- * 10 ಸಾವಿರ ಚದರ ಅಡಿ ಜಾಗದಲ್ಲಿ ತಲೆಯೆತ್ತಲಿದೆ ಕಟ್ಟಡ
- *ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಕಟ್ಟಡ ನಿರ್ಮಾಣ
ಬೆಂಗಳೂರು: ಇಂದಿರಾನಗರದಲ್ಲಿರುವ ಸರ್ ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯು ಸೂಪರ್ ಸ್ಪೆಷಾಲಿಟಿ ಸೇವೆಗೆ ಸಜ್ಜಾಗುತ್ತಿದ್ದು, ಆಸ್ಪತ್ರೆಯ ಆವರಣದಲ್ಲಿ ಪ್ರತ್ಯೇಕ ಕಟ್ಟಡ ತಲೆಯೆತ್ತಲಿದೆ. ಈ ಸಂಬಂಧ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್‌ಆರ್) ಕಟ್ಟಡ ನಿರ್ಮಿಸಿಕೊಡಲು ಖಾಸಗಿ ಸಂಸ್ಥೆಗಳು ಮುಂದೆ ಬಂದಿದ್ದು, ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.
ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಸರ್ ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಗೆ ದಿನಕ್ಕೆ 800ರಿಂದ 1,000 ಹೊರರೋಗಿಗಳು ಭೇಟಿ ನೀಡುತ್ತಾರೆ. 150ಕ್ಕೂ ಅಧಿಕ ಮಂದಿ ಒಳರೋಗಿಗಳಾಗಿ ಸೇವೆ ಪಡೆಯುತ್ತಾರೆ. ತಿಂಗಳಿಗೆ 300-250 ಶಸಚಿಕಿತ್ಸೆಗಳು ನಡೆಸಲಾಗುತ್ತದೆ.
ರೋಗಿಗಳ ಸಂಖ್ಯೆ ದಿನೇದಿನೆ ಹೆಚ್ಚುತ್ತಿದ್ದು, ಇಲ್ಲಿ ಸೂಪರ್ ಸ್ಪೆಷಾಲಿಟಿ ಸೇವೆ ಇಲ್ಲದ ಕಾರಣ, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಜಯದೇವ ಹೃದ್ರೋಗ ಸಂಸ್ಥೆ ಸೇರಿ ರೋಗಿಯ ಕಾಯಿಲೆ ಆಧರಿಸಿ ಇತರೆ ವೈದ್ಯಕೀಯ ಸಂಸ್ಥೆಗಳಿಗೆ ಶಿಫಾರಸು ಮಾಡಲಾಗುತ್ತಿದೆ. ಹಾಗಾಗಿ ಆಸ್ಪತ್ರೆ ಸಿಎಸ್‌ಆರ್ ನಿಧಿ ಅಡಿಯಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಸಿದ್ಧತೆ ನಡೆಸುತ್ತಿದೆ. ಸೂಪರ್ ಸ್ಪೆಷಾಲಿಟಿ ಬ್ಲಾಕ್ ನಿರ್ಮಾಣಕ್ಕೆ ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಹಾಗೂ ಚೈಲ್ಡ್ ಹೆಲ್ಪ್ ಫೌಂಡೇಷನ್ (ಸಿಎಚ್‌ಎ್) ಮುಂದೆ ಬಂದಿವೆ. ಸೂಪರ್ ಸ್ಪೆಷಾಲಿಟಿ ಬ್ಲಾಕ್ ನಿರ್ಮಾಣಕ್ಕೆ ಆಸ್ಪತ್ರೆಯ ಆವರಣದಲ್ಲಿ ಸ್ಥಳ ಗುರುತಿಸಲಾಗಿದೆ. 10 ಸಾವಿರ ಚದರ ಅಡಿಯಲ್ಲಿ ಈ ಕಟ್ಟಡ ತಲೆಯೆತ್ತಲಿದೆ.
ಆಸ್ಪತ್ರೆಯ ಸೂಪರ್ ಸ್ಪೆಷಾಲಿಟಿ ಬ್ಲಾಕ್ ಕಟ್ಟಡವು ಒಂದು ಅಂತಸ್ತು ಹೊಂದಿರಲಿದೆ. ನಾಲ್ಕು ವಿಭಾಗಗಳನ್ನು ಒಳಗೊಳ್ಳಲಿದೆ. ಹೃದಯವಿಜ್ಞಾನ, ನರವಿಜ್ಞಾನ, ಮೂತ್ರಪಿಂಡ ಮೂತ್ರಕೋಶ ವಿಜ್ಞಾನ ಹಾಗೂ ಜಠರ ವಿಜ್ಞಾನ ವಿಭಾಗಗಳು ಕಾರ್ಯನಿರ್ವಹಿಸಲಿವೆ. ನಾಲ್ಕೂ ವಿಭಾಗಗಳಲ್ಲಿ ಹೊರರೋಗಿ ವಿಭಾಗದ ಸೇವೆ ದೊರೆಯಲಿದ್ದು, ಪರ್ಯಾಯ ದಿನಗಳಲ್ಲಿ ವೈದ್ಯರು ಲಭ್ಯರಿರುತ್ತಾರೆ. ಪ್ರತಿ ವಿಭಾಗಗಳಲ್ಲಿ ತುರ್ತು ಚಿಕಿತ್ಸೆಗಾಗಿ ತಲಾ ಐದರಂತೆ 20 ಹಾಸಿಗೆಗಳನ್ನು ಒಳಗೊಳ್ಳಲಿದೆ.
