Supreme Court extends time till December to hold GBA elections
- GBA ಚುನಾವಣೆಗೆ ಡಿಸೆಂಬರ್ವರೆಗೆ ಕಾಲವಕಾಶ ನೀಡಿದ ಸುಪ್ರೀಂ ಕೋರ್ಟ್
- SIR ಕಾರಣಕ್ಕೆ ರಾಜ್ಯ ಚುನಾವಣೆ ಆಯೋಗ ಸಹ ಕೋರ್ಟ್ ಗೆ ಮನವಿ ಮಾಡಿದೆ
- ಇದು ಕೊನೆಯ ಅವಕಾಶ, ಪುನಃ ಬೇರೆ ಕಾರಣ ಹೇಳಿಕೊಂಡು ಬರಬೇಡಿ ಅಂದ ನ್ಯಾಯಪೀಠ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗಳ ಚುನಾವಣೆಯನ್ನು ನಡೆಸಲು ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿರುವ ಸುಪ್ರೀಂ ಕೋರ್ಟ್(Supreme Court), ಡಿಸೆಂಬರ್ 31ರೊಳಗೆ ಚುನಾವಣೆ ನಡೆಸಲು ಕಾಲಾವಕಾಶ ನೀಡಿದೆ.
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆ, ಕರುಡು ಮತದಾರರ ಪಟ್ಟಿ ಪ್ರಕಟಣೆ, ಸಾರ್ವಜನಿಕ ಆಕ್ಷೇಪಣೆ ಸ್ವೀಕಾರ ಸೇರಿದಂತೆ ನಾನಾ ಕಾರ್ಯಗಳಲ್ಲಿ ಸಿಬ್ಬಂದಿ ಬ್ಯುಸಿ ಇರುವ ಹಿನ್ನೆಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ(GBA elections) ನಡೆಸಲು ಕಾಲಾವಕಾಶ ಕೋರಿ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
ಪುನಃ ಬರಬೇಡಿ
ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರ್ಯಕಾಂತ್ ಅವರಿದ್ದ ಪೀಠವು, ಮನವಿಯನ್ನು ಪುರಸ್ಕರಿಸಿ ಡಿಸೆಂಬರ್ನಲ್ಲಿ ಚುನಾವಣೆ ನಡೆಸಬೇಕು. ಡಿಸೆಂಬರ್ನಲ್ಲಿ ಪುನಃ ಹೊಸ ಕಾರಣ ಕೇಳಿಕೊಂಡು ಬರುವಂತಿಲ್ಲ ಎಂದು ಖಡಾಖಂಡಿತವಾಗಿ ಸೂಚನೆಯನ್ನು ಕೊಟ್ಟಿದೆ.
ಜನವರಿ ವೇಳೆಗೆ ಚುನಾವಣೆ ನಡೆಸಿರುವ ಮಾಹಿತಿ ಸಲ್ಲಿಸುತ್ತೇವೆ ಎಂದು ಸರ್ಕಾರ ಹೇಳಿದೆ. ಇನ್ನು ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿರುವ ಬಗ್ಗೆ ಸರ್ಕಾರದ ಪರ ವಾದ ಮಂಡಿಸಿದ ಕಪಿಲ್ ಸಿಬಲ್ ಹೇಳಿದರು.
ಆಗಸ್ಟ್ನಲ್ಲಿ ನಡೆಯಬೇಕಿತ್ತು ಚುನಾವಣೆ
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ಇಲ್ಲದಿದ್ದರೆ ಆಗಸ್ಟ್ 31ರೊಳಗೆ ಚುನಾವಣೆ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ ಸಿಬ್ಬಂದಿ ಎಸ್ಐಆರ್ ಪ್ರಕ್ರಿಯೆಯಲ್ಲಿ ಇರುವ ಕಾರಣ ಕಾಲಾವಕಾಶ ವಿಸ್ತರಣೆಗೆ ಸರ್ಕಾರ ಮನವಿ ಮಾಡಿಕೊಂಡಿತ್ತು. ಅದರಂತೆ ಸರ್ಕಾರದ ಮನವಿಗೆ ಸುಪ್ರೀಂ ಕೋರ್ಟ್ ಅಸ್ತು ಎಂದಿದ್ದು, ಜಿಬಿಎ ವ್ಯಾಪ್ತಿಯ 369 ವಾರ್ಡ್ಗಳ ಚುನಾವಣೆ ಇದೇ ವರ್ಷದ ಡಿಸೆಂಬರ್ 31ರೊಳಗೆ ಪೂರ್ಣಗೊಳ್ಳಲಿದೆ.
ಕೃಷ್ಣಭೈರೇಗೌಡ ಹೇಳಿದ್ದಿಷ್ಟು
ಜಿಬಿಎ ಚುನಾವಣೆ ಗೆ ಮತ್ತೆ ಕಾಲಾವಕಾಶ ಕೇಳುವ ಯಾವ ಉದ್ದೇಶವೂ ಇಲ್ಲ. ಈಗಲೂ ಕೂಡ ಚುನಾವಣೆ ಮಾಡಲು ರಾಜಕೀಯ ವಾಗಿ ಎದುರಿಸಲು ನಾವು ತಯಾರಿದ್ದೇವೆ. ಎಸ್ ಐ ಆರ್ ಮಾಡಲು ಚುನಾವಣಾ ಆಯೋಗವೇ ಒಂದು ವಾರ ಸಮಯ ಹೆಚ್ಚುವರಿ ಕೊಟ್ಟು ಸಮಯ ಬದಲಾವಣೆ ಮಾಡಿದ್ದಾರೆ. ಎಸ್ ಐ ಆರ್ ಶ್ರದ್ದೆಯಿಂದ ಮಾಡದೇ ಇದ್ದರೇ ಸಾವಿರಾರು ಜನ ಮತ ಕಳೆದುಕೊಳ್ಳುವ ಸಾಧ್ಯತೆ ಇದೆ. ಎಸ್ ಐ ಆರ್ ಕುರಿತಾಗಿ ನಮ್ಮ ವಿವರಣೆ ಗೆ ಸುಪ್ರೀಂ ಕೋರ್ಟ್ ಒಪ್ಪಿದೆ. ಎಸ್ ಐ ಆರ್ ಪ್ರಕಾರ ಹೊಸ ಮತದಾರರ ಪಟ್ಟಿ ಬರುತ್ತೆ. ಜಿಬಿಎ ಚುನಾವಣೆ ಗೆ ನಾವು ತಯಾರು ಮಾಡಿರುವ ಪಟ್ಟಿ ಹಳೇ ಮತದಾರರ ಪಟ್ಟಿ ಆಧಾರವಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಹೇಳಿದರು. (ಏಜೆನ್ಸೀಸ್).