ಕುಂತೂರು ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯಲ್ಲಿ ಸಕಾಲಕ್ಕೆ ಕಬ್ಬು ಅರೆಯದ ಕಾರಣ ಕಾರ್ಖಾನೆ ಮುಂಭಾಗ ಲಾರಿಗಳು ಸಾಲುಗಟ್ಟಿ ನಿಂತಿರುವುದು.
- ಕುಂತೂರು ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಯೂನಿಟ್-3
- ಟಾವು ಮಾಡಿದ ಕಬ್ಬನ್ನು ಸಕಾಲಕ್ಕೆ ಅರೆಯದ
ಕೊಳ್ಳೇಗಾಲ:
ತಾಲೂಕಿನ ಕುಂತೂರು ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಯೂನಿಟ್-3 ರಲ್ಲಿ ಕಟಾವು ಮಾಡಿದ ಕಬ್ಬನ್ನು ಸಕಾಲಕ್ಕೆ ಅರೆಯದ ಪರಿಣಾಮ ಕಬ್ಬಿನ ತೂಕ ಹಾಗೂ ಇಳುವರಿ ಕಡಿಮೆಯಾಗಿ ನಷ್ಟ ಉಂಟಾಗುತ್ತಿದೆ ಎಂದು ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ.
ಜಮೀನಿನಲ್ಲಿ ಕಟಾವು ಮಾಡಿದ ಕಬ್ಬನ್ನು ಆರೇಳು ದಿನವಾದ ಬಳಿಕ ತೂಕ ಮಾಡಲಾಗುತ್ತಿದ್ದು, ಅಷ್ಟರಲ್ಲಾಗಲೇ ಕಬ್ಬು ಒಣಗಿ ತೂಕ ಕಡಿಮೆಯಾಗುವುದರ ಜತೆಗೆ ಇಳುವರಿ ಕುಗ್ಗುತ್ತಿದೆ. ಇದರಿಂದ ಈ ಭಾಗದ ರೈತರಿಗೆ ಸಾವಿರಾರೂ ರೂ. ನಷ್ಟವಾಗುತ್ತಿದೆ ಎಂಬುದು ರೈತರ ಆರೋಪ. ಕಬ್ಬನ್ನು ಕಟಾವು ಮಾಡಿದ ನಂತರ ಲಾರಿ ಮತ್ತು ಟ್ರ್ಯಾಕ್ಟರ್‌ಗಳಿಗೆ ಕಬ್ಬು ತುಂಬಿಕೊಳ್ಳುವ ಕಾರ್ಖಾನೆ ಅಧಿಕಾರಿಗಳು ತಕ್ಷಣವೇ ವೇಬ್ರಿಡ್ಜ್‌ನಲ್ಲಿ ತೂಕ ಮಾಡದೆ ಫ್ಯಾಕ್ಟರಿ ಮುಂಭಾಗ ನಿಲ್ಲಿಸಿಕೊಳ್ಳುತ್ತಿದ್ದಾರೆ. ಇದ್ದರಿಂದ ಅನ್ಯಾಯ ಆಗುತ್ತಿದೆ ಎಂಬುದು ರೈತರ ಅಳಲು.
ಕುಂತೂರು ಸಕ್ಕರೆ ಕಾರ್ಖಾನೆಯಲ್ಲಿ ದಿನಕ್ಕೆ 3500 ರಿಂದ 4500 ಟನ್‌ಗಳಷ್ಟು ಕಬ್ಬು ನುರಿಯುವ ಸಾಮರ್ಥ್ಯವಿದೆ. ಈ ನಡುವೆ ನಂಜನಗೂಡಿನಲ್ಲಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಯೂನಿಟ್-2 ನಿಂದ ಬರುವ ಕಬ್ಬನ್ನು ಕುಂತೂರು ಸಕ್ಕರೆ ಕಾರ್ಖಾನೆಯಲ್ಲಿ ಅರೆಯಲಾಗುತ್ತಿದೆ. ಇದರಿಂದ ಈ ಭಾಗದ ರೈತರ ಕಬ್ಬನ್ನು ಸಕಾಲಕ್ಕೆ ಅರೆಯಲು ತಡವಾಗುತ್ತಿದೆ.
