ಮಂಡ್ಯ: ಕಳೆದ ಒಂದು ತಿಂಗಳಿನಿಂದ ಬೆಳೆಗಳನ್ನು ಉಳಿಸಿಕೊಳ್ಳಲು ನೀರು ಕೊಡಿ ಎಂದು ಮಂಡ್ಯ ಜಿಲ್ಲೆಯ ರೈತರು ಅಂಗಲಾಚುತ್ತಿದ್ದರೂ ರಾಜ್ಯ ಸರ್ಕಾರ ಕಿವಿಗೆ ಜಾಣಕಿವುಡು ಬಂದಂತೆ ವರ್ತಿಸುತ್ತಿದೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ (HD Kumaraswamy) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರುˌ ಮಂಡ್ಯ ರೈತರ ನ್ಯಾಯಯುತ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.
ರೈತರ ಭೂಮಿ ಕಸಿಯುವ ವಿಷಯದಲ್ಲಿ ತೀವ್ರ ರಣೋತ್ಸಾಹ ತೋರುವ ಸರ್ಕಾರಕ್ಕೆ, ಅದೇ ಅನ್ನದಾತರ ಬೆಳೆಗಳನ್ನು ಉಳಿಸಲು ಏಕೆ ನಿರುತ್ಸಾಹವೋ ಅರ್ಥವಾಗುತ್ತಿಲ್ಲ ಎಂದು ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಆರ್‌ಎಸ್ (ಕೃಷ್ಣರಾಜಸಾಗರ) ಜಲಾಶಯದಿಂದ ತಕ್ಷಣವೇ ನಾಲೆಗಳಿಗೆ ನೀರು ಹರಿಸುವ ಮೂಲಕ ಒಣಗುತ್ತಿರುವ ಬೆಳೆಗಳನ್ನು ರಕ್ಷಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ರೈತರ ತಾಳ್ಮೆ ಪರೀಕ್ಷಿಸಬೇಡಿ, ಅವರ ಆಕ್ರೋಶದ ಕಟ್ಟೆ ಒಡೆಯುವ ಮುನ್ನವೇ ಎಚ್ಚೆತ್ತುಕೊಂಡು ಸರ್ಕಾರ ತಕ್ಷಣವೇ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ (ಏಜೆನ್ಸೀಸ್).