ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ
- ಧರ್ಮಸ್ಥಳದ ವಿರುದ್ಧ ದೊಡ್ಡ ಮಟ್ಟದ ಷಡ್ಯಂತ್ರ ನಡೆದಿದೆ ಎಂದು ನಾವು ಮೊದಲಿನಿಂದಲೂ ಹೇಳುತ್ತಿದ್ದೆವು. ಅದು ಈಗ ನಿಜವಾಗಿದೆ.
- ದೂರುದಾರ ಚಿನ್ನಯ್ಯ ನ್ಯಾಯಾಲಯಕ್ಕೆ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಹಲವು ಸಂಗತಿಗಳು ಬಹಿರಂಗವಾಗಿವೆ. ನಟ ಪ್ರಕಾಶ್ ರಾಜ್ ಅವರ ಹೆಸರೂ ಅದರಲ್ಲಿ ಉಲ್ಲೇಖ
- ಸ್ವತಃ ಪ್ರಕಾಶ್ ರಾಜ್ ಅವರೇ ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ಅವರನ್ನು ಭೇಟಿ ಮಾಡಿ ಚರ್ಚಿಸಿರುವುದನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಅವರಿಗೆ ತಕ್ಷಣ ನೋಟಿಸ್ ನೀಡಿ
- ಚಿನ್ನಯ್ಯನಿಗೆ ಬ್ರೇನ್ ಮ್ಯಾಪಿಂಗ್ ಪರೀಕ್ಷೆ ನಡೆಸಬೇಕು
- ಹೊಸ ಗೃಹ ಸಚಿವರು ಕೋಟ್ಯಂತರ ಭಕ್ತರ ಭಾವನೆಗೆ ನ್ಯಾಯ ಒದಗಿಸುತ್ತಾರೆ ಎಂಬ ವಿಶ್ವಾಸವಿದೆ. ಒಂದು ವೇಳೆ ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಸಮಗ್ರ ತನಿಖೆ ನಡೆಸುವಂತೆ ಮನವಿ
ಬೆಂಗಳೂರು: ಧರ್ಮಸ್ಥಳ ಪ್ರಕರಣದ ಮಾಸ್ಕ್‌ಮ್ಯಾನ್ ಚಿನ್ನಯ್ಯ ತನ್ನ ರಿಟ್ ಅರ್ಜಿಯಲ್ಲಿ ಉಲ್ಲೇಖಿಸಿದ ಎಲ್ಲ ವ್ಯಕ್ತಿಗಳನ್ನೂ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆಯ ವ್ಯಾಪ್ತಿಗೆ ಒಳಪಡಿಸಬೇಕು. ಅಲ್ಲದೆ, ಎಸ್‌ಐಟಿ ಮಧ್ಯಂತರ ವರದಿಯನ್ನು ಕೂಡಲೇ ಸಲ್ಲಿಸಬೇಕು ಎಂದು ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ಆಗ್ರಹಿಸಿದೆ.
ಬುಧವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಸಮಿತಿಯ ಚಕ್ರವರ್ತಿ ಸೂಲಿಬೆಲೆ, ವಸಂತ ಗಿಳಿಯಾರ್ ಹಾಗೂ ವಿಕಾಸ್ ಪುತ್ತೂರು ಜಂಟಿ ಸುದ್ದಿಗೋಷ್ಠಿ ನಡೆಸಿ ಒತ್ತಾಯಿಸಿದರು.
