ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬೈರತಿ ಬಸವರಾಜ್ಗೆ ಬಂಧನ ಭೀತಿ
- ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಬೈರತಿ ಬಸವರಾಜ್ಗೆ ಭಾರಿ ಹಿನ್ನಡೆ
- ದೇಶದ ಉನ್ನತ ನ್ಯಾಯಾಯಲ ಸುಪ್ರೀಂಕೋರ್ಟ್ನಲ್ಲೂ ನಿರೀಕ್ಷಣಾ ಜಾಮೀನು ಅರ್ಜಿ ವಜಾ
- ಅರ್ಜಿ ವಜಾ ಬೆನ್ನಲ್ಲೇ ಬಿಜೆಪಿ ಶಾಸಕ ಬೈರತಿ ಬಸವರಾಜ್ಗೆ ಹೆಚ್ಚಾದ ಬಂಧನ ಭೀತಿ
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿದ್ದನ್ನು ಪ್ರಶ್ನೆ ಮಾಡಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದ ಮಾಜಿ ಸಚಿವ ಬೈರತಿ ಬಸವರಾಜ್ಗೆ ( Byrati Basavaraj ) ಭಾರಿ ಹಿನ್ನಡೆಯಾಗಿದೆ. ಅರ್ಜಿ ವಜಾಗೊಳಿಸಿದ ದೇಶದ ಉನ್ನತ ನ್ಯಾಯಾಲಯ, ಆರೋಪಿ ಬೈರತಿ ಬಸವರಾಜ್ ಕೂಡಲೇ ಪೊಲೀಸರ ಮುಂದೆ ಶರಣಾಗಬೇಕು ಎಂದು ಹೇಳಿದೆ.
ಇಂದು (ಫೆ. 12) ಸುಪ್ರೀಂ ಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿದ ಕೂಡಲೇ ಬೈರತಿ ಬಸವರಾಜ್ಗೆ ಬಂಧನ ಭೀತಿ ಹೆಚ್ಚಾಗಿದೆ. ಬಸವರಾಜ್ ಅವರು ಕೂಡಲೇ ಪೊಲೀಸರ ಮುಂದೆ ಶರಣಾಗಬೇಕು ಎಂದು ನ್ಯಾಯಾಲಯ ಆದೇಶಿಸಿದ್ದು, ಬಂಧನದಿಂದ ಪಾರಾಗಲು ಇದ್ದ ಕೊನೆಯ ಅವಕಾಶವು ಕೂಡ ಇದೀಗ ಕೈತಪ್ಪಿದೆ. ಹೀಗಾಗಿ, ಖಚಿತವಾಗಿ ಬೈರತಿ ಬಸವರಾಜ್ ಬಂಧನವಾಗಲಿದೆ.
ಅಂದಹಾಗೆ, ಹಲವು ದಿನಗಳಿಂದ ಬೈರತಿ ಬಸವರಾಜ್ ಅವರು ತಲೆಮರೆಸಿಕೊಂಡಿದ್ದಾರೆ. ಸದ್ಯ ಅವರು ವಿದೇಶದಲ್ಲಿ ಇದ್ದಾರೆಂಬ ಮಾಹಿತಿ ಇದೆ. ಸಿಐಡಿ ಅವರ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದ್ದಿ, ವಿಶೇಷ ತಂಡಗಳನ್ನು ರಚಿಸಿ ಬಂಧನಕ್ಕಾಗಿ ಹುಡುಕಾಟ ನಡೆಸುತ್ತಿದೆ. ಮಹಾರಾಷ್ಟ್ರ ಅಥವಾ ಇತರೆಡೆ ತಲೆಮರೆಸಿಕೊಂಡಿರಬಹುದು ಎಂಬ ಶಂಕೆಯೂ ಇದೆ.
ಏನಿದು ಪ್ರಕರಣ?
2025, ಜುಲೈ 15ರಂದು ಬೆಂಗಳೂರಿನ ಹಲಸೂರು ಕೆರೆ ಸಮೀಪದಲ್ಲಿ ರೌಡಿಶೀಟರ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನನ್ನು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಮನೆ ಎದುರು ಕೊಚ್ಚಿ ಹತ್ಯೆ ಮಾಡಿದರು. ಈ ಹತ್ಯೆಗೆ ಭೂ/ಆಸ್ತಿ ವ್ಯಾಜ್ಯ ಎಂದು ತನಿಖೆಯಲ್ಲಿ ಬಯಲಾಗಿದೆ. ಸಿಐಡಿ ತನಿಖೆಯಲ್ಲಿ ಕೆ.ಆರ್.ಪುರಂನ ಬಿಜೆಪಿ ಶಾಸಕ ಬೈರತಿ ಬಸವರಾಜ್ರನ್ನು 5ನೇ ಆರೋಪಿಯಾಗಿ ಹೆಸರಿಸಲಾಗಿದ್ದು, ಕೊಲೆಯ ಪ್ರಮುಖ ಆರೋಪಿ ಜಗದೀಶ್ ಅಲಿಯಾಸ್ ಜಗ್ಗನೊಂದಿಗೆ ಬಸವರಾಜ್ ಅವರಿಗೆ ನೇರ ಸಂಪರ್ಕ ಇದ್ದುದು ಬಹಿರಂಗವಾಗಿದೆ. ಇದರಿಂದಾಗಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ನಂತರ ಸುಪ್ರೀಂ ಕೋರ್ಟ್ ಕೂಡ ಇಂದು ಅರ್ಜಿ ವಜಾಗೊಳಿಸಿದೆ. ಇದರಿಂದ ಬಸವರಾಜ್ ಅವರಿಗೆ ಬಂಧನ ಭೀತಿ ಹೆಚ್ಚಾಗಿದ್ದು, ಸದ್ಯ ತಲೆಮರೆಸಿಕೊಂಡಿದ್ದಾರೆ.