ಮಳೆಗಾಲದಲ್ಲೂ ಬಿಸಿಲಿನ ವಾತಾವರಣ
ಬೆಂಗಳೂರು: ಮಾನ್ಸೂನ್ ದುರ್ಬಲಗೊಂಡು ಮಳೆ ಕ್ಷೀಣವಾದ ಬೆನ್ನಲ್ಲೇ ರಾಜ್ಯದಲ್ಲೆಡೆ ಮಳೆಗಾಲದಲ್ಲೂ ಬಿಸಿಲಿನ ವಾತಾವರಣ ನಿರ್ಮಾಣವಾಗುತ್ತಿದೆ. ನೀಲಿ ಆಕಾಶ ಮತ್ತು ಮೋಡಗಳು ಇಲ್ಲದಿರುವ ಪರಿಣಾಮ ಕೆಲ ಜಿಲ್ಲೆಗಳಲ್ಲಿ ಉಷ್ಣಾಂಶವೂ ಹೆಚ್ಚಳವಾಗಿದೆ.
ಎರಡು ವಾರಗಳಿಂದ ಕರಾವಳಿ ಮತ್ತು ಮಲೆನಾಡಿನ ವ್ಯಾಪ್ತಿಯ ಪ್ರದೇಶಗಳಲ್ಲಿ ಅಬ್ಬರಿಸಿದ್ದ ಮಳೆ ಈಗಾಗಲೇ ಕ್ಷೀಣವಾಗಿದೆ. ಉತ್ತರ ಮತ್ತು ದಕ್ಷಿಣ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆ ಅಭಾವ ಮುಂದುವರಿದಿದೆ. ಇನ್ನೂ ಮುಂದೆ ರಾಜ್ಯಾದ್ಯಂತ ಮಳೆ ಕೊರತೆ ಇನ್ನಷ್ಟು ಜಾಸ್ತಿಯಾಗುವ ಸಾಧ್ಯತೆ ಇದೆ.ಇದರಿಂದಾಗಿ ಕೃಷಿ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕ ಕಾಡುತ್ತಿದೆ.
ದೇಶಾದ್ಯಂತ ಈಗಾಗಲೇ ನೈಋತ್ಯ ಮಾನ್ಸೂನ್ ಆವರಿಸಿದೆ. ಮಾನ್ಸೂನ್ ಪ್ರಬಲವಾಗಿರುವ ಕಾರಣ ಉತ್ತರ ಭಾರತದಲ್ಲಿ ಮಳೆಯಾಗುತ್ತಿದೆ. ಆದರೆ. ಕರ್ನಾಟಕ ಮತ್ತು ತಮಿಳುನಾಡು ಸೇರಿ ದಕ್ಷಿಣ ಭಾರತದಲ್ಲಿ ಮಾರುತಗಳು ದುರ್ಬಲವಾಗಿವೆ. ಇದರ ಪರಿಣಾಮ ಮಳೆ ಕಡಿಮೆಯಾಗುತ್ತಿದೆ. ಪ್ರಸ್ತುತ ಅರಬ್ಬಿ ಸಮುದ್ರ ಅಥವಾ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, ಮೇಲ್ಮೈ ಸುಳಿಗಾಳಿ ಅಥವಾ ತೇವಾಂಶ ಭರಿತ ಮೋಡಗಳು ಸೃಷ್ಟಿಯಾಗಲು ಪೂರಕ ವಾತಾವರಣ ಇಲ್ಲ. ಕೆಲ ಪ್ರದೇಶಗಳಲ್ಲಿ ಮಾತ್ರ ಸಾಧಾರಣ ಮಳೆ ಸುರಿಯಲಿದೆ. ಆದರೆ, ದೊಡ್ಡ ಪ್ರಮಾಣದಲ್ಲಿ ವರ್ಷಧಾರೆಯಾಗುವುದಿಲ್ಲ. ಗಾಳಿ ವೇಗ ಜಾಸ್ತಿ ಇರಲಿದೆ ಎನ್ನುತ್ತಾರೆ ಹಿರಿಯ ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ.
ಈ ಬಾರಿ ‘ಸೂಪರ್ ಎಲ್‌ನಿನೋ’ ಮುಂಗಾರಿನ ಮೇಲೆ ಪರಿಣಾಮ ಬೀರುತ್ತಿದೆ. ಮುಂದಿನ ದಿನಗಳಲ್ಲಿ ಕರಾವಳಿ, ಮಲೆನಾಡು, ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಭೌಗೋಳಿಕ ಪ್ರದೇಶಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ. ಒಟ್ಟು ಮಳೆ ಪ್ರಮಾಣದಲ್ಲಿ ಶೇ.75 ಮಳೆಯು ಮುಂಗಾರಿನ ಅವಧಿಯಲ್ಲಿ ಸುರಿಯುತ್ತದೆ. ಆದರೆ, ಮಾನ್ಸೂನ್ ಮೇಲೆ ‘ಎಲ್ ನಿನೋ’ ಪ್ರಭಾವದಿಂದ ಅಧಿಕ ತಾಪಮಾನ ಮತ್ತು ಮಳೆ ಕುಂಠಿತ ಉಂಟಾಗಲಿದೆ.
ರಾಜ್ಯದಲ್ಲಿ ಈಗಾಗಲೇ ಶೇ.34 ಮಳೆ ಕೊರತೆಯಾಗಿದೆ. ಜೂ 1ರಿಂದ ಜು.13ವರೆಗೆ ವಾಡಿಕೆಯಂತೆ ರಾಜ್ಯಾದ್ಯಂತ 309 ಮಿಮೀ ಮಳೆಯಾಗಬೇಕಿತ್ತು. ಆದರೆ, 204 ಮಿಮೀ ಸುರಿದಿದ್ದು, ಶೇ.34 ಮಳೆ ಕುಂಠಿತವಾಗಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಕೊಪ್ಪಳ, ಕಲಬುರಗಿ ಸೇರಿ 22 ಜಿಲ್ಲೆಗಳಲ್ಲಿ ಮಳೆ ಅಭಾವ ಉಂಟಾಗಿದೆ.