Minister Muniyappa  
ರಾಜ್ಯ

ಅಗತ್ಯ ಸೇವೆಗಳಿಗೆ ನಿತ್ಯ 9,500 ವಾಣಿಜ್ಯ ಸಿಲಿಂಡರ್ ಪೂರೈಕೆ: ಸಚಿವ ಮುನಿಯಪ್ಪ ಅಭಯ | Cylinders

ಬೆಂಗಳೂರು: ರಾಜ್ಯದಲ್ಲಿ ಅಡುಗೆ ಅನಿಲ(Cylinders) ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ, ಸಾರ್ವಜನಿಕರು ಮತ್ತು ಗ್ರಾಹಕರು ಸುಖಾಸುಮ್ಮನೆ ಗಾಬರಿಯಾಗುವ ಅಗತ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಸನ್ನಿವೇಶದಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಹಂಚಿಕೆ ಕುರಿತು ಸರ್ಕಾರದ ಕಾರ್ಯತಂತ್ರವನ್ನು ವಿವರಿಸಿದರು.

ಅಗತ್ಯ ಸೇವೆಗಳಿಗೆ ಆದ್ಯತೆ

ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಕೊರತೆಯಾಗದಂತೆ ಎಚ್ಚರಿಕೆ ವಹಿಸಿರುವ ಸರ್ಕಾರ, ಪ್ರತಿನಿತ್ಯ 9,500 ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಪೂರೈಸಲು ಕ್ರಮ ಕೈಗೊಂಡಿದೆ. ಇದರಲ್ಲಿ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಹಾಸ್ಟೆಲ್‌ಗಳು, ರೈಲ್ವೆ ಮತ್ತು ವಿಮಾನ ನಿಲ್ದಾಣಗಳಂತಹ ಅತಿ ಅಗತ್ಯ ಸೇವೆಗಳಿಗೆ ನಿತ್ಯ 4,500 ಸಿಲಿಂಡರ್‌ಗಳನ್ನು ಮೀಸಲಿಡಲಾಗಿದೆ. ಇನ್ನು ಆಟೋ ರಿಕ್ಷಾಗಳಿಗೆ 2,500 ಹಾಗೂ ಹೋಟೆಲ್‌ಗಳಿಗೆ 1,000 ಸಿಲಿಂಡರ್‌ಗಳನ್ನು ವಿತರಿಸಲಾಗುತ್ತಿದೆ.

ಹೋಟೆಲ್ ಉದ್ಯಮಕ್ಕೆ ಸಂಕಷ್ಟ?

ಹೋಟೆಲ್‌ಗಳಿಗೆ ಬೇಡಿಕೆಗೆ ತಕ್ಕಂತೆ ಪೂರ್ಣ ಪ್ರಮಾಣದಲ್ಲಿ ಸಿಲಿಂಡರ್ ಪೂರೈಸಲು ಸದ್ಯಕ್ಕೆ ಸಾಧ್ಯವಿಲ್ಲ ಎಂದು ಸಚಿವರು ಒಪ್ಪಿಕೊಂಡಿದ್ದಾರೆ. ಈ ಸಮಸ್ಯೆಯು ಸರಿಹೋಗಲು ಇನ್ನೂ ಒಂದು ವಾರ ಕಾಲಾವಕಾಶ ಬೇಕಾಗಬಹುದು. ಅಂತರಾಷ್ಟ್ರೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಹೆಚ್ಚಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.