ಸಾಂದರ್ಭಿಕ ಚಿತ್ರ 
ರಾಜ್ಯ

ಕರ್ನಾಟಕದಲ್ಲೇ ಸಿಂಥೆಟಿಕ್ ಡ್ರಗ್ಸ್ ತಯಾರಿಕೆ ಅಡ್ಡೆಗಳು

ಪ್ರಮುಖ ಮುಖ್ಯಾಂಶಗಳು

  • ಅಪಾಯಕಾರಿ ರಾಸಾಯನಿಕ ಬಳಕೆ
  • ಮುಂಬೈ ಪೊಲೀಸರ ದಾಳಿ, ರಾಜ್ಯದ ಪೊಲೀಸರ ಹದ್ದಿನ ಕಣ್ಣು,
  • ಬೆಂಗಳೂರು, ಮೈಸೂರಲ್ಲಿ ಡ್ರಗ್ಸ್ ತಯಾರಿ ಘಟಕ

ರವಿ ನಾಯಕ್

ಬೆಂಗಳೂರು: ರಾಜ್ಯಕ್ಕೆ ವಿದೇಶದಿಂದ ಹಾಗೂ ನೆರೆಯ ರಾಜ್ಯಗಳಿಂದ ಡ್ರಗ್ಸ್ ಸಾಗಾಟವಾಗುತ್ತಿರುವುದು ಒಂದು ಕಡೆಯಾದರೆ, ಕಳೆದ ಒಂದೇರಡು ವರ್ಷದಲ್ಲಿ ಪೆಡ್ಲರ್ಸ್‌ಗಳು ಕರ್ನಾಟಕವನ್ನೇ ಮಾದಕ ವಸ್ತು ಉತ್ಪಾದನಾ ನೆಲೆಯಾಗಿ ಬಳಸಲು ಆರಂಭಿಸಿದ್ದಾರೆ.
ಮೈಸೂರು ಮತ್ತು ಬೆಂಗಳೂರು ಹೊರವಲಯಗಳಲ್ಲಿ ಗುಪ್ತವಾಗಿ ಡ್ರಗ್ಸ್ ತಯಾರಿಕಾ ಘಟಕಗಳು ಸ್ಥಾಪನೆಗೊಂಡಿದ್ದಾರೆ. ಅಲ್ಲಿಂದಲೇ ಸಿಂಥೆಟಿಕ್ ಮಾದಕ ವಸ್ತುಗಳನ್ನು ತಯಾರಿಸಿ ರಾಜ್ಯದ ವಿವಿಧ ಭಾಗಗಳಿಗೆ ಪೂರೈಕೆ ಮಾಡಲಾಗುತ್ತಿರುವುದು ಕಾನೂನು ಜಾರಿ ಸಂಸ್ಥೆಗಳ ತನಿಖೆಯಲ್ಲಿ ಬಹಿರಂಗವಾಗಿದೆ.
ಅಪಾಯಕಾರಿ ರಸಾಯನಿಕ ಬಳಕೆ:
ಕರ್ನಾಟಕದಲ್ಲಿ ಡ್ರಗ್ಸ್ ಮಾಫಿಯಾ ಹೊಸ ಹಂತಕ್ಕೆ ಕಾಲಿಟ್ಟಿದೆ. ಪೂರೈಕೆಯಿಂದ ಉತ್ಪಾದನೆಗೆ ಬದಲಾದ ಜಾಲ ರಾಜಾರೋಷವಾಗಿ ಡ್ರಗ್ಸ್ ಉತ್ಪಾದನೆ ಮಾಡುತ್ತಿದ್ದಾರೆ. ಬೆಂಗಳೂರು-ಮೈಸೂರು ಹೊರವಲಯಗಳಲ್ಲಿ ಮುಂಬೈ ಪೊಲೀಸರು ಆಗಮಿಸಿ ನಡೆಸಿದ ವಿಶೇಷ ಕಾರ್ಯಾಚರಣೆ ವೇಳೆ ರಾಸಾಯನಿಕ ಅಂಗಡಿ, ಲ್ಯಾಬ್ ಮೆಟೀರಿಯಲ್ ಸರಬರಾಜು, ಕೈಗಾರಿಕಾ ಗೋದಾಮುಗಳ ಪರಿಶೀಲನೆ, ಬಾಡಿಗೆ ಫಾರ್ಮ್‌ಹೌಸ್, ಶೆಡ್‌ಗಳಲ್ಲಿ ನಶೆಯುಕ್ತ ರಸಾಯನಿಕ ಬಳಸಿ ಸಿಂಥೆಟಿಕ್ ಟ್ರಗ್ಸ್ ಉತ್ಪಾದನೆ ಮಾಡುತ್ತಿರುವುದು ಕಂಡು ಬಂದಿದೆ.
ಮೈಸೂರು ಭಾಗದ ಹೊರವಲಯದಲ್ಲಿ ನಡೆಸಿದ ವಾಳೆ ವೇಳೆ ಬರೋಬ್ಬರಿ 390 ಕೋಟಿ ರೂ.ಮೌಲ್ಯದ ವಿವಿಧ ಮಾದರಿಯ ಡ್ರಗ್ಸ್ ತಯಾರಿಕಾ ವಸ್ತುಗಳು ಪತ್ತೆಯಾಗಿವೆ. ಅಲ್ಲದೇ ಬೆಂಗಳೂರು ವ್ಯಾಪ್ತಿಯಲ್ಲಿ 51 ಕೋಟಿ ರೂ.ಮೌಲ್ಯದ ಡ್ರಗ್ಸ್ ಪತ್ತೆಯಾಗಿದೆ. ಈ ಪ್ರಕರಣವನ್ನು ಬಂಭೀರವಾಗಿ ಪಡೆದಿದ್ದ ನಗರ ಪೊಲೀಸ್ ಆಯುಕ್ತರು ಕೊತ್ತನೂರು, ಬಾಗಲೂರು, ಅವಲಹಳ್ಳಿ ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು ಅಮಾನತು ಮಾಡಿ, ಆದೇಶಿಸಿದ್ದರು.