ಧರ್ಮಸ್ಥಳದ ವಿರುದ್ಧ ದೊಡ್ಡ ಮಟ್ಟದ ಷಡ್ಯಂತ್ರ ನಡೆದಿದೆ ಎಂದು ನಾವು ಮೊದಲಿನಿಂದಲೂ ಹೇಳುತ್ತಿದ್ದೆವು. ಅದು ಈಗ ನಿಜವಾಗಿದೆ. ದೂರುದಾರ ಚಿನ್ನಯ್ಯ ನ್ಯಾಯಾಲಯಕ್ಕೆ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಹಲವು ಸಂಗತಿಗಳು ಬಹಿರಂಗವಾಗಿವೆ. ನಟ ಪ್ರಕಾಶ್ ರಾಜ್ ಅವರ ಹೆಸರೂ ಅದರಲ್ಲಿ ಉಲ್ಲೇಖವಾಗಿದೆ. ಇಂದು ಸ್ವತಃ ಪ್ರಕಾಶ್ ರಾಜ್ ಅವರೇ ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ಅವರನ್ನು ಭೇಟಿ ಮಾಡಿ ಚರ್ಚಿಸಿರುವುದನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಅವರಿಗೆ ತಕ್ಷಣ ನೋಟಿಸ್ ನೀಡಿ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು.
ಮಾಸ್ಕ್ ಮ್ಯಾನ್‌ಗೆ ಹೊರಗಿನವರ ನಿರ್ದೇಶನ
ಧರ್ಮಸ್ಥಳದಲ್ಲಿ ಮಹಿಳೆಯರ ಶವಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿದ ಚಿನ್ನಯ್ಯ, ಎಸ್‌ಐಟಿ ಜತೆಯಲ್ಲಿದ್ದಾಗ ಮುಖಕ್ಕೆ ಮಾಸ್ಕ್ ಧರಿಸಿದ್ದ. ಆ ಮಾಸ್ಕ್ ಅನ್ನು ಎಸ್‌ಐಟಿ ಹಾಕಿರಲಿಲ್ಲ. ಬದಲಾಗಿ, ಹೊರಗಿನಿಂದ ನಿರ್ದೇಶನ ನೀಡುತ್ತಿದ್ದವರು ಆತನಿಗೆ ಮಾಸ್ಕ್ ಧರಿಸುವಂತೆ ಸೂಚಿಸಿದ್ದರು ಎಂದು ಆರೋಪಿಸಿದರು.
ತಾನು ಶವಗಳನ್ನು ಹೂತಿದ್ದೇನೆ ಎಂದು ಹೇಳಿದ ಸ್ಥಳಗಳನ್ನು ತೋರಿಸುವಾಗಲೂ ಚಿನ್ನಯ್ಯ ಕಿವಿಯಲ್ಲಿ ಇಯರ್‌ಫೋನ್ ಧರಿಸಿದ್ದ. ಅದನ್ನು ಮರೆಮಾಚಲು ಮಾಸ್ಕ್ ಬಳಸಲಾಗಿತ್ತು. ಇದರಿಂದ ಹೊರಗಿನಿಂದ ಯಾರೋ ಆತನಿಗೆ ನಿರ್ದೇಶನ ನೀಡುತ್ತಿದ್ದರು ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.
ಬ್ರೇನ್ ಮ್ಯಾಪಿಂಗ್ ಪರೀಕ್ಷೆ ನಡೆಸಿ:
ಈ ಪ್ರಕರಣದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಜೈಲಿಗೆ ಹೋದರೆ ಚಿನ್ನಯ್ಯನಿಗೆ 50 ಲಕ್ಷ ರೂ. ಹಾಗೂ ಮನೆ ಕಟ್ಟಿಕೊಡುವ ಭರವಸೆ ನೀಡಲಾಗಿತ್ತು ಎಂಬುದನ್ನು ರಿಟ್ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ಚಿನ್ನಯ್ಯನಿಗೆ ಬ್ರೇನ್ ಮ್ಯಾಪಿಂಗ್ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡ ಇದು ಷಡ್ಯಂತ್ರ ಎಂದು ಹೇಳಿದ್ದಾರೆ. ದಕ್ಷಿಣ ಕನ್ನಡದ ಮಾಜಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಎಡಪಂಥೀಯರ ಒತ್ತಡದಿಂದ ಎಸ್‌ಐಟಿ ರಚಿಸಲಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಎಸ್‌ಐಟಿ ರಚನೆಗೂ ಮುನ್ನವೇ ಪ್ರಣಬ್ ಮೊಹಾಂತಿ ಅವರನ್ನೇ ಎಸ್‌ಐಟಿ ಮುಖ್ಯಸ್ಥರನ್ನಾಗಿ ನೇಮಿಸಬೇಕೆಂದು ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು ಎಂದು ಆರೋಪಿಸಿದರು.
