Supreme Court stays handing over of DCC Bank scam case to CBI.
ಡಿಸಿಸಿ ಬ್ಯಾಂಕ್ನ ಸಹಕಾರ ಸಂಘಗಳ ವ್ಯಾಪ್ತಿಯಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ವಿತರಣೆ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಆರೋಪ ಸಂಬಂಧ ದಾಖಲಾಗಿದ್ದ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ನೀಡಲು ಸುಪ್ರೀಂಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ ಎಂದು ಬಿಜೆಪಿ ರಾಜ್ಯ ಟಕದ ಮಾಜಿ ಕಾರ್ಯದರ್ಶಿಯೂ ಆದ ದೂರುದಾರ ತಳಗವಾರ ಟಿ.ಎನ್.ಪ್ರತಾಪ್ ಕುಮಾರ್ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಗುರುವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಡಿಸಿಸಿ ಬ್ಯಾಂಕ್ನ ವ್ಯವಸ್ಥಾಪಕರು, ಮೇಲ್ವಿಚಾರಕರು ಹಾಗೂ ಮಾಜಿ ಅಧ್ಯಕ್ಷರು ಪರಸ್ಪರ ಕೈಜೋಡಿಸಿ ಮಹಿಳಾ ಸ್ವಸಹಾಯ ಸಂಘಗಳ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದು ಕೆಲವರು ಮರುಪಾವತಿ ಮಾಡದೆ ವಂಚಿಸಿದ್ದಾರೆ ಎಂದು ಆರೋಪಿಸಿದರು.
ಈ ಸಂಬಂಧ ಬಟ್ಲಹಳ್ಳಿ, ಕೆಂಚಾರ್ಲಹಳ್ಳಿ ಹಾಗೂ ಚಿಂತಾಮಣಿ ಗ್ರಾಮಾಂತರ ಠಾಣೆಗಳಲ್ಲಿ ಆರು ಹಾಗೂ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಠಾಣೆಯಲ್ಲಿ ಒಂದು ಸೇರಿ ಒಟ್ಟು 7 ಎಫ್ಐಆರ್ಗಳು 2025ರ ಮಾರ್ಚ್ನಲ್ಲಿ ದಾಖಲಾಗಿವೆ. ಭೂಮಿಶೆಟ್ಟಿಹಳ್ಳಿ ಸಂಘದಲ್ಲಿ ಮಹಿಳಾ ಸಂಘಗಳಿಗೆ ನೀಡಲಾದ ಸಾಲಗಳನ್ನು ನಿಗದಿತ ಉದ್ದೇಶಕ್ಕೆ ಬಳಸಲಾಗಿಲ್ಲ. ನಿಯಮಾನುಸಾರ ಸಾಲ ವಿತರಣೆ ನಡೆದಿಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದ ಅವರು, ಆರಂಭದಲ್ಲಿ ಹೈಕೋರ್ಟ್ನಿಂದ ಎಫ್ಐಆರ್ಗೆ ತಡೆಯಾಜ್ಞೆ ಪಡೆದಿದ್ದರು.
ನಂತರ ಸುದೀರ್ಘ ವಿಚಾರಣೆ ಬಳಿಕ ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿತ್ತು. ಕೋಟ್ಯಂತರ ರೂ. ದುರುಪಯೋಗದ ಗಂಭೀರ ಆರೋಪ ಇರುವ ಹಿನ್ನೆಲೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿದೆ ಎಂದರು.
ಸಿಐಡಿ ತನಿಖೆಗೆ ಅಗತ್ಯವಿರುವ ಸಾಲದ ಕಡತ ಹಾಗೂ ಪ್ರಮುಖ ದಾಖಲೆಗಳನ್ನು ನೀಡದೆ ಹಗರಣಗಳ ಆರೋಪದ ನಡುವೆ ಸುಪ್ರೀಂಕೋರ್ಟ್ನಿಂದ ತಡೆಯಾಜ್ಞೆ ತರಲಾಗಿದೆ. ಸಹಕಾರ ಸಂಘಗಳಲ್ಲಿ ತಿಂಗಳಿಗೆ ಕೇವಲ 15 ರಿಂದ 30 ಸಾವಿರ ರೂ.ವರೆಗೂ ಸಂಬಳ ಪಡೆಯುವ ಬೈರಾರೆಡ್ಡಿ ಹಾಗೂ ವೆಂಕಟೇಶ್ಮೂರ್ತಿ ಮತ್ತಿತರರು ಹೈಕೋರ್ಟ್ ಅಲ್ಲದೇ ಸುಪ್ರೀಂ ಕೋರ್ಟ್ನಿಂದಲೂ ತಡೆಯಾಜ್ಜೆ ತಂದಿದ್ದು, ಇಷ್ಟು ದೊಡ್ಡಮಟ್ಟದ ಕಾನೂನು ಹೋರಾಟ ನಡೆಸಲು ಅವರು ಎಲ್ಲಿಂದ ಹಣ ಪಡೆಯುತ್ತಿದ್ದಾರೆ ಎಂಬುದನ್ನು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಬಡ ಮಹಿಳೆಯರಿಗೆ ನ್ಯಾಯ ದೊರಕಿಸುವುದರ ಜತೆಗೆ ಡಿಸಿಸಿ ಬ್ಯಾಂಕ್ನ ಹಿತಾಸಕ್ತಿ ಕಾಪಾಡಲು ಸಿಐಡಿ ತನಿಖೆ ಮುಂದುವರಿಯುವುದು ಅತ್ಯಗತ್ಯವಾಗಿದೆ ಎಂದರುವ ಪ್ರತಾಪ್ ಕುಮಾರ್, ಸುಪ್ರೀಂ ಕೋರ್ಟ್ನಲ್ಲಿ ಸಮರ್ಥವಾಗಿ ವಾದ ಮಂಡಿಸಿ, ಪ್ರಸ್ತುತ ಇರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ಕಾನೂನು ಹೋರಾಟ ಮುಂದುವರಿಸಲಾಗುವುದು ಎಂದರು.