Priyank Kharge 
ರಾಜ್ಯ

ದಾವಣಗೆರೆಯಲ್ಲಿ ಶಂಕಿತ ಉಗ್ರನ ಬಂಧನ; ಪಾಕ್ ಸಂಘಟನೆ ಜತೆ ಸಂಪರ್ಕದ ಶಂಕೆ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ದಾವಣಗೆರೆಯಲ್ಲಿ ಶಂಕಿತ ಉಗ್ರನೊಬ್ಬನನ್ನು ಬಂಧಿಸಲಾಗಿದ್ದು, ಆತ ಪಾಕಿಸ್ತಾನ ಮೂಲದ ಸಂಘಟನೆಯೊಂದರೊಂದಿಗೆ ಸಂಪರ್ಕ ಹೊಂದಿದ್ದ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ( Priyank Kharge) ತಿಳಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಧಿತ ವ್ಯಕ್ತಿ ಉತ್ತರ ಪ್ರದೇಶ ಮೂಲದವನಾಗಿದ್ದು, ಕೆಲಸ ಹುಡುಕಿಕೊಂಡು ದಾವಣಗೆರೆಗೆ ಬಂದಿದ್ದಾನೆ ಎಂಬ ಮಾಹಿತಿ ಇದೆ ಎಂದರು.

ಮೊಬೈಲ್‌ನಲ್ಲಿ ಪತ್ತೆಯಾದ ಮಾಹಿತಿ

ಬಂಧಿತನ ಮೊಬೈಲ್ ಫೋನ್ ಪರಿಶೀಲನೆ ವೇಳೆ ಕೆಲವು ಮಹತ್ವದ ಮಾಹಿತಿ ಪತ್ತೆಯಾಗಿದೆ. ಪಾಕಿಸ್ತಾನ ಮೂಲದ ಸಂಘಟನೆಯೊಂದರೊಂದಿಗೆ ಆತ ಚಾಟ್ ಮೂಲಕ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.
ಪ್ರಸ್ತುತ ಆರೋಪಿಯನ್ನು ಕಸ್ಟಡಿಯಲ್ಲಿ ಇರಿಸಲಾಗಿದ್ದು, ಪೊಲೀಸರು ಹಾಗೂ ತನಿಖಾ ಸಂಸ್ಥೆಗಳು ಹೆಚ್ಚಿನ ವಿಚಾರಣೆ ನಡೆಸುತ್ತಿವೆ. ತನಿಖೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಹಿತಿ ಹೊರಬರುವ ಸಾಧ್ಯತೆ ಇದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಕೇಂದ್ರ ಸಚಿವೆ ಹೇಳಿಕೆಗೆ ಖರ್ಗೆ ತಿರುಗೇಟು

ಇದೇ ವೇಳೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಮಾಡಿರುವ "ಪ್ರಿಯಾಂಕ್ ಖರ್ಗೆ ಬಲಿತ ದಲಿತ" ಎಂಬ ಹೇಳಿಕೆಗೆ ಖರ್ಗೆ ಪ್ರತಿಕ್ರಿಯೆ ನೀಡಿದರು. “ಎಷ್ಟು ಜನ ಬಲಿತರು ಇದ್ದಾರೆ ಎಂಬುದನ್ನು ಅವರು ತೋರಿಸಲಿ. ಈ ರೀತಿಯ ಮನಸ್ಥಿತಿ ಅವರಲ್ಲಿ ಮೊದಲಿನಿಂದಲೂ ಇದೆ,” ಎಂದರು.

RSS ಕುರಿತು ಪ್ರಶ್ನೆ

“ಹಿಂದೆಯೂ ನನ್ನ ವಿರುದ್ಧ ಅಪಪ್ರಚಾರ ಮಾಡಿದ್ದರು. ನಾನು ಸೂಟ್ ಹಾಕಿ ವಿಧಾನಸೌಧದಲ್ಲಿ ಕುಳಿತುಕೊಳ್ಳಬಾರದೇ? RSS ಆದಾಯದ ಬಗ್ಗೆ ಪ್ರಶ್ನೆ ಕೇಳಿದರೆ ಅವರಿಗೆ ಯಾಕೆ ಉರಿ?” ಎಂದರು. “ನಮ್ಮ ಕುಟುಂಬದ ಬಗ್ಗೆ ಮಾತನಾಡುತ್ತಾರೆ. ಬಿಜೆಪಿ ನಾಯಕ ಸುನೀಲ್ ಕುಮಾರ್ ಹಗುರವಾಗಿ ಮಾತನಾಡಿದ್ದಾರೆ. ಸಂಘದ ಬಗ್ಗೆ ಪ್ರಶ್ನೆ ಕೇಳಿದರೆ ಇಷ್ಟೆಲ್ಲಾ ಪ್ರತಿಕ್ರಿಯೆ ಬರುತ್ತದೆ. ಒಬ್ಬ ದಲಿತ RSS ಬಗ್ಗೆ ಪ್ರಶ್ನೆ ಕೇಳಬಾರದೇ?” ಎಂದು ಖರ್ಗೆ ಪ್ರಶ್ನಿಸಿದರು.