ಹುಲಸೂರು ಸಮೀಪದ ಭಾಲ್ಕಿ ತಾಲೂಕಿನ ಲಾದಾ ಗ್ರಾಮದಲ್ಲಿ ಭಾನುವಾರ ಸಂಜೆ ಸೋಮೇಶ್ವರ ದೇವಾಲಯದ ಕಳಸಾರೋಣ ಸಮಾರಂಭದಲ್ಲಿ ಹಾರಕೂಡದ ಶ್ರೀ ಡಾ.ಚನ್ನವಿರಶಿವಾಚಾರ್ಯ, ಹುಲಸೂರು ಶ್ರೀ ಡಾ.ಶಿವಾನಂದ ಸ್ವಾಮೀಜಿ, ಶ್ರೀ ದೊಡ್ಡೇಂದ್ರ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ, ರವೀಂದ್ರ ಪಾಟೀಲ, ಡಾ.ಇಂದ್ರಜಿತರಾವ ಪಂಚಾಳ ಇತರರಿದ್ದರು.
- ಹಾರಕೂಡ ಶ್ರೀ ಅಭಿಮತ
- ಲಾದಾದಲ್ಲಿ ಸೋಮೇಶ್ವರ ದೇವಾಲಯದ ಕಳಸಾರೋಣ
ಹುಲಸೂರು: ಲೌಕಿಕ ವಿಷಯ ವಾಸನೆ ಇಲ್ಲದೆ ಅಧ್ಯಾತ್ಮದ ಮಾರ್ಗದಲ್ಲಿ ನಡೆಯುವವನೇ ನಿಜವಾದ ಶರಣ ಎಂದು ಹಾರಕೂಡದ ಶ್ರೀ ಡಾ.ಚನ್ನವಿರ ಶಿವಾಚಾರ್ಯ ನುಡಿದರು.
ಸಮೀಪದ ಭಾಲ್ಕಿ ತಾಲೂಕಿನ ಲಾದಾ ಗ್ರಾಮದಲ್ಲಿ ಭಾನುವಾರ ಸಂಜೆ ಶ್ರೀ ಸೋಮೇಶ್ವರ ದೇವಸ್ಥಾನದ ಕಳಸಾರೋಹಣ ಸಮಾರಂಭದ ಅಂಗವಾಗಿ ಆಯೋಜಿಸಿದ್ದ ಧರ್ಮಸಭೆಯ ದಿವ್ಯ ಸಾನ್ನಿಧ್ಯವನ್ನು ವಹಿಸಿ ಮಾತನಾಡಿದ ಶ್ರೀಗಳು, ಬಣ್ಣ, ರೂಪ, ನಾಮ ನೇಮಗಳಿಂದ ದೇವರ ನಿಜ ಸ್ವರೂಪ ಅರಿಯಲು ಸಾಧ್ಯವಿಲ್ಲ, ಇಡೀ ವಿಶ್ವದಲ್ಲಿ ದೈವತ್ವ ಎಂಬುದು ಒಂದೇ ಆಗಿರುತ್ತದೆ. ಅವರವರ ಭಾವಕ್ಕೆ ತಕ್ಕಂತೆ ದೇವಾನುಭವ ಪ್ರಕಟಗೊಳ್ಳುತ್ತದೆ ಎಂದರು.
