ಶಾಲೆಗಳು ಪುನರಾರಂಭ 
ರಾಜ್ಯ

ಬೇಸಿಗೆ ರಜೆ ಮುಗೀತು, ನಾಳೆ ಶಾಲೆ ಆರಂಭ: ಶಾಲೆ ಆರಂಭಕ್ಕೆ ಶಿಕ್ಷಣ ಇಲಾಖೆ ಸಿದ್ಧತೆಗಳು ಹೀಗಿವೆ

ಪ್ರಮುಖ ಮುಖ್ಯಾಂಶಗಳು

  • ತಳಿರು ತೋರಣ ಕಟ್ಟಿ, ಹೂವಿನಿಂದ ಸಿಂಗಾರಗೊಳಿಸಿ ಹಬ್ಬದ ವಾತಾವರಣದಲ್ಲಿ (ಮಕ್ಕಳ ಹಬ್ಬ) ಸ್ವಾಗತಿಸಬೇಕು.
  • ಕರ್ನಾಟಕ ಪಠ್ಯಪುಸ್ತಕ ಸಂಘದ ವತಿಯಿಂದ ಇಲ್ಲಿಯವರೆಗೂ ಶೇ.90ರಷ್ಟು ಪಠ್ಯಪುಸ್ತಕಗಳನ್ನು ವಿತರಣೆ ಮಾಡಲಾಗಿದೆ.
  • ಶೂ ಮತ್ತು ಸಾಕ್ಸ್ ವಿತರಿಸಲು ಇನ್ನೂ ಸರ್ಕಾರದಿಂದ ಆದೇಶ ಹೊರಡಿಸಬೇಕಿದೆ. ಶಾಲೆಗಳು ಆರಂಭವಾದ ಸ್ವಲ್ವ ದಿನಗಳ ಬಳಿಕ ಶೂ ಮತ್ತು ಸಾಕ್ಸ್ ದೊರೆಯಬಹುದು.
  • ಮೊದಲ ಹಂತದಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ 33,708 ಹುದ್ದೆಗಳ ಪೈಕಿ 30,337 ಹುದ್ದೆಗಳನ್ನು ಹಾಗೆಯೇ ಪ್ರೌಢ ಶಾಲೆಯಲ್ಲಿ 9,730 ಅತಿಥಿ ಶಿಕ್ಷಕರನ್ನು ನೇಮಿಸಲು ಅವಕಾಶ ಕಲ್ಪಿಸಲಾಗಿದೆ.
  • ಶಾಲಾ ಮಕ್ಕಳಿಗೆ ತೊಂದರೆಯಾಗದಂತೆ ಆದ್ಯತೆ ಮೇರೆಗೆ ಶಾಲೆಗಳಿಗೆ ಗ್ಯಾಸ್ ಸಿಲಿಂಡರ್ ವಿತರಿಸುವಂತೆ ಜಾಗ್ರತೆ ವಹಿಸಲು ಎಲ್ಲ ಡಿಡಿಪಿಐಗಳಿಗೆ ಇಲಾಖೆ ತಿಳಿಸಿದೆ.
ಬೆಂಗಳೂರು: ರಾಜ್ಯಾದ್ಯಂತ ಜೂನ್ 1ರಿಂದ 2026-27ನೇ ಶೈಕ್ಷಣಿಕ ಸಾಲಿನ ಸರ್ಕಾರಿ ಶಾಲೆಗಳು ಪುನರಾರಂಭವಾಗಲಿವೆ. ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆಯು ಸಮವಸ, ಪಠ್ಯಪುಸ್ತಕ, ಬಿಸಿಯೂಟಕ್ಕೆ ಅವಶ್ಯವಿರುವ ದವಸ-ಧಾನ್ಯ, ಗ್ಯಾಸ್, ಶಾಲಾ ಕಟ್ಟಡಗಳ ದುರಸ್ತಿ... ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಕರು ಸೋಮವಾರ ಮಕ್ಕಳಿಗೆ ಹೂ ನೀಡಿ, ಸಿಹಿ ಹಂಚಿ ಶಾಲೆಗೆ ಬರಮಾಡಲಿಕೊಳ್ಳಲಿದ್ದಾರೆ.
ಬೇಸಿಗೆ ರಜೆಯ ಮೂಡ್‌ನಲ್ಲಿದ್ದ ಮಕ್ಕಳನ್ನು ಶಾಲಾ ವಾತಾವರಣಕ್ಕೆ ಒಗ್ಗಿಕೊಳ್ಳುವಂತೆ ಮಾಡುವುದಕ್ಕಾಗಿ ಮಕ್ಕಳನ್ನು ಪ್ರೀತಿಯಿಂದ ಬರಮಾಡಿಕೊಳ್ಳಲಾಗುತ್ತಿದೆ.
ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಯಾಗದಿದ್ದಲ್ಲಿ ನಿಗದಿಯಂತೆ ಮುಖ್ಯಮಂತ್ರಿ ಅವರಿಂದ ಶಿವಮೊಗ್ಗದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡಲು ಇಲಾಖೆಯು ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಕೊನೇ ಕ್ಷಣದ ಬದಲಾವಣೆಗಳಿಂದ ಕೆಪಿಎಸ್ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಎಂದಿನ ವರ್ಷದಂತೆ ಆಯಾ ಶಾಲೆಗಳಲ್ಲಿ ಕಾರ್ಯಕ್ರಮ ಆರಂಭಿಸುವ ಮೂಲಕ ಶಾಲೆಗಳು ಆರಂಭವಾಗಲಿವೆ.

