ಪರಪ್ಪನ ಅಗ್ರಹಾರ 
ರಾಜ್ಯ

ಕರ್ನಾಟಕದ ಜೈಲುಗಳಲ್ಲಿರುವ ಶಂಕಿತರಿಗೆ ಉಗ್ರರ ನಂಟು

ಪ್ರಮುಖ ಮುಖ್ಯಾಂಶಗಳು

  • ಎನ್‌ಐಎಯಿಂದ ರಾಜ್ಯದ ಜೈಲುಗಳಲ್ಲಿನ ಉಗ್ರರ ತನಿಖೆ
  • ಪರಪ್ಪನ ಅಗ್ರಹಾರ, ಹಿಂಡಲಗಾ ಸೇರಿ 300ಕ್ಕೂ ಹೆಚ್ಚು ಉಗ್ರರು
  • ಜೈಲಿನಲ್ಲಿ ಮೊಬೈಲ್ ಬಳಸಿ ಉಗ್ರ ಸಂಘಟನೆ ಜತೆ ಸಂಪರ್ಕ
ಬೆಂಗಳೂರು: ದೆಹಲಿ ಕೆಂಪುಕೋಟೆ ಬಳಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಈಗಾಗಲೇ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹಾಗೂ ಕೇಂದ್ರ ಗುಪ್ತಚರ ಇಲಾಖೆ ಕರ್ನಾಟಕದ ಜೈಲುಗಳಲ್ಲಿರುವ ಉಗ್ರರ (terorre) ಮೇಲೆ ಶಂಕೆ ವ್ಯಕ್ತಪಡಿಸಿ ತನಿಖೆ ಆರಂಭಿಸಿದೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಹಾಗೂ ಬೆಳಗಾವಿ ಹಿಂಡಲಗಾ ಜೈಲು ಸೇರಿ ಕೇಂದ್ರ ಕಾರಾಗೃಹ ಬಳ್ಳಾರಿ ಜೈಲಿನಲ್ಲಿರುವ ಉಗ್ರರು ಹಾಗೂ ಕೈದಿಗಳು ಜೈಲಿನಲ್ಲಿದ್ದುಕೊಂಡೆ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವುದನ್ನು ಎನ್‌ಐಎ ಪತ್ತೆ ಮಾಡಿದೆ ಎನ್ನಲಾಗಿದೆ. ಪರಪ್ಪನ ಅಗ್ರಹಾರ ಹಾಗೂ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಸುಮಾರು 300ಕ್ಕೂ ಹೆಚ್ಚು ಉಗ್ರರು ಸೆರೆವಾಸ ಅನುಭವಿಸುತ್ತಿದ್ದಾರೆ. ಕೆಲ ಉಗ್ರರು ಜೈಲಿನಿಂದಲೆ ಐಸಿಎಸ್, ಲಷ್ಕರ್ ಎ -ತೋಯ್ಬ, ಅಲ್-ಖೈದಾ. ಜೈಷೆ, ಎಲ್‌ಇಟಿ ಸಂಘಟನೆಗಳ ಜತೆ ಸಂಪರ್ಕ ಹೊಂದಿರುವ ಬಗ್ಗೆ ಮಾಹಿತಿ ಕಲೆ ಹಾಕಿ ತನಿಖೆ ಆರಂಭಿಸಿದೆ.
ಕೆಂಪುಕೋಟೆ ಸ್ಫೋಟದಲ್ಲಿ ಭಾಗಿಯಾಗಿದ್ದ 7 ಉಗ್ರರನ್ನು ಎನ್‌ಐಎ ಈಗಾಗಲೆ ಬಂಧಿಸಿ ವಿಚಾರಣೆ ನಡೆಸುತ್ತಿದೆ. ಈ ವೇಳೆ ಭಯೋತ್ಪಾದಕರ ಸಂಪರ್ಕದಲ್ಲಿರುವ ಉಗ್ರರ ಪೈಕಿ ಕರ್ನಾಟಕದ ಜೈಲಿನಲ್ಲಿರುವ ಸಜಾಬಂಧಿ ಉಗ್ರರ ಹೆಸರು ಬೆಳಕಿಗೆ ಬಂದಿರುವ ಜಾಡು ಹಿಡಿದು ಶೋಧಕಾರ್ಯ ನಡೆಸುತ್ತಿದೆ.

