ಸನ್‌ರೈಸರ್ಸ್‌-ರಾಜಸ್ಥಾನ ಎಲಿಮಿನೇಟರ್: ಗೆದ್ದವರು 2ನೇ ಕ್ವಾಲಿಫೈಯರ್‌ಗೆ ಅರ್ಹ, ರದ್ದಾದರೆ? 
ರಾಜ್ಯ

ಸನ್‌ರೈಸರ್ಸ್‌-ರಾಜಸ್ಥಾನ ಎಲಿಮಿನೇಟರ್: ಗೆದ್ದವರು 2ನೇ ಕ್ವಾಲಿಫೈಯರ್‌ಗೆ ಅರ್ಹ, ರದ್ದಾದರೆ?

ಮುಲ್ಲನ್‌ಪುರ: ಹತ್ತು ವರ್ಷ ಹಿಂದಿನ ಸಾಧನೆ ಪುನರಾವರ್ತಿಸುವ ಹಂಬಲದಲ್ಲಿರುವ ಸನ್‌ರೈಸರ್ಸ್‌ ಹೈದರಾಬಾದ್ ಹಾಗೂ ಅಸ್ಥಿರ ನಿರ್ವಹಣೆಯ ನಡುವೆಯೂ ಪ್ಲೇಆಫ್ ಹಂತಕ್ಕೇರಿರುವ ರಾಜಸ್ಥಾನ ರಾಯಲ್ಸ್ ತಂಡಗಳ ನಡುವೆ ನ್ಯೂ ಪಿಸಿಎ ಕ್ರೀಡಾಂಗಣದಲ್ಲಿ ಬುಧವಾರ ಐಪಿಎಲ್ 19ನೇ ಆವೃತ್ತಿಯ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ‘ಸೆಮಿಫೈನಲ್’ ಮಾದರಿಯ 2ನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದರೆ, ಸೋತ ತಂಡ ಟೂರ್ನಿಯಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಡಲಿದೆ. ಅಲ್ಟ್ರಾ ಆಕ್ರಮಣಕಾರಿ ಬ್ಯಾಟಿಂಗ್ ವಿಭಾಗ ಹೊಂದಿರುವ ಉಭಯ ತಂಡಗಳ ಮುಖಾಮುಖಿಯಲ್ಲಿ ರನ್‌ಮಳೆ ನಿರೀಕ್ಷೆ ಹರಡಿದೆ.
ಎಲಿಮಿನೇಟರ್‌ನಿಂದ ಫೈನಲ್‌ಗೇರಿ ಪ್ರಶಸ್ತಿ ಗೆದ್ದ ಏಕೈಕ ತಂಡ ಎನಿಸಿರುವ ಸನ್‌ರೈಸರ್ಸ್‌ 2016ರ ನಂತರ ಮತ್ತೊಂದು ಪ್ರಶಸ್ತಿಯ ನಿರೀಕ್ಷೆಯಲ್ಲಿದೆ. 