ಮಕ್ಕಳ ಹಬ್ಬ ಮತ್ತು ಅದ್ದೂರಿ ಸ್ವಾಗತ:

ಹೊಸ ಶೈಕ್ಷಣಿಕ ವರ್ಷದ ಆರಂಭವನ್ನು ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತಿದೆ. ಶುಕ್ರವಾರದಿಂದಲೇ ಶಾಲೆಗಳನ್ನು ತೆರೆದು ದುಂಬು ಧೂಳು ತೆಗೆದು ಶಾಲಾ ಕಟ್ಟಡ ಮತ್ತು ಆವರಣವನ್ನು ಸ್ವಚ್ಛಗೊಳಿಸಲಾಗಿದೆ. ಸೋಮವಾರ ಶಾಲಾ ಮುಖ್ಯ ದ್ವಾರದಲ್ಲಿ ತಳಿರು ತೋರಣ ಕಟ್ಟಿ, ಹೂವಿನಿಂದ ಸಿಂಗಾರಗೊಳಿಸಿ ಹಬ್ಬದ ವಾತಾವರಣದಲ್ಲಿ (ಮಕ್ಕಳ ಹಬ್ಬ) ಸ್ವಾಗತಿಸಬೇಕು. ಮಕ್ಕಳಿಗಾಗಿ ವಿಶೇಷ ಊಟದ ವ್ಯವಸ್ಥೆ ಮಾಡುವ ಮೂಲಕ ಅವರಲ್ಲಿ ಶಾಲೆಗೆ ಬರುವ ಉತ್ಸಾಹವನ್ನು ಹೆಚ್ಚಿಸಬೇಕು ಎಂದು ಇಲಾಖೆಯು ಸೂಚನೆ ನೀಡಿದೆ.

ಶೇ90 ಪಠ್ಯಪುಸ್ತಕ ವಿತರಣೆ

ಕರ್ನಾಟಕ ಪಠ್ಯಪುಸ್ತಕ ಸಂಘದ ವತಿಯಿಂದ ಇಲ್ಲಿಯವರೆಗೂ ಶೇ.90ರಷ್ಟು ಪಠ್ಯಪುಸ್ತಕಗಳನ್ನು ವಿತರಣೆ ಮಾಡಲಾಗಿದೆ. ಒಟ್ಟಾರೆ 9.34 ಕೋಟಿ ಪಠ್ಯಪುಸ್ತಕಗಳ ಬೇಡಿಕೆ ಇತ್ತು. ಇಲ್ಲಿಯವರೆಗೂ 8.50 ಕೋಟಿಯಷ್ಟು (ಶೇ.90.77)ರಷ್ಟು ಸರಬರಾಜು ಮಾಡಲಾಗಿದೆ. ಭಾಗ-1ರ ಪಠ್ಯಪುಸ್ತಕಗಳನ್ನು ಬಹುತೇಕ ಸರಬರಾಜಾಗಿವೆ. ಭಾಗ-2ರ ಕೆಲವು ಪುಸ್ತಕಗಳು ಮತ್ತು ಅಲ್ಪಸಂಖ್ಯಾತ ಶಾಲೆಗಳ ಕೆಲ ಪುಸ್ತಕಗಳ ಸರಬರಾಜು ಬಾಕಿ ಇದೆ ಎಂದು ಸಂಘದ ವ್ಯವಸ್ಥಾಪಕ ನಿರ್ದೇಶಕ ಮಾದೇಗೌಡ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಒಂದು ಜೊತೆ ಸಮವಸಕ್ಕೆ ಸಿದ್ಧ

ಶಾಲೆ ಆರಂಭದ ದಿನವೇ ಒಂದು ಜೊತೆ ಸಮವಸ ವಿತರಿಸಲು ಸೂಚಿಸಲಾಗಿದೆ. ಕಳೆದ ವರ್ಷದ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಸಗಳನ್ನು ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಬಟ್ಟೆಯನ್ನು ವಿತರಿಸಲಾಗುತ್ತದೆ.