ಹೊರ ರಾಜ್ಯದವರಿಂದ ಕೃತ್ಯ:

ರಾಜ್ಯದ ವಿವಿಧ ಜಿಲ್ಲೆಯಲ್ಲಿ ಮಾದಕ ವಸ್ತು ತಯಾರಿ ಘಟಕಗಳ ಮೇಲೆ ನಡೆದ ದಾಳಿ ವೇಳೆ, ಪತ್ತೆಯಾದ ಬಂಧಿತರು ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ ಮೂಲದವರಾಗಿದ್ದಾರೆ. farmhouseಗಳನ್ನು ರೈತರಿಂದ ತಿಂಗಳ ಬಾಡಿಗೆ ಲೆಕ್ಕದಲ್ಲಿ ಪಡೆದು ಅವುಗಳಲ್ಲಿ ಕಾನೂನು ಬಾಹಿರ ಕೃತ್ಯ ಎಸಗುತ್ತಿರುವ ಅಂಶ ಬೆಳಕಿಗೆ ಬಂದಿದೆ. ಈ ರೀತಿಯ ದಂಧೆ ಜಿಲ್ಲೆ, ತಾಲೂಕು ಮಟ್ಟದಲ್ಲಿ ನಡೆಯುತ್ತಿದೆ. ಮುಂಬೈ ಪೊಲೀಸರ ತಾಳಿ ನಂತರ ಎಚ್ಚೆತ್ತ ರಾಜ್ಯದ ಪೊಲೀಸರು ಎಲ್ಲ ಕಡೆ ಹದ್ದಿನ ಕಣ್ಣು ಇರಿಸಿದ್ದಾರೆ.
ವಿದೇಶಗಳಿಂದ ಡ್ರಗ್ಸ್ ತಯಾರಿಕೆ ಬೆಕಾಗುವ ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಂಡು ಎಂಡಿಎಂ, ಕೊಕೇನ್ ತಯಾರಿ ದಂಧೆಯಲ್ಲಿ ತೋಡಗಿದ್ದಾರೆ. ಇನ್ನೂ ಬೆಂಗಳೂರು, ಮಂಗಳೂರಂತಹ ನಗರದಲ್ಲಿ ಪೊಲೀಸ್ ಇಲಾಖೆ ಕಣ್ಣು ತಪ್ಪಿಸಿ ಡ್ರಗ್ಸ್ ತಯಾರಿ ಮಾಡಲಾಗುತ್ತಿದೆ. ವಿಶೇಷವಾಗಿ ಜನಸಂಚಾರ ಕಡಿಮೆ ಇರುವ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಅಕ್ರಮದಾರರು, ರಾತ್ರಿ ವೇಳೆ ಮಾತ್ರ ಚುಟುವಟಿಕೆ ನಡೆಯುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಪೊಲೀಸರು ಎಷ್ಟೇ ನಿಗಾ ಇಟ್ಟಿದ್ದರು ಅಕ್ರಮವಾಗಿ ರಾಜ್ಯದಲ್ಲಿ ಸಿಂಥೆಟಿಕ್ಸ್ ಡ್ರಗ್ಸ್ ತಯಾರಿಕಾ ದಂಧೆ ನಡೆಯುತ್ತಿದೆ. ಕರ್ನಾಟಕವು ಕೇವಲ ಡ್ರಗ್ಸ್ ಮಾರುಕಟ್ಟೆಯಲ್ಲ ಡ್ರಗ್ಸ್ ಉತ್ಪಾದನಾ ಕೇಂದ್ರವಾಗುವ ಅಪಾಯ ಎದುರಿಸುತ್ತಿದೆ.

