ಗುಜರಾತ್ ವೇಗಿಗಳ ದಾಳಿಗೆ ಸನ್ ಸ್ಟನ್: ಶುಭಮಾನ್ ಗಿಲ್ ಪಡೆ ಪ್ಲೇಆಫ್ ಸ್ಥಾನ ಬಹುತೇಕ ಖಾತ್ರಿ! 
ರಾಜ್ಯ

ಗುಜರಾತ್ ವೇಗಿಗಳ ದಾಳಿಗೆ ಸನ್ ಸ್ಟನ್: ಶುಭಮಾನ್ ಗಿಲ್ ಪಡೆ ಪ್ಲೇಆಫ್ ಸ್ಥಾನ ಬಹುತೇಕ ಖಾತ್ರಿ!

ಅಹಮದಾಬಾದ್: ಸರ್ವಾಂಗೀಣ ನಿರ್ವಹಣೆಯೊಂದಿಗೆ ಅಜೇಯ ಓಟವನ್ನು ಸತತ 5ನೇ ಪಂದ್ಯಕ್ಕೆ ವಿಸ್ತರಿಸಿದ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್-19ರ ಪ್ಲೇಆಫ್ ಸ್ಥಾನ ಬಹುತೇಕ ಖಾತ್ರಿ ಪಡಿಸಿಕೊಂಡಿದ್ದು, ಅಂಕಪಟ್ಟಿಯಲ್ಲೂ ಅಗ್ರಸ್ಥಾನಕ್ಕೇರಿದೆ. ಎಡಗೈ ಬ್ಯಾಟರ್ ಸಾಯಿ ಸುದರ್ಶನ್ (61 ರನ್, 44 ಎಸೆತ, 5 ಬೌಂಡರಿ, 2 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್, ಆಲ್ರೌಂಡರ್ ವಾಷಿಂಗ್ಟನ್ ಸುಂದರ್ (50 ರನ್, 33 ಎಸೆತ, 7 ಬೌಂಡರಿ, 1 ಸಿಕ್ಸರ್) ಅರ್ಧಶತಕದ ಜತೆಗೆ ಕಗಿಸೊ ರಬಾಡ (28ಕ್ಕೆ 3) ಸಹಿತ ಇತರ ವೇಗಿಗಳ ಕರಾರುವಾಕ್ ದಾಳಿಯ ನೆರವಿನಿಂದ ಶುಭಮಾನ್ ಗಿಲ್ ಪಡೆ ಸನ್‌ರೈಸರ್ಸ್‌ ಹೈದರಾಬಾದ್ ಎದುರು 82 ರನ್‌ಗಳ ಜಯ ಸಾಧಿಸಿತು.
ನಮೋ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಅಂಕಪಟ್ಟಿಯ ಅಗ್ರಸ್ಥಾನಕ್ಕೇರುವ ಕಾದಾಟದಲ್ಲಿ ಟಾಸ್ ಗೆದ್ದ ಪ್ಯಾಟ್ ಕಮ್ಮಿನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಯುವ ವೇಗಿ ಪ್ರುಲ್ ಹಿಂಗೆ (17ಕ್ಕೆ2) ಗುಜರಾತ್ ಟೈಟಾನ್ಸ್‌ಗೆ ಆರಂಭಿಕ ಆಘಾತ ನೀಡಿದರು. ಸಾಯಿ ಸುದರ್ಶನ್-ವಾಷಿಂಗ್ಟನ್ ಜತೆಯಾಟದಿಂದ ಚೇತರಿಸಿಕೊಂಡ ಗುಜರಾತ್ 5 ವಿಕೆಟ್‌ಗೆ 168 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಪ್ರತಿಯಾಗಿ ಕಗಿಸೊ ರಬಾಡ ಮತ್ತು ಜೇಸನ್ ಹೋಲ್ಡರ್ (20ಕ್ಕೆ 3) ದಾಳಿಗೆ ತತ್ತರಿಸಿದ ಸನ್‌ರೈಸರ್ಸ್‌ 60 ರನ್‌ಗೆ 7 ವಿಕೆಟ್ ಕಳೆದುಕೊಂಡು ಚೇಸಿಂಗ್‌ನಲ್ಲಿ ಲಯ ತಪ್ಪಿತು. ಅಂತಿಮವಾಗಿ ಸನ್‌ರೈಸರ್ಸ್‌ 14.5 ಓವರ್‌ಗಳಲ್ಲಿ ಕೇವಲ 86 ರನ್‌ಗಳಿಗೆ ಸರ್ವಪತನ ಕಂಡಿತು. ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ತಂಡದ ಕನಿಷ್ಠ ಮೊತ್ತವೂ ಇದಾಗಿದೆ.
