- * ಪ್ರಶಸ್ತಿಯು 10 ಸಾವಿರ ರೂ. ನಗದು ಒಳಗೊಂಡಿದೆ
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನೀಡುವ ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿಗೆ ಲೇಖಕ ಎಚ್.ಆರ್. ಸ್ವಾಮಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 10 ಸಾವಿರ ರೂ. ನಗದು ಒಳಗೊಂಡಿದೆ. ಶ್ರವಣಬೆಳಗೊಳದಲ್ಲಿ ನಡೆದ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯಸಮ್ಮೇನದ ಸ್ಮರಣಾರ್ಥ, ಸಮ್ಮೇಳನಾಧ್ಯಕ್ಷರಾಗಿದ್ದ ಕವಿ ಸಿದ್ದಲಿಂಗಯ್ಯ ಹೆಸರಿನಲ್ಲಿ ಈ ಸಾಹಿತ್ಯ ದತ್ತಿ ಪುರಸ್ಕಾರ ಸ್ಥಾಪಿಸಲಾಗಿದೆ. ಸಿದ್ದಲಿಂಗಯ್ಯಅವರ ತಾತ್ವಿಕತೆಯನ್ನು ಸಮರ್ಥವಾಗಿ ವಿವಿಧ ಮಾಧ್ಯಮಗಳ ಮೂಲಕ ಬಿಂಬಿಸುತ್ತಿರುವ ಸಾಧಕರಿಗೆ ಈ ಪುರಸ್ಕಾರ ನೀಡಲಾಗುತ್ತಿದೆ. ಪರಿಷತ್ತಿನ ಆಡಳಿತಾಧಿಕಾರಿ ಕೆ.ಎ. ದಯಾನಂದ ಅಧ್ಯಕ್ಷತೆಯಲ್ಲಿ, ರಾಜಪ್ಪ ದಳವಾಯಿ, ಶ್ರೀದೇವಿ ಕೆರೆಮನೆ ಮತ್ತು ದತ್ತಿ ದಾನಿಗಳಾದ ರಮಾಕುಮಾರಿ ಸಿದ್ದಲಿಂಗಯ್ಯ ಮತ್ತು ಮಾನಸಾ ಸಿದ್ದಲಿಂಗಯ್ಯ ಅವರನ್ನು ಒಳಗೊಂಡ ಸಮಿತಿ ಈ ಆಯ್ಕೆ ಮಾಡಿದೆ. ಎಚ್.ಆರ್. ಸ್ವಾಮಿ ಅವರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಕೊರಚರಹಟ್ಟಿ ಗ್ರಾಮದವರು. ಅಲೆಮಾರಿ ಸಮುದಾಯವಾದ ಕೊರಚ ಜನಾಂಗದವರಾದ ಅವರು, ದಲಿತ-ರೈತ-ವಿಜ್ಞಾನ ಚಳವಳಿ, ಪರಿಸರ ಹಾಗೂ ರಂಗ ಚಟುವಟಿಕೆ ಮತ್ತು ಇತರ ಪ್ರಗತಿಪರ ಆಂದೋಲನಗಳಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಕಸಾಪ ತಿಳಿಸಿದೆ.