ಬೆಂಗಳೂರು: ಪೆಸಿಫಿಕ್ ಮಹಾಸಾಗರದಲ್ಲಿ ಉಂಟಾಗಿರುವ ‘ಸೂಪರ್ ಎಲ್‌ನಿನೋ’ (Super El Nino) ಕಾರಣ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಳವಾಗಿ ಬಿರು ಬಿಸಿಲು ಕಾಣಿಸಿಕೊಳ್ಳುತ್ತಿದೆ.
ಬಾಗಲಕೋಟೆ, ಬೆಂಗಳೂರು, ಮೈಸೂರು, ಮಂಡ್ಯ, ಚಿಂತಾಮಣಿ, ಕಾರವಾರ, ದಾವಣಗೆರೆ, ಕಲಬುರಗಿ ಮತ್ತು ಬೀದರ್‌ನಲ್ಲಿ ಗರಿಷ್ಠ ತಾಪಮಾನದಲ್ಲಿ ವಾಡಿಕೆಕ್ಕಿಂತ 3-4 ಡಿ.ಸೆ. ಅಧಿಕ ಉಷ್ಣಾಂಶ ಕಂಡುಬಂದಿದೆ. ಬೆಳಗಾವಿ, ವಿಜಯಪುರ, ಧಾರವಾಡ, ಕೊಪ್ಪಳ, ರಾಯಚೂರು, ಚಿತ್ರದುರ್ಗ ಮತ್ತು ಶಿವಮೊಗ್ಗದಲ್ಲಿ ವಾಡಿಕೆಗಿಂತ 2-3 ಡಿ.ಸೆ.ಉಷ್ಣಾಂಶ ಹೆಚ್ಚಳವಾಗಿದೆ. ಇದರಿಂದ ಸುಡುಬಿಸಿಲಿನ ವಾತಾವರಣ ಕಂಡುಬಂದಿದೆ.
ಮುಂದಿನ ಒಂದು ವಾರ ರಾಜ್ಯಾದ್ಯಂತ ಒಣಹವೆ ಮುಂದುವರಿಯಲಿದ್ದು, ಬಿಸಿಲು ಹಾಗೂ ಅಲ್ಲಲ್ಲಿ ಜೋರಾಗಿ ಗಾಳಿ ಬೀಸಲಿದೆ. ಈ ಸಂದರ್ಭದಲ್ಲಿ ಕೆಲವೆಡೆ ಮಾತ್ರ ಸಾಧಾರಣ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಕರ್ನಾಟಕದಲ್ಲೇ ಅತಿ ಹೆಚ್ಚು ಉಷ್ಣಾಂಶ,ಸಾಮಾನ್ಯಕ್ಕಿಂತ ಅಧಿಕ ಬಿಸಿಲು ಇರುವುದು ಬಾಗಲಕೋಟೆ. ಪ್ರಸ್ತುತ ಗರಿಷ್ಠ ತಾಪಮಾನದಲ್ಲಿ ಆ ಜಿಲ್ಲೆಯಲ್ಲಿ 34.2 ಡಿ.ಸೆ. ದಾಖಲಾಗುತ್ತಿದ್ದು, ಇದು ವಾಡಿಕೆಕ್ಕಿಂತ 4.6 ಅಧಿಕವಾಗಿದೆ. ಬೀದರ್‌ನಲ್ಲಿಯೂ 33.4 ಡಿ.ಸೆ.ವರದಿಯಾಗಿದ್ದು, ವಾಡಿಕೆಕ್ಕಿಂತ 3.8 ಡಿ.ಸೆ.ಅಧಿಕವಾಗಿದೆ. ಮೈಸೂರಿನಲ್ಲಿ 32.8 ಡಿ.ಸೆ.ದಾಖಲಾಗುತ್ತಿದ್ದು, ವಾಡಿಕೆಕ್ಕಿಂತ 3.7 ಡಿ.ಸೆ. ಅಧಿಕವಾಗಿ ಕಂಡುಬರುತ್ತಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಉಷ್ಣಾಂಶ ಹೆಚ್ಚಳವಾಗಿದೆ. ಮಧ್ಯಾಹ್ನ ವೇಳೆ ನೆತ್ತಿ ಸುಡಲಾರಂಭಿಸಿದ್ದು, ಸ್ವಲ್ಪ ದೂರ ಸಾಗಲು ಜನರು ಆಯಾಸಗೊಳ್ಳುತ್ತಿದ್ದಾರೆ.
