್ಯ ನಡೆಯುವ ಕಾರಣ ಮಧ್ಯಾಹ್ನ 4 ಗಂಟೆಯವರೆಗೆ ಭಕ್ತರಿಗೆ ಚೆಲುವನಾರಾಯಣಸ್ವಾಮಿ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಧಾರ್ಮಿಕ ಕೈಂಕರ್ಯಗಳು ಮುಕ್ತಾಯವಾದ ನಂತರ ದರ್ಶನಕ್ಕೆ ಅವಕಾಶವಿದೆ. ಆದರೆ ಬೆಟ್ಟದೊಡೆಯ ಯೋಗಾನರಸಿಂಹನ ದೇವಾಲಯದಲ್ಲಿ ದೇವರದರ್ಶನ ಎಂದಿನಂತೆ ಇರಲಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ತಿಳಿಸಿದ್ದಾರೆ .