ರಬಾಡ ದಾಳಿಗೆ ಸನ್ ಸ್ಟನ್
ವೇಗಿ ಮೊಹಮದ್ ಸಿರಾಜ್ ಆರಂಭಿಕ ಓವರ್‌ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಟ್ರಾವಿಸ್ ಹೆಡ್ (0) ವಿಕೆಟ್ ಪಡೆದು ಸನ್‌ರೈಸರ್ಸ್‌ಗೆ ಶಾಕ್ ನೀಡಿದರು. ರಬಾಡ ಮರು ಓವರ್‌ನಲ್ಲಿ ಅಭಿಷೇಕ್ ಶರ್ಮರನ್ನು (6) ಬೌಲ್ಡ್ ಮಾಡಿ ಮತ್ತೆ ಆಘಾತ ನೀಡಿದರು. ನಂತರ ಇಶಾನ್ ಕಿಶನ್ (11), ಕನ್ನಡಿಗ ಆರ್.ಸ್ಮರಣ್ (9) ವಿಕೆಟ್ ಪಡೆದ ರಬಾಡ ಸನ್‌ರೈಸರ್ಸ್‌ ಚೇಸಿಂಗ್‌ಗೆ ಬ್ರೇಕ್ ಹಾಕಿದರು. ಸಲೀಲ್ ಅರೋರ (16) 10ನೇ ಓವರ್‌ನಲ್ಲಿ, 11ರ ಬಳಗಕ್ಕೆ ಪುನರಾಗಮನ ಕಂಡಿರುವ ಕನ್ನಡಿಗ ಪ್ರಸಿದ್ಧಕೃಷ್ಣ (23ಕ್ಕೆ 2) ಎಸೆತದಲ್ಲಿ ಬಟ್ಲರ್‌ಗೆ ಕ್ಯಾಚ್ ನೀಡಿದರು. ಅಗ್ರ ಕ್ರಮಾಂಕ ಬ್ಯಾಟರ್‌ಗಳು ಕೈಕೊಟ್ಟ ನಡುವೆ ಭರವಸೆ ಎನಿಸಿದ್ದ ಹೆನ್ರಿಕ್ ಕ್ಲಾಸೆನ್ (16) ಮತ್ತು ನಿತೀಶ್ ರೆಡ್ಡಿ (2), ಶಿವಾಂಗ್ ಕುಮಾರ್ (4) ವಿಕೆಟ್ ಪಡೆದ ಜೇಸನ್ ಹೋಲ್ಡರ್ ಸನ್‌ರೈಸರ್ಸ್‌ಗೆ ಸೋಲಿನ ದಿಕ್ಕು ತೋರಿಸಿದರು.
5. ಹೆನ್ರಿಚ್ ಕ್ಲಾಸೆನ್ 4ಅದಕ್ಕಿಂತ ಕೆಳಕ್ರಮಾಂಕದಲ್ಲಿ ಸೀಸನ್‌ವೊಂದರಲ್ಲಿ 500 ರನ್ ಪೂರೈಸಿದ 5ನೇ ಬ್ಯಾಟರ್. ರೋಹಿತ್ ಶರ್ಮ (2013), ರಿಷಭ್ ಪಂತ್ (2018), ಮ್ಯಾಕ್ಸ್‌ವೆಲ್ (2021), ರಿಯಾನ್ ಪರಾಗ್ (2024) ಹಿಂದಿನ ಸಾಧಕರು.
16. ಕಗಿಸೊ ರಬಾಡ ಆವೃತ್ತಿಯ ಪವರ್ ಪ್ಲೇನಲ್ಲಿ ಗರಿಷ್ಠ ವಿಕೆಟ್ ಪಡೆದ ಟ್ರೆಂಟ್ ಬೌಲ್ಟ್ ದಾಖಲೆ ಸರಿಗಟ್ಟಿದರು. ಮೊಹಮದ್ ಶಮಿ (17 ವಿಕೆಟ್, 2023) ಅಗ್ರಸ್ಥಾನದಲ್ಲಿದ್ದಾರೆ.