ಬೆಂಗಳೂರು ನಗರ, ಎಚ್‌ಎಎಲ್ ವಿಮಾನ ನಿಲ್ದಾಣ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 32-33ರ ಅಸುಪಾಸಿನಲ್ಲಿ ಉಷ್ಣಾಂಶ ದಾಖಲಾಗುತ್ತಿದೆ. ಇದು ವಾಡಿಕೆಕ್ಕಿಂತ 3-4 ಡಿ.ಸೆ.ಹೆಚ್ಚಾಗಿದೆ. ಮಳೆ, ತೇವಾಂಶ ಕೊರತೆ ಮತ್ತು ಶುಭ್ರ ಆಕಾಶ ಸೇರಿ ಸೂಪರ್ ಎಲ್‌ನಿನೋ ಕಾರಣದಿಂದ ತಾಪಮಾನ ಹೆಚ್ಚಳವಾಗುತ್ತಿದೆ. ಮುಂದಿನ 7 ದಿನ ಸಿಲಿಕಾನ್ ಸಿಟಿಯಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 32 ಮತ್ತು 21 ಡಿ.ಸೆ.ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಸೂಪರ್ ಎಲ್‌ನಿನೋ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಸಿಲು ಜಾಸ್ತಿಯಾಗಿದೆ. ತಾಪಮಾನ ಹೆಚ್ಚಾಗುತ್ತಿದ್ದಂತೆ ಮಳೆಯಾಗಬೇಕಿತ್ತು. ಆದರೆ, ಶುಷ್ಕ ವಾತಾವರಣ ಇರುವ ಕಾರಣ ಮಳೆ ಸುರಿಯುವ ಯಾವುದೇ ಲಕ್ಷಣಗಳು ಸದ್ಯಕ್ಕಿಲ್ಲ. ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ, ಮೇಲ್ಮೈ ಸುಳಿಗಾಳಿ ಅಥವಾ ತೇವಾಂಶ ಭರಿತ ಮೋಡ ಇಲ್ಲದಿರುವ ಕಾರಣದಿಂದ ಬೆಂಗಳೂರು ನಗರ ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಬರುತ್ತಿಲ್ಲ. ದಕ್ಷಿಣ ಒಳನಾಡಿನಲ್ಲಿ ಮಳೆ ತರುವಂತಹ ಯಾವುದೇ ಸುಳಿಗಾಳಿ ಇಲ್ಲ.ಉಷ್ಣಾಂಶ ಹೆಚ್ಚಳವಾಗಿದ್ದರೂ ವರುಣನ ಆಗಮನವಾಗುತ್ತಿಲ್ಲ ಎನ್ನುತ್ತಾರೆ ಹಿರಿಯ ಹವಾಮಾನ ತಜ್ಞ ಡಾ ಶ್ರೀನಿವಾಸರೆಡ್ಡಿ.
ಬಿಸಿಲು, ಒಣ ಗಾಳಿ ಹೆಚ್ಚಾಗಿರುವುದರಿಂದ ಮೈಸೂರು, ಮಂಡ್ಯ, ಚಾಮರಾಜನಗರ, ತುಮಕೂರು, ಹಾಸನ, ಕೊಡಗು, ಬೆಂ.ಗ್ರಾಮಾಂತರ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿ ದಕ್ಷಿಣ ಕರ್ನಾಟಕದ ಭಾಗದ ಜಿಲ್ಲೆಗಳಲ್ಲಿ ಭತ್ತ, ರಾಗಿ ಮತ್ತು ಮೆಕ್ಕಜೋಳ ಬೆಳೆಗಳ ಒಣಗಿವೆ. ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಗೋಧಿ, ತೊಗರಿ, ಕಡಲೆ, ಹುರುಳಿ, ಉದ್ದು, ಹೆಸರು, ಅಲಸಂಧೆ, ಅವರೆ, ಮಟಕಿ,ಶೇಂಗಾ, ಎಳ್ಳು, ಸೂರ್ಯಕಾಂತಿ, ಹರಳಿ, ಹಿಚ್ಚೆಳ್ಳು, ಸೋಯಾ ಅವರೆ, ಅಗಸೆ,ಹತ್ತಿ, ಕಬ್ಬು ಸೇರಿ ವಿವಿಧ ಬೆಳೆಗಳು ಒಣಗುತ್ತಿವೆ. ಜತೆಗೆ, ಕೊಳವೆಬಾವಿಗಳ ಮತ್ತು ನೀರಿನ ಮೂಲಗಳು ಬತ್ತಿಹೋಗುತ್ತಿವೆ. ಬೆಳೆಗಳು ಹಾಳಾಗಿರುವ ಕಾರಣ ರೈತರಿಗೆ ಭಾರಿ ನಷ್ಟವಾಗುತ್ತಿದೆ.