ಬೆಂಗಳೂರು: ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳು, ರಸ್ತೆ ಬದಿಗಳು, ಖಾಲಿ ನಿವೇಶನಗಳು, ಬ್ಲಾಕ್ ಸ್ಪಾಟ್‌ಗಳಲ್ಲಿ ಅನಧಿಕೃತವಾಗಿ ಘನತ್ಯಾಜ್ಯ ಮತ್ತು ಕಟ್ಟಡ ತ್ಯಾಜ್ಯ ಸುರಿಯುವವರ ವಿರುದ್ಧ ಕಣ್ಗಾವಲನ್ನು ಮತ್ತಷ್ಟು ಬಿಗಿಗೊಳಿಸಲು ‘ಪಾಲಿಕೆಯ ಪ್ರಹರಿ ವ್ಯವಸ್ಥೆ’ ಬಲಪಡಿಸಲಾಗಿದೆ.
ಈಗಾಗಲೇ ಕಾರ್ಯನಿರ್ವಹಿಸುತ್ತಿರುವ 2 ಪ್ರಹರಿ ವಾಹನಗಳ ಜತೆಗೆ ಘನತ್ಯಾಜ್ಯ ನಿರ್ವಹಣೆ ಹಾಗೂ ನಿಯಮ ಉಲ್ಲಂಘನೆಗಳ ಮೇಲಿನ ಕಣ್ಗಾವಲನ್ನು ಮತ್ತಷ್ಟು ಪರಿಣಾಮಕಾರಿಗೊಳಿಸುವ ಉದ್ದೇಶದಿಂದ ಹೊಸ 2 ಪ್ರಹರಿ ವಾಹನಗಳನ್ನು ಸೇರ್ಪಡೆಗೊಳಿಸಲಾಗಿದೆ. ಈ ಮೂಲಕ ಒಟ್ಟು 4 ಪ್ರಹರಿ ವಾಹನಗಳ ಕಾರ್ಯಾಚರಣೆಗೆ ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಚಾಲನೆ ನೀಡಿದರು.
4 ಪ್ರಹರಿ ವಾಹನಗಳು ಎರಡು ಶಿಫ್ಟ್‌ಗಳಲ್ಲಿ ದಿನದ 24 ಗಂಟೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಗಸ್ತು ನಡೆಸಲಿವೆ. ವಿಶೇಷವಾಗಿ ಕಸ ಸುರಿಯುವಿಕೆ ಹೆಚ್ಚಾಗಿ ಕಂಡುಬರುವ ಪ್ರದೇಶಗಳು, ಪ್ರಮುಖ ರಸ್ತೆಗಳು, ಮಾರುಕಟ್ಟೆ ಪ್ರದೇಶಗಳು, ಖಾಲಿ ನಿವೇಶನಗಳು ಹಾಗೂ ಸಾರ್ವಜನಿಕ ಸ್ಥಳಗಳ ಮೇಲೆ ವಿಶೇಷ ನಿಗಾ ವಹಿಸಲಿವೆ.
ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಕಸ ಅಥವಾ ತ್ಯಾಜ್ಯ ಸುರಿಯುತ್ತಿರುವುದು ಕಂಡುಬಂದಲ್ಲಿ, ಲಭ್ಯವಾಗುವ ದೃಶ್ಯಾವಳಿ ಹಾಗೂ ಸ್ಥಳ ಮಾಹಿತಿಯ ಆಧಾರದ ಮೇಲೆ ಸಂಬಂಧಿಸಿದ ವ್ಯಕ್ತಿ, ಸಂಸ್ಥೆ, ವಾಹನವನ್ನು ಗುರುತಿಸಿ ದಂಡ ಸೇರಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.
4 ಪ್ರಹರಿ ವಾಹನಗಳ ಜಿಪಿಎಸ್ ಸ್ಥಳ, ಸಂಚಾರ ಹಾಗೂ ಕಾರ್ಯಾಚರಣೆಯನ್ನು ಆ್ಯಪ್ ಆಧಾರಿತ ಮೂಲಕ ಕಂಟ್ರೋಲ್ ರೂಂನಲ್ಲಿ ನೇರವಾಗಿ ಐಟಿ ತಂಡ ಮೇಲ್ವಿಚಾರಣೆ ಮಾಡಲಿದೆ. ವಾಹನಗಳಿಂದ ದಾಖಲಾಗುವ ಪೋಟೋ, ವಿಡಿಯೋ ಮತ್ತು ಜಿಪಿಎಸ್ ಮಾಹಿತಿಯನ್ನು ಪ್ರತಿದಿನ ಪರಿಶೀಲಿಸಿ, ಗುರುತಿಸಿರುವ ಸಮಸ್ಯೆಗಳು ಹಾಗೂ ಅವುಗಳ ಮೇಲೆ ಕೈಗೊಂಡ ಕ್ರಮಗಳ ಪ್ರಗತಿ ಬಗ್ಗೆ ಮೇಲ್ವಿಚಾರಣೆ ನಡೆಸಲಾಗುತ್ತದೆ. ಪ್ರತಿ ವಾಹನದಲ್ಲಿ ಚಾಲಕ, ಮಾರ್ಷಲ್ ಇರುತ್ತಾರೆ.ಈ ವ್ಯವಸ್ಥೆಯ ಪರಿಣಾಮಕಾರಿ ಕಾರ್ಯಾಚರಣೆಗೆ 24 ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರಹರಿ ವಾಹನಗಳು ಕೇವಲ ದೂರುಗಳಿಗೆ ಸ್ಪಂದಿಸುವ ವಾಹನಗಳಾಗಿರದೆ, ಅನಧಿಕೃತ ತ್ಯಾಜ್ಯ ವಿಲೇವಾರಿ ಪತ್ತೆಹಚ್ಚುವ, ಬ್ಲಾಕ್ ಸ್ಪಾಟ್‌ಗಳ ಮೇಲೆ ನಿಗಾ ವಹಿಸುವ, ಘನತ್ಯಾಜ್ಯ ನಿರ್ವಹಣಾ ನಿಯಮಗಳ ಅನುಷ್ಠಾನವನ್ನು ಬಲಪಡಿಸುವ ಮೊಬೈಲ್ ಕಣ್ಗಾವಲು ಮತ್ತು ಜಾರಿ ಘಟಕಗಳಾಗಿ ಕಾರ್ಯನಿರ್ವಹಿಸಲಿವೆ.
ಸಾರ್ವಜನಿಕ ಸ್ಥಳ, ರಸ್ತೆ ಬದಿ, ಖಾಲಿ ನಿವೇಶನ ಅಥವಾ ಬ್ಲಾಕ್ ಸ್ಪಾಟ್‌ಗಳಲ್ಲಿ ಕಸ ಮತ್ತು ಕಟ್ಟಡ ತ್ಯಾಜ್ಯ ಸುರಿಯುವುದನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ. ಕಸ ಸುರಿದು ಯಾರಿಗೂ ಗೊತ್ತಾಗುವುದಿಲ್ಲ ಅಥವಾ ತಪ್ಪಿಸಿಕೊಳ್ಳಬಹುದು ಎಂಬ ಭಾವನೆ ಬೇಡ. ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.
ಪೊಮ್ಮಲ ಸುನೀಲ್ ಕುಮಾರ್, ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ.