ಬೆಂಗಳೂರು: ಸರ್ಪಸುತ್ತು ಕ್ರಿಯಾ ಸಪ್ತಾಹ ಹಿನ್ನೆಲೆಯಲ್ಲಿ ಭಾರತದಲ್ಲಿ ಕೆಲವು ದೀರ್ಘಕಾಲೀನ ಆರೋಗ್ಯ ಪರಿಸ್ಥಿತಿಗಳೊಂದಿಗೆ ಜೀವಿಸುತ್ತಿರುವ 50ವರ್ಷ ಮತ್ತು ಅದಕ್ಕಿಂತ ಮೇಲಿನ ವಯಸ್ಸಿನವರ ಮೇಲೆ ಸರ್ಪಸುತ್ತು ಯಾವ ರೀತಿ ಪರಿಣಾಮ ಬೀರುತ್ತದೆ, ಅದನ್ನು ತಡೆಗಟ್ಟುವುದು ಹೇಗೆ ಎಂಬುದರ ಬಗ್ಗೆ ಜಾಗತಿಕ ಸಮೀಕ್ಷೆಯೊಂದು ಬಿಡುಗಡೆಯಾಗಿದೆ.
ಜಿಎಸ್ಕೆ ಸಂಸ್ಥೆ, ಕೈಗೊಂಡಿರುವ ಈ ಸಮೀಕ್ಷೆಯಲ್ಲಿ ಸರ್ಪಸುತ್ತುವಿನಿಂದ ಆಗುವ ಪರಿಣಾಮಗಳು ಮತ್ತು ಅದನ್ನು ಹೇಗೆ ತಡೆಗಟ್ಟಬಹುದು ಎಂಬುದರ ಬಗ್ಗೆ ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಅಂಶಗಳು ಸೇರಿವೆ. ಈ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಸರ್ಪಸುತ್ತುವಿನಿಂದ ಬಳಲುತ್ತಿರುವವರಲ್ಲಿ ಶೇ.43 ಮಂದಿ ತೀವ್ರವಾದ ಅದರಲ್ಲೂ ಹಗಲಿನ ವೇಳೆಯಲ್ಲಿ ಹೆಚ್ಚಿನ ನೋವನ್ನು ಅನುಭವಿಸುತ್ತಿದ್ದಾರೆ.
ಪ್ರತಿ ಮೂವರಲ್ಲಿ ಒಬ್ಬರು ಉದ್ಯೋಗಸ್ಥರಾಗಿದ್ದಾರೆ ಅಥವಾ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಹಾಜರಾಗುವಂತಹವರಾಗಿದ್ದಾರೆ. ಆದರೆ, ಈ ಸರ್ಪಸುತ್ತು ಅವರನ್ನು ಇಂತಹ ಕಾರ್ಯಗಳಿಂದ ದೂರ ಉಳಿಯುವಂತೆ ಮಾಡಿದೆ. ದೀರ್ಘಕಾಲದ ಮೂತ್ರಪಿಂಡ ರೋಗ ಮತ್ತು ಹೃದಯ ರಕ್ತನಾಳದ ಕಾಯಿಲೆ ಹೊಂದಿರುವ ರೋಗಿಗಳು ಈ ಸರ್ಪಸುತ್ತು ಸಮಸ್ಯೆಯಿಂದ ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ಅದೇ ರೀತಿ ಮಧುಮೇಹ ಮತ್ತು ಸಿವಿಡಿ ರೋಗಿಗಳು ಹೆಚ್ಚಿನ ಭಾವನಾತ್ಮಕ ನಷ್ಟವನ್ನು ಅನುಭವಿಸಿದ್ದಾರೆ ಎಂದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
ಸರ್ಪಸುತ್ತು ಒಂದು ನೋವಿನ ಮತ್ತು ರೋಗಿಯನ್ನು ದುರ್ಬಲಗೊಳಿಸುವ ಕಾಯಿಲೆಯಾಗಿದ್ದು, ಇದು ಚಿಕನ್ ಪಾಕ್ಸ್ ಗೆ ಕಾರಣವಾಗುವ ಅದೇ ವೈರಸ್ ಆದ ವರಿಸೆಲ್ಲಾ-ಜೋಸ್ಟರ್ ವೈರಸ್ನ ಪುನಃ ಸಕ್ರಿಯಗೊಳಿಸುವಿಕೆಯಿಂದ ಉಂಟಾಗುತ್ತದೆ. ಜನರು ವಯಸ್ಸಾದಂತೆ, ಸೋಂಕಿಗೆ ಪ್ರತಿರೋಧ ತೋರುವ ವ್ಯವಸ್ಥೆಯು ಶಕ್ತಿಯು ಕಡಿಮೆಯಾಗುತ್ತದೆ. ಸರ್ಪಸುತ್ತು ಬೆಳವಣಿಗೆಯ ಅಪಾಯ ಹೆಚ್ಚಿಸುತ್ತದೆ. ಸರ್ಪಸುತ್ತು ಸಾಮಾನ್ಯವಾಗಿ ಒಂದು ಬದಿಯಲ್ಲಿ ದದ್ದುಗಳಾಗಿ ಆರಂಭಗೊಳ್ಳುತ್ತದೆ. ಎದೆ, ಹೊಟ್ಟೆ ಅಥವಾ ಮುಖದ ಮೇಲೆ ನೋವಿನ ಗುಳ್ಳೆಗಳಾಗಿ ಹೊರಹೊಮ್ಮುತ್ತವೆ. ಈ ಸರ್ಪಸುತ್ತು ನಿವಾರಣೆಗೆ ಲಸಿಕೆ ಪಡೆಯುವುದೊಂದೇ ಮಾರ್ಗವಾಗಿದೆ.