ಚಿನ್ನಯ್ಯ ಬ್ರೇನ್ ಮ್ಯಾಪಿಂಗ್ ಪರೀಕ್ಷೆಗೆ ಒಪ್ಪಿಕೊಂಡಿದ್ದ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ಸಂಬಂಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರೂ ಸರ್ಕಾರ ಎಸ್‌ಐಟಿ ರಚಿಸಿತು. ಆದರೆ, ಈವರೆಗೆ ಎಸ್‌ಐಟಿ ಮಧ್ಯಂತರ ವರದಿಯನ್ನು ಸಲ್ಲಿಸಿಲ್ಲ. ಆದ್ದರಿಂದ ಅಂದಿನ ಮಾಹಿತಿ ತಂತ್ರಜ್ಞಾನ ಸಚಿವ/ಇಂದಿನ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸರ್ಕಾರ ಕೂಡಲೇ ಮಧ್ಯಂತರ ವರದಿಯನ್ನು ಸಾರ್ವಜನಿಕಗೊಳಿಸಬೇಕು ಎಂದು ಆಗ್ರಹಿಸಿದರು.
ಜನಾಗ್ರಹ ಸಭೆಗಳ ಆಯೋಜನೆ
ಧರ್ಮಸ್ಥಳ ಮಾತ್ರವಲ್ಲ, ಕರ್ನಾಟಕ ಹಾಗೂ ದೇಶದ ವಿವಿಧ ಹಿಂದೂ ಧಾರ್ಮಿಕ ಕ್ಷೇತ್ರಗಳ ವಿರುದ್ಧವೂ ಷಡ್ಯಂತ್ರ ರೂಪಿಸಲಾಗಿದೆ ಎಂದು ಆರೋಪಿಸಿದರು. ಧರ್ಮಸ್ಥಳ ಪ್ರಕರಣದಲ್ಲಿ 200 ರೂ. ಕೋಟಿ ಡೀಲ್ ಕುರಿತು ಕೂಡ ರಿಟ್ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಇಷ್ಟು ದೊಡ್ಡ ಮೊತ್ತದ ಹಣವನ್ನು ಯಾರು ಒದಗಿಸಿದರು? ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬುದು ಬಹಿರಂಗವಾಗಬೇಕು ಎಂದು ಒತ್ತಾಯಿಸಿದರು.
ಈ ಹಿನ್ನೆಲೆಯಲ್ಲಿ ಸಮಿತಿಯು ಜನಾದೇಶದ ಮೊರೆ ಹೋಗಲಿದ್ದು, ಈಗಾಗಲೇ ವಿವಿಧೆಡೆ ನಡೆಸಿರುವ ಜನಾಗ್ರಹ ಸಭೆಗಳನ್ನು ಮತ್ತಷ್ಟು ವ್ಯಾಪಕವಾಗಿ ಆಯೋಜಿಸಲಾಗುವುದು ಎಂದು ತಿಳಿಸಿದರು.
"
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ದೊರಕಿಸಿಕೊಡಬೇಕು. ಹೊಸ ಗೃಹ ಸಚಿವರು ಕೋಟ್ಯಂತರ ಭಕ್ತರ ಭಾವನೆಗೆ ನ್ಯಾಯ ಒದಗಿಸುತ್ತಾರೆ ಎಂಬ ವಿಶ್ವಾಸವಿದೆ. ಒಂದು ವೇಳೆ ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಸಮಗ್ರ ತನಿಖೆ ನಡೆಸುವಂತೆ ಮನವಿ ಮಾಡಲಾಗುವುದು.
— - ಚಕ್ರವರ್ತಿ ಸೂಲಿಬೆಲೆ, ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