ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದ ಮುಖ್ಯರಸ್ತೆಯಲ್ಲಿನ ಬೀದಿದೀಪ ನಿರ್ವಹಣೆಯಿಲ್ಲದೆ ಹಾಳಾಗಿರುವುದು.
ಚಿಂಚೋಳಿ: ಪ್ರಮುಖ ವಾಣಿಜ್ಯ ಕೇಂದ್ರ ಸುಲೇಪೇಟದ ಪ್ರಮುಖ ರಸ್ತೆಗಳಲ್ಲಿ ರಾತ್ರಿ ವೇಳೆ ಕತ್ತಲೆ ಆವರಿಸಿದ್ದು, ಬೀದಿದೀಪಗಳು ವರ್ಷದಿಂದ ಬೆಳಗದೆ ಇರುವುದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವಾಹನ ಸವಾರರು ನಿತ್ಯ ಕತ್ತಲಲ್ಲೆ ಸಂಚರಿಸುವ ಸ್ಥಿತಿ ಎದುರಾಗಿದೆ.
ಸೌಂದಯೀರ್ಕರಣ ಹಾಗೂ ಪ್ರಗತಿ ಹೆಸರಿನಲ್ಲಿ ಪಟ್ಟಣದಲ್ಲಿ ಮುಖ್ಯರಸ್ತೆಯಲ್ಲಿ ಡಿವೈಡರ್ ನಿರ್ಮಿಸಿ, ಅದರಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ. ಲಕ್ಷಾಂತರ ರೂ. ಹಣ ರ್ಖಚಾದರೂ ಜನರಿಗೆ ಮಾತ್ರ ಉಪಯೋಗವಿಲ್ಲದಂತಾಗಿದೆ. ಮುಖ್ಯರಸ್ತೆಯಲ್ಲಿ ಬೀದಿದೀಪಗಳು ಕೆಟ್ಟು ವರ್ಷವೇ ಉರುಳಿದ್ದು, ಯಾರೊಬ್ಬರೂ ಗಮನಹರಿಸುತ್ತಿಲ್ಲ.
ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ನಿತ್ಯ ಸಾವಿರಾರು ವಾಹನಗಳು, ಲಾರಿಗಳು ಹಾಗೂ ಸಾರಿಗೆ ಬಸ್ಗಳು ಈ ರಸ್ತೆಯಲ್ಲೆ ಹಾದುಹೋಗುತ್ತವೆ. ಸೂರ್ಯ ಮುಳುಗುತ್ತಿದ್ದಂತೆ ರಸ್ತೆಯುದ್ದಕ್ಕೂ ಕತ್ತಲು ಆವರಿಸುವುದರಿಂದ ವಾಹನ ಸವಾರರಿಗೆ ರಸ್ತೆ ಮಧ್ಯೆ ಇರುವ ಡಿವೈಡರ್ ಕಾಣಿಸದೆ ಅಪಘಾತಗಳು ಸಂಭವಿಸುತ್ತಿವೆ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಈ ಬಗ್ಗೆ ಕಾಳಜಿ ವಹಿಸಬೇಕಿದೆ. ಮುಖ್ಯರಸ್ತೆಯಲ್ಲಿನ ಕಂಬಗಳಿಗೆ ವಿದ್ಯುತ್ ಸಂಪರ್ಕ ಪುನ@ ಕಲ್ಪಿಸಿ, ಬಿದಿದೀಪಗಳನ್ನು ದುರಸ್ತಿ ಮಾಡಬೇಕು. ಜತೆಗೆ ಬೀದಿ ದೀಪಗಳ ನಿರ್ವಹಣೆಯಲ್ಲಿ ಅಧಿಕಾರಿಗಳು ಹೆಚ್ಚಿನ ಗಮನಹರಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
"
ಬೀದಿದೀಪಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಸ್ಥಳಿಯ ಗ್ರಾಮ ಪಂಚಾಯಿತಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮೌಖಿಕ ಹಾಗೂ ಲಿಖಿತ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ವಾಣಿಜ್ಯ ನಗರಿ ಎಂಬ ಹೆಗ್ಗಳಿಕೆ ಹೊಂದಿದ್ದರು, ಪ್ರಗತಿ ಕಾರ್ಯ ಮಾತ್ರ ಶೂನ್ಯವಾಗಿದೆ.
— > ಆತೀಶ ಪವಾರ್, ಸ್ಥಳಿಯ ನಿವಾಸಿ
"
ಸುಲೇಪೇಟದಲ್ಲಿನ ಬೀದಿದೀಪಗಳ ಸಮಸ್ಯೆಯನ್ನು ಈಗಾಗಲೇ ಸಾರ್ವಜನಿಕರು ಗಮನಕ್ಕೆ ತಂದಿದ್ದಾರೆ. ಅನುದಾನದ ಕೊರತೆಯಿಂದಾಗಿ ದುರಸ್ಥಿ ಕಾರ್ಯ ಸಾಧ್ಯವಾಗಿಲ್ಲ. ಸಮರ್ಪಕ ಬಜೆಟ್ ಲಭಿಸಿದ ನಂತರ ದುರಸ್ಥಿಗೆ ಮುಂದಾಗುತ್ತೇವೆ.
— > ಸಂತೋಷಕುಮಾರ ಚವ್ಹಾಣ್, ನೋಡಲ್ ಅಧಿಕಾರಿ, ಗ್ರಾಪಂ, ಸುಲೇಪೇಟ