ಪರಿಣಿತರಿಂದ ಉತ್ಪಾದನೆ:

ಕಚ್ಚಾ ವಸ್ತುಗಳನ್ನು ಬಳಕೆ ಮಾಡಿಕೊಂಡು ಸಿಂಥೆಟಿಕ್ ಡ್ರಗ್ಸ್ ತಯಾರಿ ಮಾಡಲು ಸಾಮಾನ್ಯ ಅಪರಾಧಿಗಳಿಂದ ಸಾಧ್ಯವಾಗುವುದಿಲ್ಲ. ಇದಕ್ಕೆ ರಾಸಾಯನಿಕ ಜ್ಞಾನ, ಸರಬರಾಜು ಜಾಲ, ಹಣಕಾಸು ಬೆಂಬಲ, ಸುರಕ್ಷಿತ ಅಡ್ಡೆಗಳು ಮತ್ತು ತಾಂತ್ರಿಕ ಸಂಪರ್ಕ ಹೊಂದಿದ ಪರಿಣತರು ಬೇಕಾಗುತ್ತದೆ. ಅನುಭವಿಗಳ ಪೆಡ್ಲರ್‌ಗಳನ್ನು ಬಳಕೆ ಮಾಡಿಕೊಂಡು ಡ್ರಗ್ಸ್ ತಯಾರಿಕಾ ಘಟಕಗಳು ವ್ಯವಸ್ಥಿತವಾಗಿ ನಡೆಯುತ್ತಿವೆ.
ಸ್ಥಳೀಯವಾಗಿ ತಯಾರಾಗುವ ಡ್ರಗ್ಸ್, ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಶಿವಮೊಗ್ಗದಂತಹ ನಗರಗಳಿಗೆ ತಲುಪಿಸುವುದು ಸುಲಭವಾಗುತ್ತದೆ. ಅಲ್ಲದೇ ಬೆಲೆ ಕಡಿಮೆ, ಬಳಕೆ ಹೆಚ್ಚಳವಾಗುತ್ತಿದೆ. ಹೊರಗಿನಿಂದ ಸಾಗಾಟದ ವೆಚ್ಚ ಕಡಿಮೆಯಾಗುವುದರಿಂದ ಡ್ರಗ್ಸ್ ಬೆಲೆ ಕಡಿಮೆಯಾಗಬಹುದು. ಇದು ಯುವಜನರಿಗೆ ಇನ್ನಷ್ಟು ಸುಲಭವಾಗಿ ಲಭ್ಯವಾಗುತ್ತದೆ. ಪ್ಯಾಕೇಜಿಂಗ್, ಸ್ಟೋರೇಜ್, ಟ್ರಾನ್ಸ್‌ಪೋರ್ಟ್ ಎಲ್ಲವೂ ಸ್ಥಳೀಯ ಮಟ್ಟದಲ್ಲೇ ನಡೆಯುವುದರಿಂದ ಕಡಿಮೆ ಅವಧಿಯಲ್ಲಿ ಅಧಿಕ ಲಾಭ ಮಾಡಿಕೊಳ್ಳುವ ಉದ್ದೇಶವಾಗಿದೆ.

ಸಣ್ಣ ಪೆಡ್ಲಸ್ ದೊಡ್ಡ ಜಾಲಕ್ಕೆ ಸಂಪರ್ಕ:

ಬೆಲೆಬಾಳುವ ಡ್ರಗ್ಸ್ ಲೋಕಲ್ ಉತ್ಪಾದನೆಯಿಂದ ಕಾಲೇಜು, ಪಬ್, ಹಾಸ್ಟೆಲ್, ಪಾರ್ಟಿ ವಲಯ, ಆನ್‌ಲೈನ್ ಡೆಲಿವರಿ ಜಾಲಗಳಿಗೆ ನೇರ ಸಂಪರ್ಕ ಹೊಂದಿರುವ ಸಾಧ್ಯತೆ ಇದೆ.

ಯಾವ ರೀತಿಯ ಡ್ರಗ್ಸ್ ತಯಾರಾಗುತ್ತಿವೆ?

