- ವಿಸ್ತರಿಸಲು ಸಮರ್ಥನೀಯ ಕಾರಣ ಅಗತ್ಯ
- ಶಿಕ್ಷಕರಿಬ್ಬರ ತಡೆಹಿಡಿದ ವೇತನ ಪಾವತಿಗೆ ಹೈಕೋರ್ಟ್ ಆದೇಶ
ಬೆಂಗಳೂರು: ಸಮರ್ಥನೀಯ ಕಾರಣಗಳಿಲ್ಲದೆ ಶಿಸ್ತುಕ್ರಮದ ಹೆಸರಿನಲ್ಲಿ ಶಿಕ್ಷಕರನ್ನು 6 ತಿಂಗಳಿಗಿಂತ ಕಾಲ ಅಮಾನತಿನಲ್ಲಿಡುವುದು 1983ರ ಕರ್ನಾಟಕ ಶಿಕ್ಷಣ ಕಾಯ್ದೆಯ ಉಲ್ಲಂನೆಯಾಗಿದೆ ಎಂದಿರುವ ಹೈಕೋರ್ಟ್, 2023ರಿಂದ ಅಮಾನತಿನಲ್ಲಿರುವ ಶಿಕ್ಷಕರಿಬ್ಬರಿಗೆ ತಡೆಹಿಡಿಯಲಾಗಿದ್ದ ಪೂರ್ಣ ವೇತನ ಹಾಗೂ ಇತರ ಸೌಲಭ್ಯಗಳನ್ನು ಪಾವತಿಸುವಂತೆ ಶಾಲಾ ಆಡಳಿತ ಮಂಡಳಿಗೆ ಸೂಚಿಸಿದೆ.
ಶಿಕ್ಷಕರಾದ ಎಸ್.ಒ. ಮಂಜಣ್ಣ ಮತ್ತು ಜಿ.ಸಿ. ಸತೀಶ್ ಎಂಬವರನ್ನು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಾಪೂಜಿ ವಿದ್ಯಾಸಂಸ್ಥೆಯು 2023ರ ಜು.10ರಂದು ದುರ್ನಡತೆ ಆರೋಪದಲ್ಲಿ ಅಮಾನತುಗೊಳಿಸಿ, ಆಂತರಿಕ ತನಿಖೆಗೆ ಆದೇಶಿಸಿತ್ತು.
ಈ ಆಮಾನತು ಆದೇಶದ ವಿರುದ್ಧ ಮತ್ತು ಬಾಕಿ ಇರುವ ಜೀವನಾಧಾರ ಭತ್ಯೆ ಪಾವತಿಸಲು ನಿರ್ದೇಶನ ನೀಡುವಂತೆ ಕೋರಿ ಶಿಕ್ಷಕರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಏಕಸದಸ್ಯ ನ್ಯಾಯಾಪೀಠ ಪುರಸ್ಕರಿಸಿತ್ತು. ಈ ತೀರ್ಪಿನ ವಿರುದ್ಧ ಶಾಲಾ ಆಡಳಿತ ಮಂಡಳಿ ಮೇಲ್ಮನವಿ ಸಲ್ಲಿಸಿತ್ತು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ತಾರಾ ವಿತಸ್ತ ಗಂಜು ಅವರಿದ್ದ ವಿಭಾಗೀಯ ನ್ಯಾಯಪೀಠ, ಯಾವುದೇ ಸಮರ್ಥನೀಯ ಕಾರಣಗಳಿಲ್ಲದೆ ಶಿಕ್ಷಕರನ್ನು ಆರು ತಿಂಗಳಿಗಿಂತ ಹೆಚ್ಚು ಕಾಲ ಅಮಾನತಿನಲ್ಲಿಡುವುದು ಕಾನೂನುಬಾಹಿರ. ಕರ್ನಾಟಕ ಶಿಕ್ಷಣ ಕಾಯ್ದೆಯ ನಿಯಮಗಳ ಪ್ರಕಾರ ಶಿಕ್ಷಕ ಅಥವಾ ಸಿಬ್ಬಂದಿಯ ಅಮಾನತು ಆದೇಶವು ಗರಿಷ್ಠ 6 ತಿಂಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಒಂದು ವೇಳೆ ಅಮಾನತು ಅವಧಿಯನ್ನು ವಿಸ್ತರಿಸಬೇಕಾದರೆ ಸರ್ಕಾರದಿಂದ ಸೂಕ್ತ ಅನುಮತಿ ಪಡೆಯುವುದು ಕಡ್ಡಾಯ ಎಂದು ತೀರ್ಪು ನೀಡಿದೆ.