ಪರಿಹಾರ ನೀಡಲು ಒತ್ತಾಯ: ಕಬ್ಬು ಕಟಾವು ಬಳಿಕ ಹಸಿ ಸೋಗಿನಲ್ಲಿ ಕಬ್ಬನ್ನು ಕಟ್ಟಿ ಬ್ಯಾಡಿಂಗ್ ಮಾಡುವುದರಿಂದ ಕಾರ್ಖಾನೆ ವತಿಯಿಂದ ತೂಕದಲ್ಲಿ ತೊಂಡೆ ಮತ್ತು ಸೋಗು (ಶೇ.7ರಷ್ಟು ವೇಸ್ಟೇಜ್) ಕಳೆಯುತ್ತಾರೆ. ಇದರಿಂದ ಕನಿಷ್ಠ 1 ಟನ್ ಕಬ್ಬಿಗೆ 10 ಕೆಜಿ ಕಬ್ಬು ವ್ಯರ್ಥವಾಗುತ್ತದೆ. ಅದಲ್ಲದೆ, ಕಬ್ಬು ಕಟಾವು ಮಾಡಿಕೊಂಡ ಬಳಿಕ ಸಕಾಲಕ್ಕೆ ಅರೆಯದೆ ಆರೇಳು ದಿನವಾದರೂ ಲಾರಿಯಲ್ಲಿಯೇ ಫ್ಯಾಕ್ಟರಿ ಮುಂದೆ ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ಕಬ್ಬು ಒಣಗಿ ಟನ್‌ಗಟ್ಟಲೇ ಕಬ್ಬಿನ ತೂಕ ಕಡಿಮೆಯಾಗುತ್ತದೆ. ಈ ನಷ್ಟವನ್ನು ಕಟ್ಟಿ ಕೊಡಿ ಎಂದು ಕಾರ್ಖಾನೆ ಅಧಿಕಾರಿಗಳನ್ನು ರೈತರು ಪ್ರಶ್ನೆ ಮಾಡುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ಹಾಗಾಗಿ ಜಿಲ್ಲಾಡಳಿತ ರೈತರಿಗೆ ಆಗಿರುವ ನಷ್ಟಕ್ಕೆ ಪರಿಹಾರ ಕೊಡಿಸಬೇಕು ಎಂಬುದು ರೈತರ ಆಗ್ರಹ.
ಕುಂತೂರು ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಯೂನಿ ಟ್-3 ನಲ್ಲಿ ಸಕಾಲಕ್ಕೆ ಕಬ್ಬನ್ನು ಅರೆಯಲಾಗುತ್ತಿಲ್ಲ. ಆರೇಳು ದಿನಗಳ ಕಾಲ ತಡವಾಗುತ್ತಿದೆ. ಇದರಿಂದ ತೂಕ ಮತ್ತು ಇಳುವರಿ ಕಡಿಮೆಯಾಗಿ ರೈತನಿಗೆ ನಷ್ಟವಾಗುತ್ತಿದೆ. ನಂಜನಗೂಡಿನ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ಯೂನಿಟ್-2 ಕಡೆಯಿಂದಲೂ ಕುಂತೂರು ಕಾರ್ಖಾನೆಗೆ ಕಬ್ಬು ಸರಬರಾಜು ಆಗುತ್ತಿರುವುದರಿಂದ ಈ ಭಾಗದ ರೈತರ ಕಬ್ಬಿಗೆ ಆದ್ಯತೆ ಸಿಗದೆ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಈ ನಷ್ಟವನ್ನು ರೈತರು ಹೊರಬೇಕೇ ಅಥವಾ ಕಾರ್ಖಾನೆ, ಸರ್ಕಾರ ಹೊರಬೇಕೇ ಎಂಬುದು ರೈತರ ಪ್ರಶ್ನೆಯಾಗಿದೆ. ಈಗಾಗಲೇ ಮೌಖಿಕವಾಗಿ ಜಿಲ್ಲಾಧಿಕಾರಿ ಹಾಗೂ ಕಾರ್ಖಾನೆ ಅಧಿಕಾರಿಗಳ ಗಮನ ಸೆಳೆಯಲಾಗಿದೆ. ಮುಂದಿನ ದಿನಗಳಲ್ಲಿ ಪರಿಹಾರ ನೀಡುವಂತೆ ಹೋರಾಟ ಮಾಡಲಾಗುವುದು.