ದೇವರು ನಿಷ್ಠೆಯಿಂದ ಕೂಡಿದ ಭಕ್ತಿಗೆ ಒಲಿಯುತ್ತಾನೆ ಹೊರತು ಭೌತಿಕ ಆಡಂಬರಕಲ್ಲ. ಸರಳ ಶುದ್ಧ ಶರಣ ಮಾರ್ಗದ ಜೀವನಶೈಲಿಯಿಂದ ಮನುಷ್ಯ ತನ್ನ ಬದುಕಿನ ಧನ್ಯತೆ ಪಡೆಯಲು ಸಾಧ್ಯ. ವೇಷ&ಭೂಷಣ ವಿಭೂತಿ ಧಾರಣೆ ಮಾಡಿದ್ದರೆ ಶರಣರಾಗಲು ಸಾಧ್ಯವಿಲ್ಲ. ತಮ್ಮಲ್ಲಿ ಶರಣರ ಗುಣಗಳು ಇದ್ದಾಗ ಮಾತ್ರ ನಿಜ ಶರಣರಾಗಲು ಸಾಧ್ಯ. ತದೇಕ ಭಕ್ತಿಯಿಂದ ಲಾದಾ ಗ್ರಾಮದ ಜನತೆ ಆಯೋಜಿಸಿರುವ ಈ ಪವಿತ್ರ ಧರ್ಮ ಕಾರ್ಯದಿಂದ ಎಲ್ಲರ ಬದುಕಲ್ಲಿ ಶ್ರೇಯಸ್ಸು ಕಾಣಲಿ ಎಂದು ಶುಭ ಹಾರೈಸಿದರು.
ಹುಲಸೂರಿನ ಶ್ರೀ ಡಾ.ಶಿವಾನಂದ ಸ್ವಾಮಿಜಿ ಮಾತನಾಡಿ, ಗ್ರಾಮದಲ್ಲಿ ಜಾತಿ, ಮತ, ಪಂಥ ಎನ್ನದೇ ತನು, ಮನ, ಧನದಿಂದ ಎಲ್ಲರೂ ಕೂಡಿಕೊಂಡು ಸೋಮೇಶ್ವರ ದೇವಸ್ಥಾನ ನಿರ್ಮಿಸಿ ಕಳಸಾರೋಣ ಮಾಡಿರುವುದು ಸಂತಸ ತಂದಿದೆ. ತಾವೆಲ್ಲರೂ ಧರ್ಮದ ಕಾರ್ಯದಲ್ಲಿ ತೊಡಗಬೇಕು ಎಂದರು.
ಸುಲೇಪೇಟದ ಶ್ರೀ ದೊಡ್ಡೇಂದ್ರ ಸ್ವಾಮೀಜಿ, ಭಾಲ್ಕಿ ಪಿಎಲ್ಡಿ ಬ್ಯಾಂಕ್ ಅಧ್ಯ ಮಡಿವಾಳಪ್ಪ ಮಂಗಲಗಿ, ಜಿಪಂ ಮಾಜಿ ಸದಸ್ಯ ಮಲ್ಲಪ್ಪ ಧಬಾಲೆ ಮಾತನಾಡಿದರು.
ಸಾಯಿಗಾಂವದ ಶ್ರೀ ಶಿವಾನಂದ ಸ್ವಾಮೀಜಿ, ತಿಂಥಣಿಯ ಶ್ರೀ ಶಿವಾನಂದ ಸ್ವಾಮೀಜಿ, ಡಾ.ಇಂದ್ರಜಿತರಾವ ಪಂಚಾಳ, ಚಂದ್ರಕಾಂತ ಪಾಟೀಲ, ಅನಿಲಕುಮಾರ ಜಗತಾಪ, ಗಿರಿ ಪಾಟೀಲ, ಶಿವಾಜಿರಾವ ಬಿರಾದಾರ, ಸುನಿಲ ಜಗತಾಪ, ಪಾಂಡುರಂಗ ಬಿರಾದಾರ, ಬಾಲಾಜಿ ಬಿರಾದಾರ, ವೀರಶೆಟ್ಟಿ ಮಹಾಗಾವೆ ಇದ್ದರು. ರವೀಂದ್ರ ಪಾಟೀಲ ಸ್ವಾಗತಿಸಿದರು. ಕೃಷ್ಣ ಪಂಚಾಳ ನಿರೂಪಣೆ ಮಾಡಿದರು. ಸಮಾರಂಭಕ್ಕೂ ಮೊದಲು ಹಾರಕೂಡ ಶ್ರೀಗಳ ಸಾರೋಟ ರಥದಲ್ಲಿ ಮೆರವಣಿಗೆ ಜರುಗಿತು.