ಶೂ, ಸಾಕ್ಸ್ ಸ್ವಲ್ವ ವಿಳಂಬ

ಶೂ ಮತ್ತು ಸಾಕ್ಸ್ ವಿತರಿಸಲು ಇನ್ನೂ ಸರ್ಕಾರದಿಂದ ಆದೇಶ ಹೊರಡಿಸಬೇಕಿದೆ. ಶಾಲೆಗಳು ಆರಂಭವಾದ ಸ್ವಲ್ವ ದಿನಗಳ ಬಳಿಕ ಶೂ ಮತ್ತು ಸಾಕ್ಸ್ ದೊರೆಯಬಹುದು. ಆದರೆ, ಶಾಲೆಗಳ ದಿನವೇ ಶೂ ಮತ್ತು ಸಾಕ್ಸ್ ದೊರೆಯುವುದಿಲ್ಲವೆಂದು ಇಲಾಖೆ ಮೂಲಗಳು ತಿಳಿಸಿವೆ.

40,067 ಅತಿಥಿ ಶಿಕ್ಷಕರ ನೇಮಕಕ್ಕೆ ಆದೇಶ

ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಲು ಅವಕಾಶ ಕಲ್ಪಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.
ಇತ್ತೀಚೆಗಷ್ಟೆ ಸರ್ಕಾರವು ಪ್ರಾಥಮಿಕ ಶಾಲೆಗೆ ಒಟ್ಟು 40 ಸಾವಿರ ಮತ್ತು ಪ್ರೌಢ ಶಾಲೆಗೆ 11 ಸಾವಿರ ಅತಿಥಿ ಶಿಕ್ಷಕರನ್ನ ನೇಮಕ ಮಾಡಲು ಅವಕಾಶ ಕಲ್ಪಿಸಿ ಆದೇಶಿಸಿತ್ತು.
ಮೊದಲ ಹಂತದಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ 33,708 ಹುದ್ದೆಗಳ ಪೈಕಿ 30,337 ಹುದ್ದೆಗಳನ್ನು ಹಾಗೆಯೇ ಪ್ರೌಢ ಶಾಲೆಯಲ್ಲಿ 9,730 ಅತಿಥಿ ಶಿಕ್ಷಕರನ್ನು ನೇಮಿಸಲು ಅವಕಾಶ ಕಲ್ಪಿಸಲಾಗಿದೆ. ನೇಮಕಗೊಳ್ಳುವ ಅತಿಥಿ ಶಿಕ್ಷಕರಿಗೆ ಮಾಸಿಕ 12,000 ರೂ ಗೌರವ ಸಂಭಾವನೆ ನಿಗದಿ ಪಡಿಸಲಾಗಿದೆ.
ನೇಮಕಾತಿಯಲ್ಲಿ ಗ್ರಾಮೀಣ ಪ್ರದೇಶದ ಶಾಲೆಗಳು, ಶಿಕ್ಷಕರಿಲ್ಲದ ಶಾಲೆಗಳು, ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳು, ಕರ್ನಾಟಕ ಪಬ್ಲಿಕ್ ಶಾಲೆಗಳು, ದ್ವಿಭಾಷಾ ಮಾಧ್ಯಮ ಶಾಲೆಗಳು ಮತ್ತು ಆದರ್ಶ ವಿದ್ಯಾಲಯಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ಸೂಚಿಸಲಾಗಿದೆ.
ಪ್ರೌಢ ಶಾಲೆಗಳಲ್ಲಿ ಕಠಿಣ ವಿಷಯಗಳಾದ ಆಂಗ್ಲ ಭಾಷೆ, ಗಣಿತ, ವಿಜ್ಞಾನ ವಿಷಯಗಳ ಶಿಕ್ಷಕರನ್ನು ಆದ್ಯತೆಯ ಮೇಲೆ ನೇಮಿಸಬೇಕು. ಯಾವುದೇ ಶಾಲೆಯಲ್ಲಿ ಹೆಚ್ಚುವರಿ ಶಿಕ್ಷಕರಿದ್ದರೆ ಅಲ್ಲಿಗೆ ನೇಮಕ ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ.

ಎಲ್‌ಪಿಜಿ ಕೊರತೆಯಾಗದಂತೆ ಎಚ್ಚರವಹಿಸಿ

ಮಧ್ಯಪ್ರಾಚ್ಯದಲ್ಲಿನ ಯುದ್ಧದ ಕಾರಣದಿಂದ ಶಾಲೆಗಳ ಬಿಸಿಯೂಟಕ್ಕೆ ಎಲ್‌ಪಿಜಿ ಕೊರತೆಯಾಗಬಹುದು. ಆದರೆ, ಯಾವುದೇ ಕಾರಣಕ್ಕೂ ಶಾಲಾ ಮಕ್ಕಳಿಗೆ ತೊಂದರೆಯಾಗದಂತೆ ಆದ್ಯತೆ ಮೇರೆಗೆ ಶಾಲೆಗಳಿಗೆ ಗ್ಯಾಸ್ ಸಿಲಿಂಡರ್ ವಿತರಿಸುವಂತೆ ಜಾಗ್ರತೆ ವಹಿಸಲು ಎಲ್ಲ ಡಿಡಿಪಿಐಗಳಿಗೆ ಇಲಾಖೆ ತಿಳಿಸಿದೆ.