2024ರಲ್ಲಿ ಪ್ರಶಸ್ತಿ ಸನಿಹ ಎಡವಿದ್ದ ಪ್ಯಾಟ್ ಕಮ್ಮಿನ್ಸ್ ಪಡೆ ಲೀಗ್‌ನಲ್ಲಿ ಆಡಿದ 14ರಲ್ಲಿ 9 ಜಯ, 5 ಸೋಲಿನೊಂದಿಗೆ 18 ಅಂಕ ಕಲೆಹಾಕಿತ್ತು. ಪ್ಯಾಟ್ ಕಮ್ಮಿನ್ಸ್ ಸೇರ್ಪಡೆ ಬಳಿಕ ಆಡಿದ 7ರಲ್ಲಿ 5 ಗೆಲುವು ಸಾಧಿಸಿದರೂ, ಅಗ್ರ-2ರಲ್ಲಿ ಸ್ಥಾನ ಪಡೆಯದ ನಡುವೆಯೂ ಸನ್‌ರೈಸರ್ಸ್‌ ಈ ಕಾದಾಟದ ಫೇವರಿಟ್ ಎನಿಸಿದೆ. ಆರಂಭಿಕ 4ರಲ್ಲಿ 4ಕ್ಕೂ ಗೆದ್ದು ಭರ್ಜರಿ ಆರಂಭ ಕಂಡಿದ್ದ ರಾಜಸ್ಥಾನ, ನಂತರ ಆಡಿದ 10ರಲ್ಲಿ 4 ಜಯ ಮಾತ್ರ ಕಂಡರೂ ಪ್ಲೇಆಫ್​ಗೇರುವಲ್ಲಿ ಯಶಸ್ವಿಯಾಗಿದೆ.ಉಭಯ ತಂಡಗಳು ಟೂರ್ನಿಯಲ್ಲಿ ಸಂಪೂರ್ಣ ವ್ಯತಿರಿಕ್ತ ರೀತಿಯ ಅಭಿಯಾನದಲ್ಲಿವೆ. ಲೀಗ್‌ನ ಎರಡು ಮುಖಾಮುಖಿಯಲ್ಲೂ ಸನ್‌ರೈಸರ್ಸ್‌ ಗೆಲುವು ಸಾಧಿಸಿದ ಮೇಲುಗೈ ಹೊಂದಿದೆ.
ರನ್‌ಮಳೆ ನಿರೀಕ್ಷೆ
ಎರಡೂ ತಂಡಗಳು ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಮೇಲೆ ಹೆಚ್ಚು ಅವಲಂಬಿತವಾಗಿವೆ. 15 ವರ್ಷದ ಬಾಲಕ ವೈಭವ್ ಸೂರ್ಯವಂಶಿ ಅಬ್ಬರಿಸಿದರೆ, ರಾಜಸ್ಥಾನ ತಂಡದ ಹಾದಿ ಬಹುತೇಕ ಸುಗಮವಾಗಲಿದೆ. ವೈಭವ್ ಇದುವರೆಗೆ 14 ಇನಿಂಗ್ಸ್‌ಗಳಲ್ಲಿ 583 ರನ್ ಕಲೆಹಾಕಿದ್ದು, ಆರೆಂಜ್ ಕ್ಯಾಪ್ ರೇಸ್‌ನಲ್ಲೂ ಮುಂಚೂಣಿಯಲ್ಲಿದ್ದಾರೆ. ಹಿಂದಿನ ಕೆಲ ಪಂದ್ಯಗಳಲ್ಲಿ ಕಾರ್ಯತಂತ್ರ ಬದಲಾಯಿಸಿರುವ ರಾಜಸ್ಥಾನ, ಇನಿಂಗ್ಸ್‌ನ ಆರಂಭದಲ್ಲಿ ಯಶಸ್ವಿ ಜೈಸ್ವಾಲ್ (397) ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದೆ. ವೈಭವ್ ಉತ್ತಮ ಆರಂಭದ ನಂತರ ರನ್‌ಗಳಿಕೆಗೆ ವೇಗ ನೀಡುತ್ತಿದ್ದಾರೆ. ಮಧ್ಯಮ ಕ್ರಮಾಂಕದ ಅಸ್ಥಿರ ನಿರ್ವಹಣೆ ಮುಂದುವರಿದಿದೆ.
