Lokayukta > 50 ಲಕ್ಷ ರೂ. ಜತೆಗೆ 1 ಎಕರೆ ಜಮೀನಿಗೆ ಬೇಡಿಕೆ ಇಟ್ಟ ತಹಸೀಲ್ದಾರ್ ಲೋಕಾ ಬಲೆಗೆ 
ರಾಜ್ಯ

50 ಲಕ್ಷ ರೂ. ಜತೆಗೆ 1 ಎಕರೆ ಜಮೀನಿಗೆ ಬೇಡಿಕೆ ಇಟ್ಟ ತಹಸೀಲ್ದಾರ್ ಲೋಕಾ ಬಲೆಗೆ

ಧಾರವಾಡ: ಜಮೀನಿನ ‘ಬ’ ಖರಾಬು ಬದಲಾವಣೆ ಮಾಡಿ ಕೊಡಲು 50 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಧಾರವಾಡ ತಹಸೀಲ್ದಾರ್ ಸಚ್ಚಿದಾನಂದ ಕುಚನೂರ ಅವರನ್ನು ಲೋಕಾಯುಕ್ತ ಪೊಲೀಸರು ಬುಧವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ.
ಬಾಗಲಕೋಟೆ ಜಿಲ್ಲೆ ಮೂಲದ ಮಂಜುನಾಥ ಅರಳಿಕಟ್ಟಿ ಎಂಬುವರ ಜಮೀನಿನ ‘ಬ’ ಖರಾಬು ಬದಲಾವಣೆ ಮಾಡಿಕೊಡಲು ತಹಶೀಲ್ದಾರ್ ಸಚ್ಚಿದಾನಂದ 50 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಇದರೊಂದಿಗೆ ಒಂದು ಎಕರೆ ಜಮೀನನ್ನೂ ಕೇಳಿದ್ದರು ಎಂಬ ಆರೋಪ ಕೇಳಿಬಂದಿತ್ತು. ಮಂಜುನಾಥ ಅವರ ಜಮೀನು ಧಾರವಾಡ ತಾಲೂಕಿನಲ್ಲಿದೆ. ಈ ಜಮೀನಿನ ವಿಚಾರವಾಗಿ ಮಾಲೀಕ ಲೋಕಾಯುಕ್ತರಿಗೆ ದೂರು ದಾಖಲಿಸಿದ್ದರು.
ನಗರದ ಕೆಸಿಡಿ ಮೈದಾನದಲ್ಲಿ ತಹಸೀಲ್ದಾರ್ 50 ಲಕ್ಷ ರೂ. ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ತಹಸೀಲ್ದಾರ್ ಸಚ್ಚಿದಾನಂದ ಸಿಕ್ಕಿಬಿದ್ದಿದ್ದಾರೆ. ಲೋಕಾಯುಕ್ತ ಎಸ್‌ಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ದಾಳಿ ನಡೆದಿದೆ. ತಹಸೀಲ್ದಾರ್ ಸಚ್ಚಿದಾನಂದ ಅವರನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಜಿಲ್ಲೆಯಲ್ಲಿ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ತಹಸೀಲ್ದಾರ್‌ವೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಮೊದಲ ಪ್ರಕರಣ ಇದಾಗಿದೆ.