ಪ್ರಸ್ತುತ 335 ಹಾಸಿಗೆಗಳ ಸಾಮರ್ಥ್ಯ:
ಆಸ್ಪತ್ರೆಯಲ್ಲಿ ಪ್ರಸ್ತುತ ನಾಲ್ಕು ಮಾಡ್ಯುಲರ್ ಶಸಚಿಕಿತ್ಸಾ ಕೊಠಡಿ, ಒಂದು ಮೈನರ್ ಹಾಗೂ ಒಂದು ಎಮರ್ಜೆನ್ಸಿ ಶಸಚಿಕಿತ್ಸಾ ಕೊಠಡಿ ಇದೆ. 335 ಹಾಸಿಗೆ ಸಾಮರ್ಥ್ಯವನ್ನು ಒಳಗೊಂಡಿದೆ. ಇದರಲ್ಲಿ 30 ಹಾಸಿಗೆಗಳನ್ನು ಆಲದ ಮರ ೌಂಡೇಷನ್ ನಿರ್ವಹಣೆ ಮಾಡುತ್ತಿರುವ ಮಾನಸಿಕ ಆರೋಗ್ಯ ಚಿಕಿತ್ಸೆಗೆ ಮೀಸಲಿಡಲಾಗಿದ್ದು, ತುರ್ತು ನಿಗಾ ಘಟಕದಲ್ಲಿ ಹಾಸಿಗೆ ಸಾಮರ್ಥ್ಯವನ್ನು 9ರಿಂದ 18ಕ್ಕೆ ಹೆಚ್ಚಿಸಲಾಗಿದೆ. ಇದಲ್ಲದೆ 10 ಪ್ಯಾಲಿಯೇಟಿವ್ ಕೇರ್ ಹಾಗೂ 11 ಹಾಸಿಗೆಗಳನ್ನು ಜೀರಿಯಾಟ್ರಿಕ್ ಚಿಕಿತ್ಸೆಗೆ ಒದಗಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಕೆ.ಎಸ್. ರಾಜೇಶ್ ತಿಳಿಸಿದರು.
ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಒದಗಿಸಲು ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಅಡಿಯಲ್ಲಿ ಕ್ರಿಟಿಕಲ್ ಕೇರ್ ಯೂನಿಟ್ ನಿರ್ಮಾಣ ಕಾರ್ಯ ಸಾಗುತ್ತಿದ್ದು, 100 ಬೆಡ್ ಹೊಂದಿರಲಿದೆ. 4-5 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ಸೇವೆ ಒದಗಿಸಲಿದೆ. ಇದನ್ನು ಹೃದ್ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡುವ ಸಂಬಂಧ ಆಸ್ಪತ್ರೆಯಲ್ಲಿ ಕೆ.ಸಿ. ಜನರಲ್ ಇರುವ ಜಯದೇವ ಘಟಕದ ಮಾದರಿಯಲ್ಲಿ ಕ್ಯಾಥ್ ಲ್ಯಾಬ್ ಅಳವಡಿಸಿಕೊಳ್ಳಲು ಚಿಂತನೆ ನಡೆಸಲಾಗಿದ್ದು, ಈ ಸಂಬಂಧ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಜತೆಗೆ ಮಾತುಕತೆ ನಡೆಸಿದೆ. ಸಂಸ್ಥೆಯ ಪ್ರತಿನಿಧಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳನ್ನು ಪತ್ತೆಹಚ್ಚಲು ಹಾಗೂ ಚಿಕಿತ್ಸೆ ನೀಡಲು ಕ್ಯಾಥ್ ಲ್ಯಾಬ್ ಸಹಕಾರಿಯಾಗಿದೆ.
ಸೂಪರ್ ಸ್ಪೆಷಾಲಿಟಿ ಬ್ಲಾಕ್ ನಿರ್ಮಾಣದಿಂದ ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡದೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಒದಗಿಸಲು ಸಾಧ್ಯವಾಗುತ್ತದೆ. ಇದಲ್ಲದೆ ರೋಗಿಗಳ ಬೇಡಿಕೆಗೆ ಅನುಗುಣವಾಗಿ ಶೀಘ್ರದಲ್ಲೇ ಆಸ್ಪತ್ರೆಯಲ್ಲಿ 5 ಹಾಸಿಗೆಗಳ ಸ್ಪೆಷಲ್ ವಾರ್ಡ್ ಹಾಗೂ 7 ಹಾಸಿಗೆಗಳ ಸೆಮಿ ಸ್ಪೆಷಲ್ ವಾರ್ಡ್‌ಗಳು ಉದ್ಘಾಟನೆಗೊಳ್ಳಲಿವೆ.