ಪರಪ್ಪನ ಅಗ್ರಹಾರದಲ್ಲಿ
ಉಗ್ರರು ಮೊಬೈಲ್ ಬಳಕೆ:

ಪರಪ್ಪನ ಅಗ್ರಹಾರದಲ್ಲಿ ಉಗ್ರರು, ವಿಚಾರಣಾಧಿನ ಶಂಕಿತ ಉಗ್ರರು ಮೊಬೈಲ್ ಬಳಕೆ ಹಾಗೂ ರಾಜಾತಿಥ್ಯ ಕಲ್ಪಿಸಿರುವ ವಿಡಿಯೋ ಬೆಳಕಿಗೆ ಬಂದಿತ್ತು. ಐಸಿಎಸ್ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ ಕೂಡ ಜೈಲಿನಲ್ಲಿ ವಿಶೇಷ ಆತಿಥ್ಯ ಪಡೆದುಕೊಂಡಿದ್ದ. ಬಳ್ಳಾರಿ ಮಾಡ್ಯೂಲ್ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಈತ ಸದ್ಯ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾನೆ. ಈತ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಸದಸ್ಯರ ಸಂಪರ್ಕ ಹೊಂದಿದ್ದು, ಐಸಿಸ್ ಸಂಘಟನೆಯ ಸಕ್ರಿಯ ಸದಸ್ಯನಾಗಿದ್ದಾನೆ.
ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಯುವಕರನ್ನು ಮೂಲಭೂತವಾದಿಗಳನ್ನಾಗಿ ಮಾಡಿ ಉಗ್ರ ಸಂಘಟನೆಗೆ ಸೇರಿಸುತ್ತಿದ್ದ. ಇದೀಗ ಈತನ ಕೈಗೆ ಮೊಬೈಲ್ ಸಿಕ್ಕಿರುವುದು ರಾಜ್ಯದಲ್ಲಿ ಮತ್ತೊಂದು ವಿದ್ವಂಸಕ ಕೃತ್ಯಕ್ಕೆ ಸಂಚಿನ ಭಾಗವಾಗಿರುವ ಹಿನ್ನೆಲೆಯಲ್ಲಿ ಎನ್‌ಐ ತನಿಖೆ ಕೈಗೊಂಡಿದೆ.
ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲೆ ಕುಳಿತು ದೇಶಾದ್ಯಂತ ಬಾಂಬ್ ಸ್ಫೋಟದ ಸಂಚು ರೂಪಿಸಿದ್ದ ಲಷ್ಕರ್-ಎ-ತಯ್ಬ ಉಗ್ರ ಟಿ.ನಾಸೀರ್‌ಗೆ ಜೈಲಿನಲ್ಲಿ ರಾಜ್ಯಾತಿಥ್ಯ ಹಾಗೂ ಮೊಬೈಲ್ ನೆರವು ನೀಡಿದ್ದ ಜೈಲಿನ ಎಎಸ್‌ಐ ಚಾಂದ್‌ಪಾಷಾನನ್ನು ಬಂಧಿಸಲಾಗಿತ್ತು. ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಉಗ್ರ ಟಿ.ನಾಸೀರ್, ನಿರಂತರವಾಗಿ ಐಸಿಎಸ್ ಹಾಗೂ ವಿವಿಧ ಉಗ್ರ ಸಂಘಟನೆ ಮುಖಂಡರೊಂದಿಗೆ ಸಂಪರ್ಕ ಹೊಂದಿದ್ದ. ಹೀಗೆ ಹಲವು ಉಗ್ರರು ಜೈಲಿನಲ್ಲಿ ನಿಷೇಧ ಇದ್ದರು ಮೊಬೈಲ್ ತರಿಸಿಕೊಂಡು ವಿದೇಶದಲ್ಲಿರುವ ಉಗ್ರ ಸಂಘಟನೆ ಜತೆ ನಿರಂತರವಾಗಿ ಸಂಪರ್ಕದಲ್ಲಿರುವುದನ್ನು ಅರಿತಿರುವ ಎನ್‌ಐಎ ತನಿಖೆ ಆರಂಭಿಸಿದೆ.