ನಿಷೇಧಿ ಮಾದಕ ವಸ್ತು ತಯಾರಿಕಾ ಘಟಕಗಳಲ್ಲಿ ಕೇವಲ ಗಾಂಜಾ ಸಂಗ್ರಹ ಅಥವಾ ಪುಡಿ ಮಿಶ್ರಣ ಮಾತ್ರವಲ್ಲ. ಇಂತಹ ಅಡ್ಡೆಗಳಲ್ಲಿ ಪಾರ್ಟಿ ಡ್ರಗ್ಸ್, ಹೆಚ್ಚು ನಶೆಯುಕ್ತ ವಸ್ತು ತಯಾರಿಕೆ, ಟ್ಯಾಬ್ಲೆಟ್ ಮಾದರಿ ಡ್ರಗ್ಸ್, ಕ್ರಿಸ್ಟಲ್ನ್ನು ಪೌಡರ್ ರೂಪಕ್ಕೆ ಪರಿವರ್ತನೆ, ಸಣ್ಣ ಪ್ಯಾಕೆಟ್‌ಗಳಲ್ಲಿ ಪ್ಯಾಕಿಂಗ್ ಮಾಡಿ ನಗರಗಳಿಗೆ ರವಾನೆ, ಕೃತಕ ಲೇಬಲ್‌ಗಳೊಂದಿಗೆ ಔಷಧ, ಕಾಸ್ಮೆಟಿಕ್, ಫುಡ್ ಪ್ಯಾಕ್‌ಗಳಲ್ಲಿ ಮರೆಮಾಚಿ ಕೂಲಿ ಕಾರ್ಮಿಕರಿಂದ ಹಿಡಿದಿ ಶ್ರೀಮಂತ ವರ್ಗದ ಯುವಕರು ಸಲಿಸಲಾಗಿ ಬಳಕೆ ಮಾಡುವ ಮಾದರಿಯ ವಿವಿಧ ರೂಪದ ಡ್ರಗ್ಸ್ ಘಟಕಗಳನ್ನು ಉತ್ಪಾದನೆ ಮಾಡಲಾಗುತ್ತಿದೆ.

ಮೈಸೂರು, ಬೆಂಗಳೂರು ಯಾಕೆ ಹಾಟ್‌ಸ್ಪಾಟ್ ಆಗುತ್ತಿದೆ?

ಮೈಸೂರು ಶಾಂತ ನಗರ ಎಂಬ ಹೆಸರು ಹೊಂದಿದ್ದರೂ, ಅದರ ಸುತ್ತಲಿನ ಪ್ರದೇಶಗಳು ಈಗ ಡ್ರಗ್ಸ್ ಜಾಲದ ಲಾಜಿಸ್ಟಿಕ್ ಬೆಲ್ಟ್ ಆಗಿ ಬಳಸಲ್ಪಡುವ ಅಪಾಯ ಉಂಟಾಗಿದೆ. ಬೆಂಗಳೂರು ಸಂಪರ್ಕ, ಪ್ರವಾಸೋದ್ಯಮ, ಹೊರವಲಯದ ಫಾರ್ಮ್‌ಹೌಸ್ ಸಂಸ್ಕೃತಿ, ಬಾಡಿಗೆ ಆಸ್ತಿಗಳ ಲಭ್ಯತೆಗಳೆಲ್ಲವೂ ಸೇರಿ ಮೈಸೂರನ್ನೂ ಡ್ರಗ್ಸ್ ಉತ್ಪದನಾ ಜಾಲದ ಭಾಗವನ್ನಾಗಿಸಲಾಗುತ್ತಿದೆ.
ವಿಶೇಷವಾಗಿ, ನಗರಕ್ಕಿಂತ ಹೊರಗಿನ ಪ್ರದೇಶಗಳಲ್ಲಿ ಅನುಮಾನಾಸ್ಪದ ಚಟುವಟಿಕೆ ನಡೆದರೂ ತಕ್ಷಣ ಗಮನಕ್ಕೆ ಬಾರದಿರುವುದು ಮಾಫಿಯಾಗೆ ಅನುಕೂಲ. ಡ್ರಗ್ಸ್ ತಯಾರಿಕಾ ಘಟಕ ಎಂದರೆ ಅದು ಒಬ್ಬ ವ್ಯಕ್ತಿಯಿಂದ ನಿರ್ವಹಣೆ ಮಾಡಲು ಆಗವುದಿಲ್ಲ. ಕಚ್ಚಾ ವಸ್ತು ಪೂರೈಕೆ, ರಾಸಾಯನಿಕ ಪದಾರ್ಥಗಳು, ಪ್ರಿಕರ್ಸರ್ ಮೆಟೀರಿಯಲ್ಸ್, ಮಿಶ್ರಣ ದ್ರವ್ಯಗಳು ಹೊರ ರಾಜ್ಯ, ವಿದೇಶದಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ನಗರ ಹೊರವಲಯದ ಬಾಡಿಗೆ ಮನೆ, ಶೆಡ್, ಗೋದಾಮು, ಫಾರ್ಮ್‌ಹೌಸ್‌ಗಳನ್ನು ಸುರಕ್ಷಿತ ವಲಯದಲ್ಲಿ ನೋಡಿಕೊಳ್ಳಬೇಕಾಗಿದೆ. ಬೆಂಗಳೂರು ಮಹಾನಗರದಲ್ಲಿ ಕೋಟ್ಯಂತರ ಜನ ಸಂಖ್ಯೆ ಇರುವುದರಿಂದ ಇಲ್ಲಿ ಡ್ರಗ್ಸ್ ಮಾರಾಟ ಸುಲಭವಾಗಲಿದೆ ಎನ್ನಲಾಗಿದೆ.