ಸನ್‌ರೈಸರ್ಸ್‌ನ ಹೆನ್ರಿಕ್ ಕ್ಲಾಸೆನ್ (606), ಇಶಾನ್ ಕಿಶನ್ (569), ಅಭಿಷೇಕ್ ಶರ್ಮ (563), ಟ್ರಾವಿಸ್ ಹೆಡ್ (393) ಎದುರು ರಾಜಸ್ಥಾನ ಬೌಲರ್ಸ್‌ ಅಗ್ನಿಪರೀಕ್ಷೆ ಎದುರಿಸಲಿದ್ದು, ಜ್ರೋಾ ಆರ್ಚರ್ (21 ವಿಕೆಟ್) ನಿರ್ಣಾಯಕ ಪಾತ್ರವಹಿಸಲಿದ್ದಾರೆ. ಪ್ಯಾಟ್ ಕಮ್ಮಿನ್ಸ್ ಸೇರ್ಪಡೆ ನಂತರ ಸನ್‌ರೈಸರ್ಸ್‌ ಬೌಲಿಂಗ್ ಬಲ ಹೆಚ್ಚಿದ್ದು, ಇಶಾನ್ ಮಾಲಿಂಗ (19), ಸಾಕಿಬ್ ಹುಸೈನ್ (15) ಟ್ರಂಪ್ ಕಾರ್ಡ್ ಆಗಿದ್ದಾರೆ.
ರದ್ದಾದರೆ ರಾಜಸ್ಥಾನ ಔಟ್!
ಎಲಿಮಿನೇಟರ್ ಪಂದ್ಯ ಮಳೆಯಿಂದಾಗಿ ರದ್ದಾದರೆ ರಾಜಸ್ಥಾನ ಹೊರಬೀಳಲಿದೆ. ಕನಿಷ್ಠ 5 ಓವರ್‌ಗಳ ಪಂದ್ಯ ಅಥವಾ ಸೂಪರ್ ಓವರ್ ಕೂಡ ನಡೆಯದಿದ್ದರೆ, ಆಗ ಅಂಕಪಟ್ಟಿಯಲ್ಲಿ ಮೇಲಿನ ಸ್ಥಾನ ಪಡೆದ ತಂಡ ಮುನ್ನಡೆಯಲಿದೆ. ಇದರಿಂದ ಲೀಗ್ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದ್ದ ರಾಜಸ್ಥಾನ ಹೊರಬಿದ್ದರೆ, 3ನೇ ಸ್ಥಾನಿ ಸನ್‌ರೈಸರ್ಸ್‌ ಕ್ವಾಲಿಫೈಯರ್-2ಕ್ಕೆ ಅರ್ಹತೆ ಪಡೆಯಲಿದೆ.
ಪಿಚ್ ರಿಪೋರ್ಟ್
ಮುಲ್ಲನ್‌ಪುರ ಅಂಗಣದಲ್ಲಿ ಹಾಲಿ ಆವೃತ್ತಿಯ ಸರಾಸರಿ ಮೊತ್ತ 203 ರನ್. ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಆಡಿದ 4 ಲೀಗ್ ಪಂದ್ಯಗಳಲ್ಲಿ ಚೇಸಿಂಗ್ ಮಾಡಿದ ತಂಡ 3ರಲ್ಲಿ ಜಯಿಸಿದೆ. ಬ್ಯಾಟಿಂಗ್ ಸ್ನೇಹಿ ಅಂಗಣದಲ್ಲಿ ಟಾಸ್ ಗೆದ್ದ ತಂಡ ಚೇಸಿಂಗ್ ಆಯ್ದುಕೊಂಡರೆ, ಗೆಲುವಿನ ಫೇವರಿಟ್ ಎನಿಸಲಿದೆ. ಪಂಜಾಬ್ ವಿರುದ್ಧ ಇದೇ ಮೈದಾನದಲ್ಲಿ ಆಡಿದ ಪಂದ್ಯದಲ್ಲಿ ರಾಜಸ್ಥಾನ ಗೆಲುವು ಸಾಧಿಸಿದರೆ, ಸನ್‌ರೈಸರ್ ಸೋಲು ಅನುಭವಿಸಿತ್ತು.
ಮುಖಾಮುಖಿ: 23
ಸನ್‌ರೈಸರ್ಸ್‌:14
ರಾಜಸ್ಥಾನ: 9
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋಹಾಟ್‌ಸ್ಟಾರ್