ಉಗ್ರರೊಂದಿಗೆ ನಿರಂತರ ಸಂಪರ್ಕ :

ಬೆಳಗಾವಿ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಜವೇಶ್ ಅಲಿಯಾಸ್ ಜಯೇಶ್‌ಕಾಂತ್ ಪೂಜಾರಿ ಉಗ್ರ ಸಂಘಟನೆ ಜತೆ ನಿರಂತರ ಸಂಪರ್ಕ ಇಟ್ಟುಕೊಂಡಿರುವ ಬಗ್ಗೆ ಎನ್‌ಐಎ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. 2015ರಲ್ಲಿ ದೇಶದ್ರೋ ಪ್ರಕರಣ, ಕೊಲೆ, ಸುಲಿಗೆ ಹಾಗೂ ಜಮ್ಮು-ಕಾಶ್ಮೀರದಲ್ಲಿ ಉಗ್ರ ಸಂಘಟನೆಗಳೊಂದಿಗೆ ತೊಡಗಿದ್ದ ಬಶೀರುದ್ದೀನ್ ನೂರ್ ಅಹ್ಮದ್ ಅವರ ಸಂಪರ್ಕ ಹೊಂದಿದ್ದ ಪ್ರಕರಣದಲ್ಲಿ ಬಂಧಿತನಾಗಿದ್ದ.ಮಂಗಳೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತ್ತು.
ಬಳಿಕ ಹೈಕೋರ್ಟ್ ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತು. 2019ರಲ್ಲಿ ಮೈಸೂರು ಜೈಲಿಗೆ ಸ್ಥಳಾಂತರ ಮಾಡಲಾಗಿದ್ದ ಉಗ್ರನನ್ನು, ನ್ಯಾಯಾಲಯ ಆದೇಶದಿಂದ ಮತ್ತೆ ಬೆಳಗಾವಿ ಹಿಂಡಲಗಾ ಕಾರಾಗೃಹಕ್ಕೆ ತರಲಾಗಿತ್ತು. ಜೈಲಿನಲ್ಲಿದ್ದಾಗಲೇ ನಿಷೇಧಿತ ಮೊಬೈಲ್‌ಫೋನ್ ಬಳಸಿ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದ ಎಂಬ ಆರೋಪದ ಮೇರೆಗೆ ಜೈಲಾಧಿಕಾರಿಗಳು ನೀಡಿದ ದೂರಿನ ಮೇರೆಗೆ ಬೆಳಗಾವಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನ.26 ರಂದು ಪ್ರಕರಣ ದಾಖಲಿಸಲಾಗಿದೆ. ಉಗ್ರನನ್ನು ನ್ಯಾಯಾಲಯಕ್ಕೆ ತರಲಾಗುತ್ತಿದ್ದ ವೇಳೆ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದನು.

ಗಡ್ಕರಿಗೆ 10 ಕೋಟಿ ರೂ.ಬೇಡಿಕೆ

2023ರ ಜನವರಿಯಲ್ಲಿ ಹಾಗೂ ಮಾಚ್ ತಿಂಗಳಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ನಾಗ್ಪುರ ಕಚೇರಿಗೆ ಕರೆಮಾಡಿ 10 ಕೋಟಿ ರೂ.ಬೇಡಿಕೆ ಇಟ್ಟಿರುವ ಪ್ರಕರಣದಲ್ಲಿಯೂ ಜವೇಶ್ ಪೂಜಾರಿ ಹೆಸರಿದೆ. ಆ ಕರೆಗಳನ್ನೂ ಜೈಲಿನೊಳಗಿನಿಂದಲೇ ಮಾಡಿದ್ದನೆಂದು ತನಿಖೆ ತಿಳಿಸಿದೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಗುಂಡ್ಯ ಗ್ರಾಮದ ನಿವಾಸಿಯಾಗಿರುವ ಜವೇಶ್, 14ನೇ ವಯಸ್ಸಿನಲ್ಲಿ ಊರು ಬಿಟ್ಟು ಕೇರಳದಲ್ಲಿ ವಾಸವಾಗಿದ್ದ. ಅಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂದರಗೊಂಡಿದ್ದ ಎನ್ನಲಾಗಿದೆ.