ರಾಜ್ಯದ ಭದ್ರತಾ ವ್ಯವಸ್ಥೆಗೆ ದೊಡ್ಡ ಸವಾಲು

ನಿಷೇಧಿತ ಮಾದಕ ವಸ್ತು ಪೂರೈಕೆ ಜಾಲವನ್ನು ತಡೆಯುವುದು ಒಂದು ಹಂತವಾದರೆ, ಉತ್ಪಾದನಾ ಜಾಲವನ್ನು ಬೇರು ಸಹಿತ ಕಿತ್ತೊಗೆಯುವುದು ಅತ್ಯವಶ್ಯಕ ಹಂತವಾಗಿದೆ. ಇಲ್ಲವಾದರೆ ಕರ್ನಾಟಕವು ಡ್ರಗ್ಸ್ ಮಾರಾಟದ ಮಾರುಕಟ್ಟೆಯಿಂದ ಡ್ರಗ್ಸ್ ಉತ್ಪಾದನೆ ಮತ್ತು ವಿತರಣೆಯ ಪ್ರಮುಖ ಕೇಂದ್ರವಾಗಲಿದೆ.
ಮಹಾರಾಷ್ಟ್ರ ಎಎನ್‌ಟಿಎಫ್‌ನಿಂದ ಬೆಂಗಳೂರಲ್ಲಿ ಮೂರು ಡ್ರಗ್ಸ್ ಫ್ಯಾಕ್ಟರಿಗಳನ್ನು ಸೀಜ್ ಮಾಡಿ, ಬರೋಬ್ಬರಿ 55.88 ಕೋಟಿ ರೂ. ಮೌಲ್ಯದ ಎಂಡಿಎಂಎ, ಸಿಂಥೆಟಿಕ್ ಡ್ರಗ್ಸ್‌ಅನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಇದೇ ವೇಳೆ ನಾಲ್ವರು ಆರೋಪಿಗಳನ್ನು ಕೂಡ ಬಂಧನ ಮಾಡಿದ್ದರು. ಮುಂಬೈನಲ್ಲಿ 1.5 ಕೋಟಿ ರೂ. ಮೌಲ್ಯದ ಡ್ರಗ್ಸ ಸೀಜ್ ಆಗಿತ್ತು. ಅಲ್ಲಿ ಅಬ್ದುಲ್ಲ ಖಾದರ್ ಶೇಕ್ ಎಂಬಾತನ ಬಂಧನವಾಗಿತ್ತು. ವಿಚಾರಣೆ ನಂತರ ಬೆಳಗಾವಿಯ ಪ್ರಶಾಂತ್ ಯಲ್ಲಪ್ಪ ಪಾಟೀಲ್ ಬಂಧಿಸಲಾಗಿತ್ತು. ಪಾಟೀಲ್ ಮಾಹಿತಿ ಮೇರೆಗೆ ಬೆಂಗಳೂರಿನ ಮೂರು ಕಡೆ ದಾಳಿ ನಡೆಸಲಾಗಿತ್ತು. ಈ ವೇಳೆ ರಾಜಸ್ಥಾನದ ಸೂರಜ್ ರಮೇಶ್ ಯಾದವ್ ಮತ್ತು ಮಲ್ಕಾನ್ ರಾಮಲಾಲ್ ಬಿಷ್ಣೋಯ್ ಎಂಬುವರು ಬಂಧನವಾಗಿತ್ತು.