ಸರ್ಪಸುತ್ತು ಮತ್ತು ಅದರ ತೊಡಕುಗಳ ಅಪಾಯವಿದ್ದರೂ ಕೆಲವು ದೀರ್ಘಕಾಲದ ಆರೋಗ್ಯ ಪರಿಸ್ಥಿತಿಗಳನ್ನು ಹೊಂದಿರುವ ಪ್ರತಿ ನಾಲ್ವರು ವ್ಯಕ್ತಿಗಳಲ್ಲಿ ಒಬ್ಬರಿಗೆ ಸರ್ಪಸುತ್ತಿನ ಬಗ್ಗೆ ಸ್ವಲ್ಪವೂ ಅಥವಾ ಏನೂ ತಿಳಿದಿಲ್ಲ ಎಂಬುದನ್ನು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೇ, ಪ್ರತಿ ಮೂವರಲ್ಲಿ ಒಬ್ಬರಿಗೆ ಅವರ ದೀರ್ಘಕಾಲೀನ ಸ್ಥಿತಿಯು ಸರ್ಪಸುತ್ತಿನ ಅಪಾಯವನ್ನು ಹೇಗೆ ಹೆಚ್ಚಿಸುತ್ತದೆ ಎಂಬುದನ್ನು ವಿವರಿಸಲು ಸಾಧ್ಯವಾಗುತ್ತಿಲ್ಲ ಎಂದೂ ಸಮೀಕ್ಷೆ ತಿಳಿಸಿದೆ.
ಕೆಲವು ದೀರ್ಘಕಾಲೀನ ಕಾಯಿಲೆಗಳಿಂದ ಬಳಲುತ್ತಿರುವ ಹಿರಿಯ ನಾಗರಿಕರ ದಿನನಿತ್ಯದ ಭೇಟಿಗಳಲ್ಲಿ ಸರ್ಪಸುತ್ತಿನ ಬಗ್ಗೆ ಸೂಕ್ತ ಚಿಕಿತ್ಸೆಗಳನ್ನು ಪಡೆದುಕೊಂಡರೆ ಬಹುಬೇಗನೆ ಕಾಯಿಲೆ ಗುಣಮುಖವಾಗುತ್ತದೆ. ಕೆಲವು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಭಾರತೀಯರಲ್ಲಿ ಸುಮಾರು ಶೇ.75 ರಷ್ಟು ಜನರು ತಮ್ಮ ವೈದ್ಯರನ್ನು ನಿಯಮಿತವಾಗಿ ಭೇಟಿ ಮಾಡುತ್ತಾರೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
ಆದರೆ,ಅಂದಾಜು ಅರ್ಧದಷ್ಟು (ಶೇ.48) ಜನರು ಸರ್ಪಸುತ್ತಿನ ಬಗ್ಗೆ ಎಂದಿಗೂ ವೈದ್ಯರನ್ನು ಸಂಪರ್ಕಿಸಿಲ್ಲ ಎಂದು ಹೇಳುತ್ತಾರೆ. ಮಧುಮೇಹ (ಶೇ.49) ಮತ್ತು ಹೃದಯ ಸಂಬಂಧಿ ಕಾಯಿಲೆ (ಶೇ.37) ಇರುವ ರೋಗಿಗಳು ತಮ್ಮ ವೈದ್ಯರನ್ನು ಸರ್ಪಸುತ್ತಿನ ಬಗ್ಗೆ ಚರ್ಚೆ ಮಾಡಿರುವ ಸಾಧ್ಯತೆಗಳು ಕಡಿಮೆ ಇವೆ.