ಕುಂತೂರು ನಂಜುಂಡಸ್ವಾಮಿ ಕಬ್ಬು ಬೆಳೆಗಾರ, ಕುಂತೂರು ಗ್ರಾಮ
ನಾನು 4 ಎಕರೆಯಲ್ಲಿ ಕಬ್ಬು ಬೆಳೆದಿದ್ದೇನೆ. ಕಳೆದ 15 ದಿನಗಳಿಂದ ಕಬ್ಬು ಕಟಾವಾಗುತ್ತಿದೆ. ಇನ್ನು 1 ಎಕರೆ ಕಬ್ಬು ಇದೀಗ ಕಟಾವುಗುತ್ತಿದೆ. ಒಂದು ಟ್ರ್ಯಾಕ್ಟರ್ ಕಬ್ಬು ತೂಕ ಮಾಡಲು ಏಂಟತ್ತು ದಿನ ಆಗುತ್ತಿದೆ. ಇದ್ದರಿಂದ ತೂಕ ಮತ್ತು ಇಳುವರಿ ಕಡಿಮೆ ಆಗಿ ನಷ್ಟವಾಗುತ್ತಿದೆ. ಇದರಿಂದ ಏನು ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ.
ಬಾಬು ಕಬ್ಬು ಬೆಳೆದಿರುವ ರೈತ, ಕುಂತೂರು ಗ್ರಾಮ
ನಂಜನಗೂಡು ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಯೂನಿಟ್-2 ಆರಂಭವಾಗಿಲ್ಲ. ಈ ಸಮಸ್ಯೆಯಿಂದಾಗಿ ಅಲ್ಲಿನ ರೈತರ ಮನವಿ ಮೇರೆಗೆ ಯೂನಿಟ್-2 ಕಡೆಯಿಂದ ಬರುವ ರೈತರ ಕಬ್ಬನ್ನು ಸೇರಿದಂತೆ ಕುಂತೂರಿನ ಯೂನಿಟ್ -3 ಕಾರ್ಖಾನೆಯಲ್ಲಿ 4400 ಟನ್ ಕಬ್ಬನ್ನು ಅರೆಸಲಾಗುತ್ತಿತ್ತು. ಇದರಿಂದಾಗಿ ಈ ಭಾಗದ ರೈತರು ನಮ್ಮ ಕಬ್ಬಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ಯೂನಿಟ್-2 ನಿಂದ ಬರುವ ಕಬ್ಬನ್ನು ಕಡಿಮೆ ಮಾಡಿ ನಮ್ಮ ಭಾಗದ ರೈತರ ಕಬ್ಬಿಗೆ ಆದ್ಯತೆ ನೀಡಿ ಅನುಕೂಲ ಮಾಡಲಾಗುತ್ತಿದೆ. ಕಟಾವಾದ ಬಳಿಕ ಸಕಾಲಕ್ಕೆ ಕಬ್ಬು ಅರೆಯಲು ಕ್ರಮವಹಿಸಲಾಗುತ್ತಿದೆ.
ಮುತ್ತು ಕುಮಾರನ್ ಮುಖ್ಯ ವ್ಯವಸ್ಥಾಪಕ, ಕುಂತೂರು ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಯೂನಿಟ್-3
ಕುಂತೂರು ಸಕ್ಕರೆ ಕಾರ್ಖಾನೆಯಲ್ಲಿ ಸಕಾಲಕ್ಕೆ ಕಬ್ಬು ಅರೆಯದೆ ರೈತರಿಗೆ ನಷ್ಟ ಉಂಟಾಗುತ್ತಿರುವ ಬಗ್ಗೆ ರೈತರು ನನ್ನ ಗಮನ ಸೆಳೆದಿದ್ದಾರೆ. ಕಬ್ಬು ಕಟಾವು ಮಾಡಿಕೊಂಡ ಬಳಿಕ ಕಾರ್ಖಾನೆ ಅಧಿಕಾರಿಗಳು ನಿಯಮದಂತೆ ನಿಗದಿತ ಸಮಯದಲ್ಲಿ ಕಬ್ಬನ್ನು ತೂಕ ಮಾಡಿ ಅರೆದು ರೈತರಿಗೆ ನ್ಯಾಯ ಕೊಡಬೇಕು. ಕಟಾವು ಮಾಡಿದ ಹೆಚ್ಚು ದಿನ ಕಬ್ಬನ್ನು ಕೊಳ್ಳುವಂತಿಲ್ಲ. ಆಹಾರ ಇಲಾಖೆ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಬೇಕಿದೆ. ರೈತರ ದೂರಿನ ಬಗ್ಗೆ ಜಿಲ್ಲಾಧಿಕಾರಿ ಗಮನ ಸೆಳೆಯಲಾಗುವುದು.
ಬಸವರಾಜು ತಹಸಿಲ್ದಾರ್, ಕೊಳ್ಳೇಗಾಲ